ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಏರಿಕೆ ಮಾಡಿದೆ. 2023ರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕ ಬಡ್ಡಿದರವನ್ನು ಕೇಂದ್ರ ಸರ್ಕಾರವು 30 ಮೂಲಾಂಕ ಹೆಚ್ಚಳ ಮಾಡಿದೆ. ಕಳೆದ ತ್ರೈಮಾಸಿಕದಲ್ಲಿಯೂ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಏರಿಕೆ ಮಾಡಿದೆ. ಇನ್ನು ಹಲವಾರು ಮಂದಿ ಫಿಕ್ಸಿಡ್ ಡೆಪಾಸಿಟ್‌ಗೂ ಉತ್ತಮ ಆಯ್ಕೆ ಈ ಸಣ್ಣ ಉಳಿತಾಯ ಯೋಜನೆಗಳಾಗಿದೆ.
ಕೇಂದ್ರ ಹಣಕಾಸು ಸಚಿವಾಲಯವು ಈ ಸುತ್ತೋಲೆಯನ್ನು ಜೂನ್ 30ರಂದು ಹೊರಡಿಸಿದೆ. ಈ ಬಡ್ಡಿದರ ಪರಿಷ್ಕರಣೆಯ ಬಳಿಕ ಒಂದು ಹಾಗೂ ಎರಡು ವರ್ಷದ ಅಂಚೆ ಕಚೇರಿ ಟೈಮ್ ಡೆಪಾಸಿಟ್, ಐದು ವರ್ಷ ರೆಕ್ಯೂರಿಂಗ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಳವಾಗಲಿದೆ. ಇನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಡ್ಡಿದರವು ಸ್ಥಿರವಾಗಿದ್ದು, ಶೇಕಡ 7.1ರಷ್ಟಿದೆ. ಸಣ್ಣ ಉಳಿತಾಯ ಯೋಜನೆಗೆ ಎಷ್ಟು ಬಡ್ಡಿದರ ಇದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಸಣ್ಣ ಉಳಿತಾಯ ಯೋಜನೆಯ ಬಡ್ಡಿದರ ಎಷ್ಟಿದೆ?
ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲನೆ ಮಾಡುತ್ತದೆ. ಸಣ್ಣ ಉಳಿತಾಯ ಯೋಜನೆಗೆ ಬಡ್ಡಿದರವನ್ನು ಲೆಕ್ಕ ಹಾಕುವ ಸೂತ್ರವನ್ನು ಶ್ಯಾಮಲಾ ಗೋಪಿನಾಥ್ ಸಮಿತಿ ನೀಡಿದೆ. ವಿವಿಧ ಯೋಜನೆಗಳ ಬಡ್ಡಿದರಗಳು ಒಂದೇ ರೀತಿಯ ಮೆಚ್ಯೂರಿಟಿಯ ಸರ್ಕಾರಿ ಬಾಂಡ್‌ಗಳ ಇಳುವರಿಗಿಂತ 25-100 ಬಿಪಿಎಸ್ ಹೆಚ್ಚಿರಬೇಕು ಎಂದು ಸಮಿತಿ ಸೂಚಿಸಿದೆ.
ಕಳೆದ ಬಾರಿ ಬಡ್ಡಿದರ ಏರಿಕೆ
ಏಪ್ರಿಲ್-ಜೂನ್ 2023 ತ್ರೈಮಾಸಿಕಕ್ಕೆ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು 70 ಬಿಪಿಎಸ್‌ವರೆಗೆ ಹೆಚ್ಚಳ ಮಾಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಎಲ್ಲಾ ಅಂಚೆ ಕಚೇರಿ ಟರ್ಮ್ ಡೆಪಾಸಿಟ್ ಮತ್ತು ಸುಕನ್ಯಾ ಸಮೃದ್ಧಿ ಖಾತೆ ಯೋಜನೆಗಳಂತಹ ಯೋಜನೆಗಳ ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮೇಲಿನ ಬಡ್ಡಿ ದರವನ್ನು ಸ್ಥಿರವಾಗಿರಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 2022 ರಿಂದ ಪ್ರಮುಖ ದರಗಳನ್ನು ಹೆಚ್ಚಳ ಮಾಡುತ್ತಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ದಶಕಗಳಿಂದ ಅತೀ ಕಡಿಮೆ ಬಡ್ಡಿದರವನ್ನು ಎಫ್‌ಡಿಯಿಂದ ಪಡೆಯುತ್ತಿದ್ದ ಹೂಡಿಕೆದಾರರಿಗೆ ಈಗ ಉತ್ತಮ ಬಡ್ಡಿದರ ಲಭ್ಯವಿದೆ. ಆದರೆ ಕಳೆದ ಎರಡು ಎಂಪಿಸಿ ಸಭೆಯ ಬಳಿಕ ಆರ್‌ಬಿಐ ರೆಪೋ ದರ ಏರಿಕೆಗೆ ಬ್ರೇಕ್ ಹಾಕಿದೆ, ಪ್ರಸ್ತುತ ರೆಪೋ ದರ ಸ್ಥಿರವಾಗಿದ್ದು, ಶೇಕಡ 6.5ರಷ್ಟಿದೆ. ಈ ನಡುವೆ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಇಳಿಕೆ ಮಾಡುತ್ತಿದೆ.
ಎಫ್‌ಡಿ, ಬ್ಯಾಂಕ್ ಉಳಿತಾಯ ಯೋಜನೆ ಅಥವಾ ಸಣ್ಣ ಉಳಿತಾಯ ಯೋಜನೆ?
ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿದ್ದರೂ ಸಹ, ಅನೇಕ ಸಣ್ಣ ಉಳಿತಾಯ ಯೋಜನೆಗಳು ಇನ್ನೂ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಎಸ್‌ಬಿಐ 7 ದಿನದಿಂದ 10 ವರ್ಷಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಫೆಬ್ರವರಿ 15, 2023ರಿಂದ ಜಾರಿಗೆ ಬರುವಂತೆ ಶೇಕಡ 3ರಿಂದ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್‌ಡಿ ಮೇಲೆ ಎಸ್‌ಬಿಐನಲ್ಲಿ ಹೆಚ್ಚುವರಿಯಾಗಿ ಶೇಕಡ 0.5ರಷ್ಟು ಪಡೆಯಬಹುದು. ಅಂದರೆ ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 3.5ರಿಂದ ಶೇಕಡ 7.5ರಷ್ಟು ಬಡ್ಡಿದರ ನೀಡಲಾಗುತ್ತದೆ.
ಫಿಕ್ಸಿಡ್ ಡೆಪಾಸಿಟ್ ಹೊರತಾಗಿ, ಕೆಲವು ದೊಡ್ಡ ಬ್ಯಾಂಕ್‌ಗಳು ನೀಡುವ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳು ಅಂಚೆ ಕಚೇರಿಯ ಉಳಿತಾಯ ಖಾತೆಯ ಬಡ್ಡಿ ದರಕ್ಕಿಂತ ಕಡಿಮೆಯಾಗಿದೆ. ಅಂಚೆ ಕಚೇರಿ ಉಳಿತಾಯ ಖಾತೆಯು ಪ್ರಸ್ತುತ ಶೇಕಡ 4ರಷ್ಟು ಬಡ್ಡಿದರವನ್ನು ನೀಡುತ್ತದೆ. ಆದರೆ ಎಸ್‌ಬಿಐನ ಉಳಿತಾಯ ಖಾತೆಯಲ್ಲಿ ವಾರ್ಷಿಕವಾಗಿ ಶೇಕಡ 2.7ರಷ್ಟು ಬಡ್ಡಿದರವನ್ನು ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ಅದೇ ರೀತಿ ಐಸಿಐಸಿಐ ಬ್ಯಾಂಕ್ ವಾರ್ಷಿಕ ಬಡ್ಡಿದರ ಶೇಕಡ 3-3.5ರಷ್ಟಿದೆ.


Click it and Unblock the Notifications