ಏನಾದರೊಂದು ಬ್ಯುಸಿನೆಸ್ (Business) ಶುರು ಮಾಡ್ಬೇಕು, ಲಾಭ ಗಳಿಸ್ಬೇಕು ಎಂದು ಹೆಚ್ಚಿನವರು ಕನಸು ಕಾಣುತ್ತಾರೆ. ಆದ್ರೆ ಏನ್ ಮಾಡೋದು ಕೆಲವು ಬ್ಯುಸಿನೆಸ್ ಲಾಭ ಕೊಟ್ರೆ, ಇನ್ನೂ ಕೆಲವು ವ್ಯವಹಾರಗಳು ಸಂಪೂರ್ಣವಾಗಿ ನಷ್ಟ ಅನುಭವಿಸುತ್ತಾರೆ. ಆದ್ರೆ ಪಂಜಾಬ್‌ನ ಪಟಿಯಾಲ ಜಿಲ್ಲೆಯ ಖೇರಿ ಜಟ್ಟಾನ್ ಗ್ರಾಮದ ಯುವಕ, ತನ್ನ ಡೈರಿ ಫಾರ್ಮ್ (Dairy Farm) ಮೂಲಕ ಇಂದು ಲಕ್ಷಾಧಿಪತಿಯಾಗಿದ್ದಾರೆ. ಸಿಕಂದರ್ ಸಿಂಗ್ ಸ್ವೈಚ್ (Sikandar Singh Swaich) ಎಂಬವರು ತಮ್ಮ ಕಠಿಣ ಪರಿಶ್ರಮ ಮತ್ತು ನಿಖರ ಗುರಿಯಿಂದಾಗಿ ಇಂದು ಯಶಸ್ವಿ ರೈತರಾಗಿದ್ದಾರೆ. ಒಂದು ಕಾಲದಲ್ಲಿ 6 ಲಕ್ಷ ಸಾಲ ಪಡೆದಿದ್ದ ಈ ಯುವಕ, ಇಂದು ಪಂಜಾಬ್‌ನ ಅತ್ಯಂತ ಯಶಸ್ವಿ ಡೈರಿ ಉದ್ಯಮಿಗಳಲ್ಲಿ ಒಬ್ಬರು. ಹಾಗಿದ್ರೆ ಇವರು ವಾರ್ಷಿಕವಾಗಿ ಎಷ್ಟು ಸಂಪಾದಿಸುತ್ತಿದ್ದಾರೆ ಗೊತ್ತಾ?

ಸಿಕಂದರ್ ಸಿಂಗ್ ಅವರ ಸಾಧನೆ ಕಥೆ ಹಲವರಿಗೆ ಸ್ಫೂರ್ತಿ. ಇವರ ಡೈರಿ ಫಾರ್ಮ್, ಇಂದು ಹಲವು ಯುವಕರಿಗೆ ಮಾದರಿಯಾಗಲಿದೆ.
215 ಹಸುಗಳ ಬೃಹತ್ ಡೈರಿ ಫಾರ್ಮ್
43 ವರ್ಷದ ಸಿಕಂದರ್ ಸಿಂಗ್ ಸ್ವೈಚ್, 215 ಹಸುಗಳ ಬೃಹತ್ ಡೈರಿ ಫಾರ್ಮ್ ಹೊಂದಿದ್ದು, ಈ ಫಾರ್ಮ್ ಪ್ರತಿದಿನ 3,000 ಲೀಟರ್ ಹಾಲು ಉತ್ಪಾದಿಸುತ್ತದೆ. ಅಷ್ಟೇ ಅಲ್ಲದೇ ಸಿಕಂದರ್ ಅವರು 25 ಹಸುಗಳನ್ನು ಮಾರಾಟ ಮಾಡುತ್ತಾರೆ, ಪ್ರತಿ ಹಸುವಿನ ಸರಾಸರಿ ಬೆಲೆ ₹80,000 ರೂ. ಆಗಿದೆ. ಇನ್ನು ಸಿಕಂದರ್ ಅವರು ಡೈರಿ ಫಾರ್ಮ್ ಮಾಡಿದ್ದಲ್ಲದೇ, ಹಲವರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದಾರೆ. ಅವರ ಡೈರಿ ಫಾರ್ಮ್‌ನಲ್ಲಿ ಹತ್ತು ಜನರು ಕೆಲಸ ಮಾಡುತ್ತಿದ್ದಾರೆ.
ವರದಿಯ ಪ್ರಕಾರ, 1999 ರಲ್ಲಿ 17 ನೇ ವಯಸ್ಸಿನಲ್ಲಿ ಇಂಟರ್‌ಮೀಡಿಯೇಟ್ ಪಾಸಾದ ಸಿಕಂದರ್, ಕೃಷಿಯ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಹೊಂದಿದ್ದರಂತೆ. ಆದ್ರೆ ಡೈರಿ ಫಾರ್ಮಿಂಗ್ ಬಗ್ಗೆ ಯಾವುದೇ ಅನುಭವ ಇರಲಿಲ್ಲ. ಅಲ್ಲದೇ ಅವರ ಕುಟುಂಬದಲ್ಲೂ ಈ ವ್ಯವಹಾರಕ್ಕೆ ಇಳಿದಿರಲಿಲ್ಲವಂತೆ.
ಆದರೆ ಸಿಕಂದರ್ ಅವರಿಗೆ ಮೊದಲಿನಿಂದಲೂ ಪ್ರಾಣಿಗಳ ಮೇಲೆ ಭಾರೀ ಪ್ರೀತಿ. ಆದರೆ ಈ ಪ್ರೀತಿಯನ್ನು ವ್ಯಾಪಾರವಾಗಿ ಪರಿವರ್ತಿಸಬೇಕೆಂದುಕೊಂಡಿರಲಿಲ್ಲ. ಇಂಟರ್‌ಮೀಡಿಯೇಟ್ ಆದ ನಂತರ, ಅವರು 1999 ರಲ್ಲಿ ಮಿಲ್ಕ್‌ಫೆಡ್‌ನಿಂದ ಡೈರಿ ತರಬೇತಿ ಪಡೆದರು. ಅದರ ಮುಂದಿನ ವರ್ಷ ಪಂಜಾಬ್ ಅಗ್ರಿಕಲ್ಚರಲ್ ಯೂನಿವರ್ಸಿಟಿ (PAU) ಯಿಂದ ಆಧುನಿಕ ಡೈರಿ ತಂತ್ರಜ್ಞಾನವನ್ನು ಕೂಡಾ ಸ್ಟಡಿ ಮಾಡಿದರಂತೆ. ಇದೇ ಅಧ್ಯಯನ ಸಿಕಂದರ್ ಅವರಿಗೆ ಡೈರಿ ಫಾರ್ಮ್ ಬಗ್ಗೆ ಜ್ಞಾನ ಪಡೆಯಲು ಸಹಾಯವಾಯಿತು.
6 ಲಕ್ಷ ಸಾಲದಿಂದ ಶುರು ಮಾಡಿದ ಡೈರಿ ಫಾರ್ಮ್
ಸಿಕಂದರ್ ಡೈರಿ ಫಾರ್ಮಿಂಗ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಡೈರಿ ಫಾರ್ಮ್ ಶುರುಮಾಡಲು ನಿರ್ಧರಿಸಿದರು. ಅದರಂತೆ 2000 ದಲ್ಲಿ 6 ಲಕ್ಷ ಸಾಲ ಪಡೆದು ಡೈರಿ ಫಾರ್ಮ್‌ವೊಂದನ್ನು ಆರಂಭಿಸಿದರು. ಈ ಮೂಲಕ ಅವರು 20 ಹೋಲ್‌ಸ್ಟೈನ್ ಫ್ರಿಜಿಯನ್ (HF) ತಳಿಯ ಹಾಲು ಕರೆಯುವ ಹಸುಗಳನ್ನು ಖರೀದಿಸಿದರು. ಶ್ರಮಜೀವಿಯಾಗಿದ್ದ ಸಿಕಂದರ್ ಆರಂಭದಲ್ಲಿ ಹಾಲು ಕರೆಯುವುದರಿಂದ ಹಿಡಿದು, ಮಾರಾಟದವರೆಗೂ ಒಬ್ಬರೇ ಮಾಡುತ್ತಿದ್ದರಂತೆ.
ಇದೇ ಶ್ರಮ ಸಿಕಂದರ್ ಅವರಿಗೆ ಮುಂದೊಂದು ದಿನ ಫಲ ನೀಡಿತು. ಕೇವಲ 4 ವರ್ಷದಲ್ಲಿ ಸಿಕಂದರ್, ತಾನು ಮಾಡಿದ ಸಾಲವನ್ನೇಲ್ಲಾ ತೀರಿಸಿ, ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿದರು.
2023 ರಲ್ಲಿ ಸಿಕಂದರ್ OKAB ಕ್ಯಾಟಲ್ ಫೀಡ್ ಹೆಸರಿನ ತಮ್ಮದೇ ಆದ ಫೀಡ್ ಮಿಲ್ ಅನ್ನು ಪ್ರಾರಂಭಿಸಿದರು. ಈ ಮಿಲ್‌ನಲ್ಲಿ ಹಸುಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಮೇವನ್ನು ತಯಾರಿಸುತ್ತಾರೆ. ಈ ಮೇವಿನಿಂದ ಹಸುಗಳ ಆರೋಗ್ಯ ಸುಧಾರಿಸವುದಲ್ಲೇ, ಇತರ ರೈತರಿಗೂ ಇದರಿಂದ ಅನುಕೂಲವಾಗುತ್ತದೆ.
ವರದಿ ಪ್ರಕಾರ ಸಿಕಂದರ್ ಅವರ ಫಾರ್ಮ್‌ನ ದೈನಂದಿನ ಹಾಲು ಉತ್ಪಾದನೆ 3,000 ಲೀಟರ್ ಆಗಿದೆ. ಇದರಲ್ಲಿ 50% ಹಾಲನ್ನು ಅವರು ನೇರವಾಗಿ ಗ್ರಾಹಕರಿಗೆ ಲೀಟರ್‌ಗೆ ₹60 ರೂಪಾಯಿಗೆ ಮಾರಾಟ ಮಾಡುತ್ತಾರೆ. ಇನ್ನುಳಿದ ಹಾಲನ್ನು ವರ್ಕಾ ಮತ್ತು ಅಮುಲ್‌ಗೆ ಲೀಟರ್‌ಗೆ ₹44 ರಂತೆ ಮಾರಾಟ ಮಾಡುತ್ತಾರೆ ಎನ್ನಲಾಗಿದೆ. ಸಿಕಂದರ್ ಅವರ ಡೈರಿ ಫಾರ್ಮ್ ಮೂಲಕ ಯಶಸ್ವಿ ಮತ್ತು ಪರಿಶ್ರಮವನ್ನು ಗುರುತಿಸಿ, ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ.


Click it and Unblock the Notifications