ಭಾರತೀಯ ರೈಲ್ವೆ (Indian Railways) ತನ್ನ ಪ್ರಯಾಣಿಕರಿಗಾಗಿ ಮಹತ್ವದ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಬೆಂಗಳೂರು ಮತ್ತು ಮುಂಬೈ ನಡುವೆ ವೇಗದ ಪ್ರೀಮಿಯಂ ದುರಂತೋ ಎಕ್ಸ್‌ಪ್ರೆಸ್ ರೈಲು (Bengaluru-Mumbai Duronto Express Train) ಪರಿಚಯಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಈ ರೈಲು ಬೆಂಗಳೂರು ಮತ್ತು ಮುಂಬೈ ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು 18 ಗಂಟೆಗೆ ಇಳಿಸಲಿದೆ ಎಂದು ವರದಿಯಾಗಿದೆ. 1,209 ಕಿ.ಮೀ. ದೂರವನ್ನು 24 ಗಂಟೆಯಲ್ಲಿ ಕ್ರಮಿಸುವ ವಾರಕ್ಕೆ ಎರಡು ಬಾರಿ ಸಂಚರಿಸುವ ಹೊಸ 'ಸೂಪರ್‌ಫಾಸ್ಟ್' ರೈಲಿಗೆ (Superfast Train) ರೈಲ್ವೆ ಮಂಡಳಿ ಅನುಮೋದನೆ ನೀಡಿದ ನಂತರ ಈ ಹೊಸ ಪ್ರಸ್ತಾಪ ಬಂದಿದೆ.

ರೈಲ್ವೆ ಇಲಾಖೆಯು 16553/16554 ನಂಬರ್‌ನ SMVT ಬೆಂಗಳೂರು-LTT ಮುಂಬೈ-SMVT ಬೆಂಗಳೂರು ವಾರಕ್ಕೆ ಎರಡು ಬಾರಿ ಸಂಚರಿಸುವ ಸೂಪರ್ ಫಾಸ್ಟ್ ರೈಲನ್ನು ಡಿಸೆಂಬರ್ 9, 2025 ರಂದು ಜಾರಿಗೆ ತಂದಿತ್ತು. ಇದರ ಪ್ರಕಾರ, ರೈಲು 16553, ಶನಿವಾರ ಮತ್ತು ಮಂಗಳವಾರ ರಾತ್ರಿ 8:35 ಕ್ಕೆ SMVT ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ 8:40 ಕ್ಕೆ LTT ಮುಂಬೈ ತಲುಪಬೇಕಿತ್ತು. ಇನ್ನು, ವಾಪಸಾತಿ ಸೇವೆ (16554), ಭಾನುವಾರ ಮತ್ತು ಬುಧವಾರ ರಾತ್ರಿ 11:15 ಕ್ಕೆ LTT ಯಿಂದ ಹೊರಟು ಮರುದಿನ ರಾತ್ರಿ 10:30 ಕ್ಕೆ SMVT ಬೆಂಗಳೂರು ತಲುಪಲು ನಿಗದಿಯಾಗಿತ್ತು.
ಈ ರೈಲಿಗೆ ಹುಬ್ಬಳ್ಳಿ ಮತ್ತು ಪುಣೆ ಸೇರಿದಂತೆ 14 ನಿಲ್ದಾಣಗಳನ್ನು ಸಹ ಸೇರಿಸಲಾಗಿತ್ತು. ಅಲ್ಲದೆ, ಇದನ್ನು 17 LHB ಕೋಚ್‌ಗಳೊಂದಿಗೆ ಓಡಿಸಲು ಪ್ರಸ್ತಾಪಿಸಲಾಗಿತ್ತು, ಇದರ ಪ್ರಾಥಮಿಕ ನಿರ್ವಹಣೆಯನ್ನು SMVT ಬೆಂಗಳೂರಿನಲ್ಲಿ ಮಾಡಲು ಯೋಜನೆ ಮಾಡಲಾಗಿತ್ತು. ನೈಋತ್ಯ ರೈಲ್ವೆಯು ಈ ಕುರಿತು ಪ್ರತ್ಯೇಕ ಅಧಿಸೂಚನೆ ಹೊರಡಿಸದಿದ್ದರೂ, ಅದರ 24 ಗಂಟೆಗಳ ಸುದೀರ್ಘ ಪ್ರಯಾಣದ ಸಮಯದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಹೊಸ ಸೇವೆಗೆ ರೈಲ್ವೇ ಇಲಾಖೆಯ ನಿರ್ಧಾರ!
ಇದೀಗ ರೈಲ್ವೆ ಮೂಲಗಳ ಪ್ರಕಾರ, ರೈಲ್ವೆ ಮಂಡಳಿಯು KSR ಬೆಂಗಳೂರು ಮತ್ತು CSMT ಮುಂಬೈ ನಡುವೆ ದುರಂತೋ ಎಕ್ಸ್‌ಪ್ರೆಸ್ ಆರಂಭಿಸುವ ಕುರಿತು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ರೈಲು ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್ ಮತ್ತು ಪುಣೆ ಮಾರ್ಗವಾಗಿ ಸಂಚರಿಸಲಿದೆ. ಈ ಸೇವೆಗಾಗಿ ಎರಡು ರೇಕ್‌ಗಳನ್ನು ಪ್ರಸ್ತಾಪಿಸಲಾಗಿದ್ದು, ಅವುಗಳ ಪ್ರಾಥಮಿಕ ನಿರ್ವಹಣೆಯನ್ನು KSR ಬೆಂಗಳೂರಿನಲ್ಲಿ ಮಾಡಲಾಗುವುದು ಎನ್ನಲಾಗಿದೆ.
ತಾತ್ಕಾಲಿಕ ವೇಳಾಪಟ್ಟಿಯಂತೆ, KSR ಬೆಂಗಳೂರಿನಿಂದ ದುರಂತೋ ರೈಲು ಸಂಜೆ 4:30 ಕ್ಕೆ ಹೊರಟು, ಮರುದಿನ ಬೆಳಗ್ಗೆ 10:30 ಕ್ಕೆ CSMT ಮುಂಬೈ ತಲುಪಲಿದೆ. ವಾಪಸಾತಿ ಪ್ರಯಾಣದಲ್ಲಿ, ರೈಲು CSMT ಯಿಂದ ಮಧ್ಯಾಹ್ನ 3:00 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 9:30 ಕ್ಕೆ KSR ಬೆಂಗಳೂರಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ಪ್ರಕಾರ, ದುರಂತೋ ರೈಲಿನ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಲ್ಲದೇ ಪ್ರಸ್ತುತ ಇರುವ ಸೂಪರ್‌ಫಾಸ್ಟ್ ಸೇವೆಯನ್ನು ರದ್ದುಪಡಿಸಿಲ್ಲ, ಬದಲಿಗೆ ಈ ತಿಂಗಳ ಕೊನೆಯಲ್ಲಿ ಹೊಸ ಸೂಪರ್‌ಫಾಸ್ಟ್ ರೈಲು ಸೇವೆಯನ್ನು ಪರಿಚಯಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದುರಂತೋ ರೈಲುಗಳು ಸಾಮಾನ್ಯವಾಗಿ ಪ್ರಯಾಣ ದರದಲ್ಲಿ ಭೋಜನಾ ಸೌಲಭ್ಯವನ್ನು (onboard meals) ಒಳಗೊಂಡಿರುತ್ತವೆ ಹಾಗೂ ಡೈನಾಮಿಕ್ ಬೆಲೆ ನಿಗದಿ (dynamic pricing) ವ್ಯವಸ್ಥೆಯನ್ನು ಅನುಸರಿಸುತ್ತವೆ. ಇನ್ನು ಈ ರೈಲಿನ ದರದ ಬಗ್ಗೆ ನೋಡುವುದಾದ್ರೆ, KSR-CSMT ಮಾರ್ಗದಲ್ಲಿ 3AC ಬರ್ತ್‌ಗೆ ಸುಮಾರು ₹2,500 ದರವಿರಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications