ಹೊಂದಾಣಿಕೆಯ ಒಟ್ಟು ಆದಾಯ (AGR) ಬಾಕಿ ಹಣ ಪಾವತಿಸುವ ವಿಚಾರವಾಗಿ ಮೊದಲ ಹಂತದಲ್ಲಿ 2,500 ಕೋಟಿಯನ್ನಷ್ಟೇ ಹಣ ಪಾವತಿ ಮಾಡುತ್ತೇವೆ ಎಂದು ವೊಡಾಫೋನ್ ಐಡಿಯಾ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಸೋಮವಾರ 2,500 ಕೋಟಿ ರುಪಾಯಿ ಪಾವತಿ ಮಾಡಿ, ಫೆಬ್ರವರಿ 21 ಕ್ಕೆ ಎರಡನೇ ಹಂತದಲ್ಲಿ 1,000 ಕೋಟಿ ರುಪಾಯಿ ಪಾವತಿಸುವುದಾಗಿ ಕೇಳಿಕೊಂಡಿತು. ಆದರೆ ವೊಡಾಫೋನ್ ಐಡಿಯಾ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಮುಲಾಜಿಲ್ಲದೆ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಟೆಲಿಕಾಂ ಕಂಪನಿಗಳ ಪ್ರಸ್ತಾವನೆಯನ್ನು ಸ್ವೀಕರಿಸಲು ನಿರಾಕರಿಸಿದೆ.

ಹಿರಿಯ ನ್ಯಾಯವಾದಿ ಮುಕುಲ್ ರೊಹಟ್ಗಿ ಕಂಪನಿ ಪರ ವಾದ ಮಂಡಿಸಿದ್ದು ಇಂದು (ಸೋಮವಾರ) 2,500 ಕೋಟಿ ರುಪಾಯಿ ಪಾವತಿ ಮತ್ತು ಮುಂದಿನ ಶುಕ್ರವಾರ (ಫೆಬ್ರವರಿ ೨೮)ರ ಒಳಗೆ 1,000 ಕೋಟಿ ರುಪಾಯಿಗಳನ್ನು ಪಾವತಿಸಲಿದೆ. ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಸುಪ್ರೀಂಕೋರ್ಟ್ ಒಪ್ಪದೆ ಮನವಿ ತಿರಸ್ಕರಿಸಿದೆ. ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
4,729 ಕೋಟಿ ರುಪಾಯಿ ಸ್ಪೆಕ್ಟ್ರಂ ಶುಲ್ಕ ಬಾಕಿ ಮತ್ತು 28,309 ಕೋಟಿ ರುಪಾಯಿ ಪರವಾನಗಿ ಶುಲ್ಕ ಒಳಗೊಂಡಂತೆ ಸುಮಾರು 53,038 ಕೋಟಿ ರುಪಾಯಿಗಳನ್ನು ವೊಡಾಫೋನ್ ಐಡಿಯ ಸರ್ಕಾರಕ್ಕೆ ಪಾವತಿಸಬೇಕಿದೆ. ಇದನ್ನು ಪಾವತಿಸದಿದ್ದರೆ ಕಂಪನಿ ಮುಚ್ಚಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.


Click it and Unblock the Notifications