ಬೆಂಗಳೂರು, ಆಗಸ್ಟ್ 7: ನಮ್ಮ ಇಷ್ಟದ ಆಹಾರದ ಬಗ್ಗೆ ನಮಗೆ ಕಡುಬಯಕೆ ಕಾಡಿದಾಗ ಹಠಾತ್ತನೆ ಕೆಲ ನಿಮಿಷಗಳಲ್ಲಿ ಫುಡ್ ಡೆಲಿವರಿ ಬಾಯ್ಸ್ ಬಾಗಿಲು ಬಡಿದು ಪ್ಯಾಕೆಟ್ಸ್ ನಮ್ಮ ಕೈಗಿತ್ತಾಗ ಆಗುವ ತೃಪ್ತಿ ಹೇಳಲು ಅಸಾಧ್ಯ. ಇಂದಿನ ಯುಗದಲ್ಲಿ ಆಹಾರ ವಿತರಣಾ ವ್ಯವಸ್ಥೆಯ ಬೆಳವಣಿಗೆಯು ಪ್ರಪಂಚದಾದ್ಯಂತ ವ್ಯಾಪಕವಾಗಿ ಆಗುತ್ತಿದೆ. ತಂತ್ರಜ್ಞಾನ ಬೆಳವಣಿಗೆ ಮತ್ತು ಇಂಟರ್ನೆಟ್ ಮಾರುಕಟ್ಟೆಯಲ್ಲಿ ಬೆಳೆಯಲು ಪ್ರತಿಯೊಂದು ಉದ್ಯಮವನ್ನು ಬೆಳೆಯಲು ಸಹಾಯ ಮಾಡುತ್ತದೆ. ಮೊಬೈಲ್ ಬಳಕೆಯಿಂದಾಗಿ ರೆಸ್ಟೋರೆಂಟ್ ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ಆಹಾರ ವಿತರಣಾ ವ್ಯವಸ್ಥೆಗಳಿಗೆ ಹೆಚ್ಚಿನ ಬೇಡಿಕೆಯು ಪ್ರತಿದಿನ ಹೆಚ್ಚುತ್ತಿದೆ. ಡೋರ್‌ಸ್ಟೆಪ್ ಡೆಲಿವರಿ ಮತ್ತು ಸುಲಭವಾದ ಬಿಲ್ ಪಾವತಿಗಳು, ಎಲ್ಲಾ ನೆಚ್ಚಿನ ಆಹಾರಗಳ ಲಭ್ಯತೆ, ಹತ್ತಿರದ ರೆಸ್ಟೋರೆಂಟ್ ಆಯ್ಕೆ, ಆರ್ಡರ್ ಟ್ರ್ಯಾಕಿಂಗ್, ಎಲ್ಲಿಂದಲಾದರೂ ಆರ್ಡರ್ ಮಾಡುವುದು ಇತ್ಯಾದಿ, ಜನರು ವಿಶೇಷವಾಗಿ ಯುವಕರು ಈ ಆನ್‌ಲೈನ್ ಆಹಾರ ವೇದಿಕೆಗೆ ಆಕರ್ಷಿಸಲು ಸಹಾಯ ಮಾಡುತ್ತಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ಸ್ವಿಗ್ಗಿ, ಝೊಮ್ಯಾಟೊ, ಉಬರ್ ಈಟ್ಸ್ ಮುಂತಾದ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಗಳು ಈ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಹೊಂದಿದ್ದು, ಇದಕ್ಕೆ ಪ್ರತಿಸ್ಪರ್ಧಿಯಾಗಿ ಇದೀಗ ಬೆಂಗಳೂರು ಮೂಲದ ಹೊಸ ಸ್ಟಾರ್ಟಪ್ "ಸ್ವಿಶ್" ಹುಟ್ಟುಕೊಂಡಿದ್ದು ಇದು ಆನ್ ಲೈನ್ ನಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಹೌದು ಬೆಂಗಳೂರು ಮೂಲದ "ಸ್ವಿಶ್" ಹೆಸರಿನ ಸ್ಟಾರ್ಟ್‌ಅಪ್ ಕೇವಲ 10 ನಿಮಿಷಗಳಲ್ಲಿ ಆಹಾರವನ್ನು ತಲುಪಿಸುವ ಭರವಸೆ ನೀಡಿದ್ದು, ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರಸ್ತುತ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಿಶ್ ಬೆಂಗಳೂರು ನಗರಕ್ಕೆ ಕಪ್ಪುಚುಕ್ಕಿಯಂತೆ ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಯ ನಡುವೆ ದಾಖಲೆ ಸಮಯದಲ್ಲಿ ಗ್ರಾಹಕರಿಗೆ ತಾಜಾ, ಬಿಸಿ ಊಟವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಸ್ವಿಶ್‌ನ ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ಉಜ್ವಲ್ ಸುಖೇಜಾ ಅವರು ಈ ತ್ವರಿತ ವಿತರಣಾ ಸೇವೆಯ ಹಿಂದಿನ ಪ್ರೇರಣೆಯನ್ನು ವಿವರಿಸುತ್ತಾ, "ಸ್ಥಳೀಯ ಹೊಟೇಲ್ ಗಳು ತ್ವರಿತವಾಗಿ ಸೇವೆ ಸಲ್ಲಿಸಲು ಸಮರ್ಥವಾಗಿದ್ದರೂ ಸಹ, ಅನೇಕ ಯುವಜನರು ಆಹಾರಕ್ಕಾಗಿ ಬಹಳಷ್ಟು ಸಮಯ ಕಾಯಬೇಕಾಗುತ್ತದೆ. ಸ್ಥಳೀಯ ಸೇವೆಯ ವೇಗ ಮತ್ತು ವಿತರಣಾ ಸಮಯದ ನಡುವಿನ ಈ ಅಂತರವನ್ನು ಕಡಿಮೆ ಮಾಡಲು, ಹಾಗೂ ತಮ್ಮ ಗ್ರಾಹಕರಿಗೆ ತ್ವರಿತ ಮತ್ತು ಪರಿಣಾಮಕಾರಿ ಆಹಾರ ವಿತರಣೆ ಮಾಡಲು " ಸ್ವಿಶ್ " ಹುಟ್ಟುಹಾಕುವಂತೆ ಪ್ರೇರೇಪಿಸಿತು" ಎನ್ನುತ್ತಾರೆ.
" ಸ್ವಿಶ್ " ಇದು 10-ನಿಮಿಷದ ಆಹಾರ ವಿತರಣಾ ಅಪ್ಲಿಕೇಶನ್ . ನಾವು ತಂತ್ರಜ್ಞಾನ, ಆಹಾರ ಮತ್ತು ವಿತರಣೆಯನ್ನು ನೋಡಿಕೊಳ್ಳುತ್ತೇವೆ. ಆಹಾರ ವಿತರಣಾ ಸಮಯವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದ್ದು ಅಪ್ಲಿಕೇಶನ್ ಪ್ರಸ್ತುತ HSR ಲೇ ಔಟ್ ನಲ್ಲಿ ಸಕ್ರಿಯವಾಗಿದೆ. ಎಚ್‌ಎಸ್‌ಆರ್‌ನಲ್ಲಿ, ನೀವು ನಿಮಿಷಗಳಲ್ಲಿ ದರ್ಶಿನಿಯಿಂದ ದೋಸೆಯನ್ನು ತ್ವರಿತವಾಗಿ ಪಡೆಯಬಹುದು. ಆದರೆ ಆನ್‌ಲೈನ್ ಆಹಾರ ವಿತರಣೆಗೆ ಬಂದಾಗ, ಕಾಯುವಿಕೆ ಎಂಬುವುದುದು ಕಿರಿಕಿರಿ ಕೂಡಿದೆ ಎಂದು ನಾವು ಅರಿತುಕೊಂಡಿದ್ದೇವೆ. ಈ ಸಮಸ್ಯೆಯು ನಮ್ಮಂತಹ ಅನೇಕ ಯುವಕರಿಗೆ ಸಾಮಾನ್ಯವಾಗಿದೆ, ಆದ್ದರಿಂದ ಅವರಿಗೆ (ಮತ್ತು ನಮಗಾಗಿ), ನಾವು ಸ್ವಿಶ್ ಅನ್ನು ನಿರ್ಮಿಸುತ್ತಿದ್ದೇವೆ" ಎಂದು ಎಕ್ಸ್ ಖಾತೆಯಲ್ಲಿ ಸ್ಟಾರ್ಟ್‌ಅಪ್‌ನ ಸಂಸ್ಥಾಪಕ, ಉಜ್ವಲ್ ಸುಖೇಜಾ ಬರೆದುಕೊಂಡಿದ್ದಾರೆ.
ಈ X ಪೋಸ್ಟ್ ಇದುವರೆಗೆ 440K ವಿವ್ಯ್ಸು ಕಂಡಿದ್ದು ನೆಟ್ಟಿಗರು ಹಲವು ವಿಧದ ಕಾಮೆಂಟ್ ಗಳನ್ನು ಹಾಕಿದ್ದು ಇದು ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಕೆಲವರು ಸ್ಟಾರ್ಟ್‌ಅಪ್ ಅನ್ನು ಶ್ಲಾಘಿಸಿದ್ದು, ನಾವು ಈ ಪ್ರದೇಶದಲ್ಲೇ ಇದ್ದು ನಿಮ್ಮ ಸ್ಟಾರ್ಟ್‌ಅಪ್ ಮೂಲಕ ಫುಡ್ ಟ್ರೈ ಮಾಡಲು, ಸೇವೆ ಪಡೆಯಲು ಉತ್ಸುಕರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. "ಅಭಿನಂದನೆಗಳು. ನಾನು ಎಚ್‌ಎಸ್‌ಆರ್‌ನಲ್ಲಿದ್ದೇನೆ, ಖಂಡಿತಾ ಟ್ರೈ ಮಾಡುತ್ತೇನೆ! ಕ್ರಿಪ್ಟೋದಿಂದ ಆಹಾರ ತಂತ್ರಜ್ಞಾನದವರೆಗೆ! ನೈಸ್ ಸ್ವಿಶ್! ಶುಭವಾಗಲಿ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇನ್ನು ಕೆಲವರು ಸಂಶಯ ವ್ಯಕ್ತಪಡಿಸಿದ್ದು ಹಲವು ಕಾರಣಗಳನ್ನು ನೀಡಿ ಸ್ವಿಶ್ ನ 10 ನಿಮಿಷಗಳ ವಿತರಣೆಯ ಭರವಸೆಯನ್ನು ಟೀಕಿಸಿದ್ದಾರೆ. " ಇದು ಪುನರಾವರ್ತಿತ ಪ್ರಶ್ನೆ ಎಂದು ನನಗೆ ತಿಳಿದಿದೆ. ಆಹಾರವನ್ನು ಈಗಾಗಲೇ ಬೇಯಿಸಿದ್ರೆ ಮಾತ್ರ 10-ನಿಮಿಷದ ಆಹಾರ ವಿತರಣೆ ಸಾಧ್ಯ. ನೀವು ನಿಜವಾಗಿಯೂ ಇದನ್ನು Zomato ಮತ್ತು Swiggy ಸಂಸ್ಥೆಗಳು ಮಾಡಲು ಸಾಧ್ಯವಿಲ್ಲ ಎಂದು ಭಾವಿಸುತ್ತೀರಾ? ಇಲ್ಲಿ ನಿಮ್ಮ ಮೋಟೋ ಏನು? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
"10 ನಿಮಿಷಗಳ ಮಾನದಂಡವು ನಿಮ್ಮ ವಿತರಣಾ ಪಾಲುದಾರರ ಜೀವಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಭಾವಿಸುತ್ತೇವೆ! ನನಗೆ ಅವರ ಬಗ್ಗೆ ಕಾಳಜಿ ಇದೆ." ಎಂದರೆ ಮತ್ತೊಬ್ಬರು " ಇಂಟರೆಸ್ಟಿಂಗ್ ಸ್ಟಫ್ ಮ್ಯಾನ್. ಇದು ಬೆಂಗಳೂರಿನ ಇತರ ಪ್ರದೇಶಗಳಿಗೆ ವಿಸ್ತರಿಸಲು ಕಾಯುತ್ತಿದ್ದೇವೆ!" ಎಂದು ಬರೆದುಕೊಂಡಿದ್ದಾರೆ
ಹೀಗೆ ಟೀಕೆಗಳ ನಡುವೆಯೂ ಕೆಲವು ಬಳಕೆದಾರರು ಸ್ವಿಶ್ ಅನ್ನು ಪ್ರಯತ್ನಿಸಿ ಅದರ ವಿತರಣೆಯ ವೇಗದಿಂದ ಪ್ರಭಾವಿತರಾಗಿದ್ದಾರೆ. ಆದಾಗ್ಯೂ, Swish ನ ಅಧಿಕೃತ X ಹ್ಯಾಂಡಲ್ ಗ್ರಾಹಕರಿಂದ ದೂರುಗಳಿಗೆ ಪ್ರತಿಕ್ರಿಯಿಸುತ್ತಿದ್ದು, ಅವರು ಭರವಸೆ ನೀಡಿದ 10 ರ ಬದಲಿಗೆ 15 ನಿಮಿಷಗಳಲ್ಲಿ ತಮ್ಮ ಆರ್ಡರ್ ಸ್ವೀಕರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ 10 ನಿಮಿಷಗಳಲ್ಲಿ ದಿನಸಿ ಮತ್ತು ಮನೆಯ ಅಗತ್ಯ ವಸ್ತುಗಳನ್ನು ತಲುಪಿಸುವ ತ್ವರಿತ ವಾಣಿಜ್ಯ ವೇದಿಕೆಗಳು ಜನಪ್ರಿಯವಾಗಿದ್ದರೂ, ಈ ಮಾದರಿಯನ್ನು ಆಹಾರ ವಿತರಣೆಗೆ ಅನ್ವಯಿಸುವುದು ಹಲವು ರೀತಿಯ ಕಳವಳಗಳನ್ನು ಹುಟ್ಟುಹಾಕಿದೆ ಅಂದ್ರೂ ತಪ್ಪಾಗಲಾರದು.


Click it and Unblock the Notifications