ಬೆಂಗಳೂರು-ತಮಿಳುನಾಡು ಗಡಿ ಭಾಗದಲ್ಲಿರುವ ಹೊಸೂರು ವಿಮಾನ ನಿಲ್ದಾಣದ ಕಾರ್ಯ ಚುರುಕುಗೊಳ್ಳುತ್ತಿದೆ. ಇದಕ್ಕಾಗಿ ತಮಿಳುನಾಡು ಸರ್ಕಾರ ತೀವ್ರ ಆಸಕ್ತಿ ತೋರಿಸುತ್ತಿದೆ. ತಮಿಳುನಾಡಿನ ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು ಹೊಸೂರು ವಿಮಾನ ನಿಲ್ದಾಣದ ಸ್ಥಳದ ಬಗ್ಗೆ ತೀರ್ಮಾನವನ್ನು ಸರ್ಕಾರ ಶೀಘ್ರದಲ್ಲೇ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ವಿಮಾನ ನಿಲ್ದಾಣಕ್ಕಾಗಿ ತಮಿಳುನಾಡು ಸರ್ಕಾರ 2,000 ಎಕರೆ ಭೂಮಿಯನ್ನು ಮೀಸಲಿಟ್ಟಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದಕ್ಕಾಗಿ ಐದು ಸ್ಥಳಗಳನ್ನು ಅಧ್ಯಯನ ನಡೆಸಿ ಅವುಗಳಲ್ಲಿ, ಎರಡನ್ನು ಈಗಾಗಲೇ ಶಾರ್ಟ್ ಲಿಸ್ಟ್ ಮಾಡಿದೆ. ಸರ್ಕಾರ ಈಗ ಈ ಎರಡು ಸ್ಥಳಗಳಲ್ಲಿ ಲಭ್ಯವಿರುವ ಭೂಮಿ, ಪರಿಸರ ಪರಿಣಾಮ, ಮತ್ತು ಹವಾಮಾನ ಅವಸ್ಥೆಗಳಂತಹ ಅಂಶಗಳನ್ನು ಪರಿಗಣಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಈ ವಿಮಾನ ನಿಲ್ದಾಣ ಶುರುವಾದರೆ ಹೊಸೂರು ಮತ್ತು ಅದರ ಸುತ್ತಮುತ್ತಲಿನ ಕೈಗಾರಿಕಾ ವಲಯಗಳಿಗೆ ಮಹತ್ತರ ಲಾಭವಾಗಲಿದೆ. ಹೇಗೆಂದರೆ ಈ ವಿಮಾನ ನಿಲ್ದಾಣ ತಮಿಳುನಾಡಿಗೇ ಸೇರಿದ್ದರೂ, ಅದು ಪ್ರಮುಖ ಕೈಗಾರಿಕಾ ನಗರವಾದ ಬೆಂಗಳೂರಿಗೆ ಸಮೀಪವಿದೆ. ಹೀಗಾಗಿ ಇದರಿಂದ ವಿಮಾನಯಾನ, ಲಾಜಿಸ್ಟಿಕ್ಸ್, ಮತ್ತು ವ್ಯಾಪಾರ ವಲಯಗಳಿಗೆ ಬಲವಾದ ಬೆಂಬಲ ಒದಗಿಸಬಹುದು. ಹೀಗಾಗಿ ಹೊಸೂರಿನಲ್ಲಿರುವ ಕೈಗಾರಿಕೆಗಳು ಈ ವಿಮಾನ ನಿಲ್ದಾಣವನ್ನು, ಆದಷ್ಟು ಬೇಗ ಸ್ಥಾಪಿಸಬೇಕು ಎಂದು ಒತ್ತಾಯಿಸುತ್ತಿವೆ. ಏಕೆಂದರೆ ಅದು ದೇಶೀಯ ಮತ್ತು ಅಂತರಾಷ್ಟ್ರೀಯ ವಾಣಿಜ್ಯ ಸಂಪರ್ಕಕ್ಕೆ ಸಹಕಾರಿ ಆಗುತ್ತದೆ.
ಇನ್ನು ಹೊಸೂರು ಬಳಿ ಏರ್ ಪೋರ್ಟ್ ನಿರ್ಮಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಆಯ್ಕೆ ಮಾಡಿದ ಎರಡು ಸ್ಥಳಗಳಲ್ಲಿ, ಒಂದು ತನೇಜಾ ಏವಿಯೇಷನ್ ಮತ್ತು ಏರೋಸ್ಪೇಸ್ ಲಿಮಿಟೆಡ್ (TAAL) ಒಡೆತನದಲ್ಲಿರುವ ಖಾಸಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವಾಗಿದೆ. ಮತ್ತೊಂದು ಚೆನ್ನೈ-ಬೆಂಗಳೂರು ಹೆದ್ದಾರಿಗೆ ಹತ್ತಿರವಿರುವ ಮತ್ತೊಂದು ಸ್ಥಳವಾಗಿದೆ. ಈ ಎರಡೂ ಸ್ಥಳಗಳು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ಯೋಗ್ಯವೆಂದು AAI ತನ್ನ ಅಧ್ಯಯನದ ಮೂಲಕ ತಿಳಿಸಿದೆ.
ಇನ್ನು ಈ ವಿಮಾನ ನಿಲ್ದಾಣದ ಅಗತ್ಯತೆ ಹೊಸೂರಿನ ಕೈಗಾರಿಕಾ ವಲಯಗಳಿಗೂ ಇದೆ. ಹೀಗಾಗಿ ಅವರು ಕೂಡ ಸಾಕಷ್ಟು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೊಸೂರು-ಥಳ್ಳಿ ರಸ್ತೆಯ ಬೆಳಗೊಂಡಪಲ್ಲಿ ಪ್ರದೇಶ ಇದಕ್ಕೆ ಸೂಕ್ತವೆಂದು ವಾದಿಸುತ್ತಿವೆ. ಅಲ್ಲದೇ ಯೋಜನೆಗಾಗಿ ಅಗತ್ಯವಾದ ಭೂಮಿ ಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆಯಬೇಕಾಗಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇತ್ತ ತಮಿಳುನಾಡು ಸರ್ಕಾರ ಈಗ AAI ಶಿಫಾರಸು ಮಾಡಿದ ಸ್ಥಳಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಮುಂಚಿತವಾಗಿಯೇ ಹಲವಾರು ಅಧ್ಯಯನಗಳನ್ನು ನಡೆಸುತ್ತಿದೆ.
ಇನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಲಭ್ಯವಿರುವ ಸರ್ಕಾರಿ ಭೂಮಿ, ಪರಿಸರ ಪರಿಣಾಮ, ಮತ್ತು ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸುಮಾರು ಒಂದು ತಿಂಗಳಲ್ಲಿ ಈ ಸಂಬಂಧ ಸರ್ಕಾರ ನಿರ್ಧಾರ ಪ್ರಕಟಿಸಬಹುದು. ಹೊಸೂರು ವಿಮಾನ ನಿಲ್ದಾಣ ಯೋಜನೆಯ ಅನುಮೋದನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಒಪ್ಪಿಗೆ ಅಗತ್ಯವಿರುತ್ತದೆ. ಅಷ್ಟೇ ಅಲ್ಲ ಇದರ ಜೊತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಏಕೆಂದರೆ ಹೊಸ ನಿರ್ಮಾಣವಾಗುವ ವಿಮಾನ ನಿಲ್ದಾಣವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯೊಳಗೆ ಬರುತ್ತದೆ. 2033ರವರೆಗೆ ಈ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪನೆ ಮಾಡುವಂತಿಲ್ಲ ಎಂಬ ಕೇಂದ್ರ ಸರ್ಕಾರ ಮತ್ತು ಬೆಂಗಳೂರು ಏರ್ ಪೋರ್ಟ್ ನಡುವಿನ ಒಪ್ಪಂದವಿದೆ. ಹೀಗಾಗಿಯೇ ಹೊಸೂರು ವಿಮಾನ ನಿಲ್ದಾಣಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ಏರ್ ಪೋರ್ಟ್‌ನ ಅನುಮೋದನೆ ಅಗತ್ಯವಿದೆ.
ಇತ್ತ ಬೆಂಗಳೂರಿಗೂ ಮತ್ತೊಂದು ಏರ್‍ಪೋರ್ಟ್‌ನ ಅಗತ್ಯ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯತೆಯನ್ನು ಪೂರೈಸಲು ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ HAL ವಿಮಾನ ನಿಲ್ದಾಣ ಪುನಶ್ಚೇತನಗೊಳಿಸುವ ಮತ್ತು ಹೊಸ ಸ್ಥಳವನ್ನು ಹುಡುಕುವ ಪ್ರಯತ್ನದಲ್ಲಿದೆ. ಇದರ ನಡುವೆಯೇ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ವೇಗವಾಗಿ ಮುಂದಾಗಿದೆ.
ಒಮ್ಮೆ ಸ್ಥಳದ ಆಯ್ಕೆ ಅಂತಿಮವಾದ ನಂತರ, ತಮಿಳುನಾಡು ಸರ್ಕಾರವು ಈ ನಿರ್ಧಾರವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಿಳಿಸಲಿದೆ. ಆ ನಂತರ, ಅನಿವಾರ್ಯ ಅನುಮೋದನೆಗಳಿಗಾಗಿ ಪ್ರಕ್ರಿಯೆ ಮುಂದುವರಿಯಲಿದೆ. ಹೊಸೂರು ವಿಮಾನ ನಿಲ್ದಾಣ ನಿರ್ಮಾಣದ ಈ ಮಹತ್ವಾಕಾಂಕ್ಷೆಯ ಯೋಜನೆ ತಮಿಳುನಾಡಿನ ವಾಯು ಸಂಚಾರ ಮೂಲಸೌಕರ್ಯಕ್ಕೆ ನೂತನ ಯುಗವನ್ನು ತಂದೊಡ್ಡುವ ನಿರೀಕ್ಷೆಯಿದೆ. ಇದು ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ವಲಯಗಳಿಗೆ ಮಹತ್ತರ ಲಾಭವನ್ನು ತರುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯ ಅಂತಿಮ ನಿರ್ಧಾರ ಮತ್ತು ಶಿಲಾನ್ಯಾಸ ಕಾರ್ಯಕ್ರಮದ ನಿರೀಕ್ಷೆಯಲ್ಲಿರುವ ಹೊಸೂರು, ದಕ್ಷಿಣ ಭಾರತದ ಹೊಸ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮುವ ಸಾಧ್ಯತೆ ದೊಡ್ಡದಾಗಿದೆ.


Click it and Unblock the Notifications