ನವದೆಹಲಿ, ಏಪ್ರಿಲ್ 15: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ದೇಶದ ಅತ್ಯುನ್ನತ ಸಾಫ್ಟ್‌ವೇರ್ ಸಂಸ್ಥೆಯಾಗಿದೆ. ವಿದೇಶದಲ್ಲಿ ಕೂಡ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿದೆ. ಈ ಸಂಸ್ಥೆಯ ವ್ಯವಹಾರ ಕೂಡ ಉತ್ತಮವಾಗಿ ಲಾಭದ ಹಾದಿಯಲ್ಲೇ ನಡೆಯುತ್ತಿದ್ದು, ಇದೀಗ ಟಿಸಿಎಸ್ ಸಂಸ್ಥೆ ತನ್ನ ಹೊಸ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ.
ಸಾಫ್ಟ್‌ವೇರ್ ಸೇವೆ ಒದಗಿಸುವ ಭಾರತದ ಅತಿ ದೊಡ್ಡ ಕಂಪನಿ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' ಎನ್ನಬಹುದು. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಕೀರ್ತಿ ಕೂಡ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' ಸಂಸ್ಥೆಗೆ ಇದೆ. ಇನ್ನು ಈ ಸಂಸ್ಥೆ ಇದೀಗ ತನ್ನ 2023-24 ನೇ ಸಾಲಿನ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 12,434 ಕೋಟಿ ರೂಪಾಯಿ ನಿವ್ವಳ ಲಾಭವನ್ನ ಗಳಿಸಿದೆ. ಈ ಮೂಲಕ ತನ್ನ ಕಳೆದ ಅವಧಿಗಿಂತಲೂ ಹೆಚ್ಚು ಲಾಭ ಗಳಿಸಿದೆ. ಅಲ್ಲದೆ ತನ್ನ ಷೇರು, ಅಂದರೆ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿದೆ.

ಕಳೆದ ಬಾರಿ 11,392 ಕೋಟಿ ಲಾಭ!
ಇದರ ಜೊತೆಗೆ ಕಳೆದ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹11,392 ಕೋಟಿ ಲಾಭ ಗಳಿಸಿತ್ತು 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'. ಇದೀಗ ತನ್ನ ಹೊಸ ತ್ರೈಮಾಸಿಕದಲ್ಲಿ ಟಿಸಿಎಸ್ ಲಾಭದಲ್ಲಿ ಕೂಡ ಭರ್ಜರಿ ಏರಿಕೆ ಆಗಿದ್ದು, ಲಾಭದಲ್ಲಿ ಶೇ 9.1 ರಷ್ಟು ಏರಿಕೆಯನ್ನು ಕಂಡಿದೆ ಟಿಸಿಎಸ್. ಈ ಮೂಲಕ ಟಾಟಾ ಸಂಸ್ಥೆಯ ಮತ್ತೊಂದು ಉದ್ಯಮ ಕೂಡ, ತನ್ನ ಲಾಭದ ಹಾದಿಯನ್ನು ಮುಂದುವರಿಸಿ ದೇಶದ ಉದ್ಯಮ ವಲಯಕ್ಕೆ ಮಾದರಿ ಆಗುತ್ತಿದೆ. ಇದರ ಜತೆ, ಹೂಡಿಕೆ ಮಾಡಿರುವ ಷೇರುದಾರರಿಗೆ ಕೂಡ ಲಾಭದ ಹಂಚಿಕೆ ಮಾಡಲು ಮುಂದಾಗಿದೆ.
ಒಟ್ಟು 6 ಲಕ್ಷ ಕೆಲಸಗಾರರು!
2023-24ನೇ ಹಣಕಾಸು ವರ್ಷದಲ್ಲಿ ಟಿಸಿಎಸ್ ಕಂಪನಿಯ ನಿವ್ವಳ ಲಾಭದಲ್ಲಿ ಶೇಕಡಾ 9ರಷ್ಟು ಏರಿಕೆ ಆಗಿದ್ದು, ₹45,908 ಕೋಟಿ ಮುಟ್ಟಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿ ವರಮಾನ ಶೇಕಡಾ 3.5 ರಷ್ಟು ಏರಿಕೆ ಆಗಿದ್ದು, ₹61,237 ಕೋಟಿ ಆಗಿದೆ ಎಂದು ಷೇರುಪೇಟೆಗೆ ತಿಳಿಸಿದೆ. ಅಲ್ಲದೆ ಇದರ ಜೊತೆಗೆ ಯುವಕರಿಗೆ ಈ ಸಂಸ್ಥೆಯಲ್ಲಿ ಉತ್ತಮ ಅವಕಾಶಗಳು ಸಿಗುತ್ತಿವೆ. ಈ ಮಧ್ಯೆ ತನ್ನ 4ನೇ ತ್ರೈಮಾಸಿಕದಲ್ಲಿ 2 ಸಾವಿರ ಸಿಬ್ಬಂದಿ ಟಿಸಿಎಸ್ ಕಂಪನಿ ತೊರೆದಿದ್ದು, ಒಟ್ಟು ಸಿಬ್ಬಂದಿ ಸಂಖ್ಯೆ ಈಗ 6.01 ಲಕ್ಷ ಇದ್ದಾರೆ ಎಂಬ ಮಾಹಿತಿಯನ್ನು ಕೂಡ ನೀಡಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸಂಭವಿಸಿದರೂ ಟಿಸಿಎಸ್‌ಗೆ ಮಾತ್ರ ಯಾವುದೇ ಅಡೆತಡೆ ಉಂಟಾಗಿಲ್ಲ. ತನ್ನ ಲಾಭದ ಹಾದಿಯಲ್ಲೇ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' ಮುಂದುವರಿದಿದೆ. ಹಾಗೇ ಭವಿಷ್ಯಕ್ಕೂ ಕೂಡ ಹಲವು ರೀತಿಯ ಯೋಜನೆಯ ರೂಪಿಸಿಕೊಂಡಿದ್ದು, ಇತ್ತೀಚೆಗಷ್ಟೇ ಹೊಸಬರಿಗೆ ಕೆಲಸ ಕೊಡುವ ವಿಚಾರದಲ್ಲೂ ಟಿಸಿಎಸ್ ಭಾರಿ ಸುದ್ದಿಯಾಗಿ ಸದ್ದು ಮಾಡಿತ್ತು.


Click it and Unblock the Notifications