ಕರ್ನಾಟಕಕ್ಕೆ ಹೊಸ ಗುಡ್‌ನ್ಯೂಸ್ ಸಿಕ್ಕಿದೆ.. ಅದೇನೆಂದರೆ ಟಾಟಾ ಗ್ರೂಪ್‌ನ ಹೂಡಿಕೆ ಜಾಲ ಮತ್ತು ಉದ್ಯೋಗವಕಾಶಗಳು ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗಲು ಮುಂದಾಗಿದೆ. ಅಂದರೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಅಧ್ಯಕ್ಷ ಬನ್ಮಾಲಿ ಅಗ್ರವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ನಡೆದಿರುವ ಹೂಡಿಕೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. ಸುಮಾರು 5 ಬಿಲಿಯನ್ ಡಾಲರ್ಗಿಂತ ಹೆಚ್ಚು ಹೂಡಿಕೆ ರಾಜ್ಯದಲ್ಲಿ ಮಾಡಲಾಗಿದ್ದು, ಇದು ಕರ್ನಾಟಕದ ಆರ್ಥಿಕತೆಗೆ ಮಹತ್ವದ ಬೆಂಬಲವಾಗಿದೆ ಎಂದರೆ ತಪ್ಪಾಗಲ್ಲ.

ರಾಜ್ಯದಲ್ಲಿ ಟಾಟಾ ಸಂಸ್ಥೆಗಳ ಬಲವಾದ ಅಸ್ತಿತ್ವ:
ಇನ್ನು ಟಾಟಾ ಗ್ರೂಪ್ ಕರ್ನಾಟಕದಲ್ಲಿ ಈಗಾಗಲೇ 27 ಕಂಪನಿಗಳ ಮೂಲಕ ಕಾರ್ಯನಿರ್ವಹಿಸ್ತಿದೆ. ಅಂದರೆ ಉದ್ಯೋಗಾಕಾಂಕ್ಷಿಗಳಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಮತ್ತು ಟಾಟಾ ಮೋಟಾರ್ಸ್ ಪ್ರಮುಖ ನೇರ ಉದ್ಯೋಗದಾತಗಳಾಗಿವೆ. ಇದರ ಜೊತೆಗೆ ಪರೋಕ್ಷವಾಗಿ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಇತರ ಘಟಕಗಳು ಉದ್ಯೋಗ ಸೃಷ್ಟಿಸುತ್ತಿವೆ. ಇದರಿಂದ ರಾಜ್ಯದ ಕೈಗಾರಿಕಾ ಚಟುವಟಿಕೆಗಳು ಮತ್ತಷ್ಟು ಚುರುಕಾಗಿವೆ.
2.9 ಬಿಲಿಯನ್ ಡಾಲರ್ಗಿಂತ ಹೆಚ್ಚು ಹೊಸ ಹೂಡಿಕೆ:
ಈಗಿನ ಹೊಸ ಸುದ್ದಿ ಏನೆಂದರೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಟಾಟಾ ಕಂಪನಿಗಳ ಜೊತೆಗೆ, ಮುಂದಿನ ವರ್ಷ ಇನ್ನಷ್ಟು ಹೂಡಿಕೆ ಕರ್ನಾಟಕಕ್ಕೆ ಹರಿದು ಬರಲಿದೆ. ಅಂದರೆ 2.9 ಬಿಲಿಯನ್ ಡಾಲರ್ಗಿಂತ ಹೆಚ್ಚು ಹೂಡಿಕೆ ಮಾಡಲು ಟಾಟಾ ಗ್ರೂಪ್ ಯೋಜಿಸಿದೆ. ಈ ಹೂಡಿಕೆಗಳು ಸೆಮಿಕಂಡಕ್ಟರ್ ವಿಸ್ತರಣೆ, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ವಿಮಾನಯಾನ ನಿರ್ವಹಣೆ, ರಕ್ಷಣಾ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ನಡೆಯಲಿವೆ. ಈ ಯೋಜನೆಗಳು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೊಸ ಶಕ್ತಿ ನೀಡಲಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ಈ ಹೂಡಿಕೆಗಳು ಸಹಕಾರಿಯಾಗಲಿವೆ.
ವೈಟ್ಫೀಲ್ಡ್ನಲ್ಲಿ ಟಿಸಿಎಸ್ ಹೊಸ ಕ್ಯಾಂಪಸ್:
ಬೆಂಗಳೂರು ನಗರದ ವೈಟ್ಫೀಲ್ಡ್ ಪ್ರದೇಶದಲ್ಲಿ ಟಿಸಿಎಸ್ 25,000 ಆಸನಗಳ ಸಾಮರ್ಥ್ಯದ ಹೊಸ ಕ್ಯಾಂಪಸ್ ನಿರ್ಮಿಸಲು ಮುಂದಾಗಿದೆ. ಈ ಕ್ಯಾಂಪಸ್ ಆರಂಭವಾದ ಬಳಿಕ ಸಾವಿರಾರು ಐಟಿ ವೃತ್ತಿಪರರಿಗೆ ಉದ್ಯೋಗಾವಕಾಶ ಸಿಗಲಿದೆ. ಇದರಿಂದ ಬೆಂಗಳೂರು ನಗರದ ಐಟಿ ವಲಯಕ್ಕೆ ಮತ್ತಷ್ಟು ಬಲ ಸಿಗಲಿದೆ. ಯುವಕರಿಗೆ ಹೊಸ ಅವಕಾಶಗಳು ತೆರೆದಿಡಲಿವೆ.
ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಿಸ್ತರಣೆ:
ಟಾಟಾ ಎಲೆಕ್ಟ್ರಾನಿಕ್ಸ್ ತನ್ನ ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷಾ ಸೌಲಭ್ಯಗಳನ್ನು ವಿಸ್ತರಿಸಲು ಯೋಜಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳು ಹೆಚ್ಚಾಗಲಿವೆ. ಇದು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಿದೆ. ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಹೆಜ್ಜೆ ಸಹಾಯಕವಾಗಲಿದೆ.
ವಿಮಾನಯಾನ ಕ್ಷೇತ್ರದಲ್ಲಿ MRO ಹಬ್:
ನಾಗರಿಕ ಮತ್ತು ರಕ್ಷಣಾ ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಗಾಗಿ ದಕ್ಷಿಣ ಭಾರತದ ಮೊದಲ MRO ಹಬ್ ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು 455 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಈ ಯೋಜನೆ ನಡೆಯುತ್ತಿದೆ. ಇದರಿಂದ ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಕರ್ನಾಟಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗುವ ಸಾಧ್ಯತೆ ಇದೆ.
ರಕ್ಷಣಾ ಉತ್ಪಾದನೆಯಲ್ಲಿ ಹೊಸ ಯೋಜನೆಗಳು:
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ H125 ಹೆಲಿಕಾಪ್ಟರ್ ಅಂತಿಮ ಅಸೆಂಬ್ಲಿ ಲೈನ್ ಸ್ಥಾಪಿಸಲು ಮುಂದಾಗಿದೆ. ಸ್ಥಳೀಯ ಫಿರಂಗಿ ಗನ್ ಉತ್ಪಾದನೆ ಮತ್ತು ಮಾನವರಹಿತ ವಾಯು ವಾಹನ ವ್ಯವಸ್ಥೆಗಳ ಅಭಿವೃದ್ಧಿಯೂ ನಡೆಯಲಿದೆ. ಈ ಯೋಜನೆಗಳು ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಸ್ಥಳೀಯ ಕೈಗಾರಿಕಾ ಬೆಳವಣಿಗೆಗೂ ಸಹಕಾರಿಯಾಗಲಿವೆ.
ನವೀಕರಿಸಬಹುದಾದ ಇಂಧನದಲ್ಲಿ ದೊಡ್ಡ ಹೆಜ್ಜೆ:
ಟಾಟಾ ಪವರ್ ಕರ್ನಾಟಕದಲ್ಲಿ 2,507 ಮೆಗಾವಾಟ್ಗಿಂತ ಹೆಚ್ಚು ಸಾಮರ್ಥ್ಯದ ವಿದ್ಯುತ್ ಯೋಜನೆಗಳನ್ನು ನಿರ್ಮಿಸುತ್ತಿದೆ. ಸೌರ ಮತ್ತು ಗಾಳಿ ಇಂಧನ ಯೋಜನೆಗಳು ಇದರಲ್ಲಿ ಸೇರಿವೆ. ಪರಿಸರ ಸ್ನೇಹಿ ಅಭಿವೃದ್ಧಿಗೆ ಈ ಯೋಜನೆಗಳು ಸಹಕಾರಿಯಾಗಲಿವೆ. ರಾಜ್ಯದಲ್ಲಿ ಶುದ್ಧ ಇಂಧನ ಬಳಕೆ ಹೆಚ್ಚಾಗಲಿದೆ.
ಆತಿಥ್ಯ ಕ್ಷೇತ್ರದಲ್ಲಿ ವಿಸ್ತರಣೆ:
ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ ಕರ್ನಾಟಕದಲ್ಲಿ ಒಂಬತ್ತು ಹೊಸ ಹೋಟೆಲ್ಗಳನ್ನು ಆರಂಭಿಸಲು ಯೋಜಿಸಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದರಿಂದ ಹೆಚ್ಚಿನ ಚಟುವಟಿಕೆಗಳು ನಡೆಯಲಿವೆ. ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.
ಒಟ್ಟಿನಲ್ಲಿ, ಟಾಟಾ ಗ್ರೂಪ್ ಕರ್ನಾಟಕದಲ್ಲಿ ಕೈಗೊಂಡಿರುವ ಮತ್ತು ಘೋಷಿಸಿರುವ ಹೂಡಿಕೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಲಿವೆ. ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಈ ಯೋಜನೆಗಳು ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ. ಕರ್ನಾಟಕವನ್ನು ದೇಶದ ಪ್ರಮುಖ ಕೈಗಾರಿಕಾ ಮತ್ತು ತಂತ್ರಜ್ಞಾನ ಕೇಂದ್ರವಾಗಿ ರೂಪಿಸುವಲ್ಲಿ ಈ ಹೂಡಿಕೆಗಳು ಪ್ರಮುಖ ಪಾತ್ರವಹಿಸಲಿವೆ.


Click it and Unblock the Notifications