ಏರ್ ಇಂಡಿಯಾ ಬಿಡ್ ನಲ್ಲಿ ಬಹು ನಿರೀಕ್ಷೆಯಂತೆ ಟಾಟಾ ಸನ್ಸ್ ಗೆಲುವು ದಾಖಲಿಸಿದ್ದು, ಈ ಗೆಲುವಿನೊಂದಿಗೆ ಮತ್ತೊಮ್ಮೆ ಏರ್ ಇಂಡಿಯಾವು ಟಾಟಾ ಕೈಗೆ ತಲುಪಿದೆ.
ಸರ್ಕಾರಿ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಟಾಟಾ ಸನ್ಸ್, ಸ್ಪೈಸ್ ಜೆಟ್ ನಂತಹ ದೊಡ್ಡ ಕಂಪನಿಗಳು ಏರ್ ಇಂಡಿಯಾ ಹರಾಜಿನಲ್ಲಿ ಬಿಡ್ ಮಾಡಿದ್ದವು. ಸಾಲ್ಟ್ ಸಾಫ್ಟ್ ವೇರ್ ಸೆಪ್ಟೆಂಬರ್ 15 ರಂದು ಅಂತಿಮ ಬಿಡ್ ಸಲ್ಲಿಸಿದರೆ, ಸ್ಪೈಸ್ ಜೆಟ್ ಪ್ರವರ್ತಕರು ಅಜಯ್ ಸಿಂಗ್ ಕೂಡ ಬಿಡ್ ನಲ್ಲಿ ಭಾಗವಹಿಸಿದ್ದರು. ಆದಾಗ್ಯೂ, ಟಾಟಾಸನ್ಸ್ ಫೈನಲ್ ಬಿಡ್ ಅನ್ನು ಗೆದ್ದಿದೆ.

ಸರ್ಕಾರಿ ಸ್ವಾಮ್ಯದ ಕಂಪನಿ ಏರ್ ಇಂಡಿಯಾದಲ್ಲಿ ಷೇರುಗಳನ್ನು ಮಾರಾಟ ಮಾಡಲು ಸರ್ಕಾರ ಬಹಳ ಸಮಯದಿಂದ ಪ್ರಯತ್ನಿಸುತ್ತಿತ್ತು. ಈಗ ಸಮಿತಿಯು ಇದಕ್ಕಾಗಿ ಟಾಟಾಸನ್ಸ್ ಆಯ್ಕೆ ಮಾಡಿದೆ. ಏರ್ ಇಂಡಿಯಾ ಈ ಹಿಂದೆ ಟಾಟಾ ಗ್ರೂಪ್ ಕಂಪನಿಯಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
1932 ರಲ್ಲಿ ಏರ್‌ಇಂಡಿಯಾವನ್ನು ಜೆಆರ್‌ಡಿ ಟಾಟಾ ಸ್ಥಾಪಿಸಿದರು, ಆದರೆ ವಾಯುಯಾನ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿದ ನಂತರ, ಸರ್ಕಾರವು ತನ್ನ ಪಾಲನ್ನು ಖರೀದಿಸಿತು. ಏರ್ ಇಂಡಿಯಾವನ್ನು ಸಾರ್ವಜನಿಕ ಕಂಪನಿಯಾಗಿ ಮಾಡಲಾಗಿದೆ. ಇದನ್ನು 1953ರಲ್ಲಿ ರಾಷ್ಟ್ರೀಕರಣ ಮಾಡಲಾಗಿತ್ತು. ಹೀಗೆ ಸರಕಾರದ ಒಡೆತನಕ್ಕೆ ಸೇರಿದ ಸಂಸ್ಥೆಯನ್ನು ಮತ್ತೆ ಟಾಟಾ ಸನ್ಸ್ ಖರೀದಿಸಿದೆ.
ಆದಾಗ್ಯೂ, ಏರ್ ಇಂಡಿಯಾ ಸಾರ್ವಜನಿಕ ಕಂಪನಿಯಾದ ನಂತರ ಭಾರೀ ನಷ್ಟದಲ್ಲಿತ್ತು. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2019-20ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ವಿಮಾನಯಾನ ಸಂಸ್ಥೆಯು 38,366.39 ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ಏರ್ ಇಂಡಿಯಾವನ್ನು ಮಾರಾಟ ಮಾಡದಿದ್ದರೆ, ಅದನ್ನು ಮುಚ್ಚುವುದು ಒಂದೇ ಆಯ್ಕೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಏರ್ ಇಂಡಿಯಾದ ಒಟ್ಟು ಸ್ಥಿರ ಆಸ್ತಿಗಳು 45,863.27 ಕೋಟಿ ರೂಪಾಯಿ. ಕಂಪನಿಯನ್ನು ಸಾಲದ ಹೊರೆಯಿಂದ ಹೊರತರಲು ಈ ಹಿಂದೆ ಪ್ರಯತ್ನಗಳು ನಡೆದಿವೆ.
ಮೊದಲ ಪ್ರಯತ್ನದಲ್ಲಿ ವಿಫಲಗೊಂಡಿದ್ದ ಸರ್ಕಾರ
ಹೌದು ಏರ್ ಇಂಡಿಯಾದಲ್ಲಿನ ಪಾಲನ್ನು ಹಿಂತೆಗೆದುಕೊಳ್ಳಲು ಸರ್ಕಾರ ನಡೆಸಿದ ಎರಡನೇ ಪ್ರಯತ್ನ ಇದಾಗಿದ್ದು, ಕೊನೆಗೂ ಸಫಲಗೊಂಡಿದೆ. ಈ ಹಿಂದೆ 2018ರಲ್ಲಿ ವಿಮಾನಯಾನ ಸಂಸ್ಥೆಯಲ್ಲಿರುವ ಶೇ. 76ರಷ್ಟು ಷೇರನ್ನು ಮಾರಾಟ ಮಾಡುವ ಸರಕಾರದ ಪ್ರಸ್ತಾವನೆಗೆ ಯಾವುದೇ ಹೂಡಿಕೆದಾರರು ಆಸಕ್ತಿ ವ್ಯಕ್ತಪಡಿಸಿರಲಿಲ್ಲ. ಕಾರಣ ಏರ್ ಇಂಡಿಯಾ ಖಾಸಗೀಕರಣಗೊಳಿಸಿದ ನಂತರವೂ ಸರ್ಕಾರ ಇದರಲ್ಲಿ ಶೇ. 26ರಷ್ಟು ಪಾಲನ್ನು ಉಳಿಸಿಕೊಳ್ಳಲು ಯೋಜಿಸಿತ್ತು. ಆದರೆ ಈ ಬಾರಿ ಶೇಕಡಾ 100ರಷ್ಟು ಪಾಲನ್ನು ಮಾರಾಟ ಮಾಡಲು ಒಪ್ಪಿಕೊಂಡಾಗ ಅನೇಕ ಕಂಪನಿಗಳು ಬಿಡ್‌ಗೆ ಮುಂದಾಗಿದ್ದು, ಟಾಟಾ ಸನ್ಸ್ ಫೈನಲ್ ಬಿಡ್ ಗೆದ್ದುಕೊಂಡಿದೆ.
ಪ್ರಸ್ತುತ ಪ್ರಸ್ತಾವನೆಯ ಭಾಗವಾಗಿ, ಏರ್ ಇಂಡಿಯಾದ ಮಾಲಿಕತ್ವವನ್ನು 23,000 ಕೋಟಿ ರೂ. ಸಾಲದೊಂದಿಗೆ ಖಾಸಗಿ ಮಾಲೀಕರಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಸ್ತಾವನೆಯಲ್ಲಿ, ಉಳಿದಿರುವ ಸಾಲವನ್ನು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಐಎಎಚ್‌ಎಲ್) ಗೆ ವರ್ಗಾಯಿಸಲು ಯೋಜಿಸಲಾಗಿದೆ.


Click it and Unblock the Notifications