ಭಾರತದಲ್ಲಿ ಕಾಫಿ ಪ್ರಿಯರ ಜನಪ್ರಿಯ ಮಳಿಗೆಗಳ ಪೈಕಿ ಕೆಫೆ ಕಾಫಿಡೇ ನಂತರ ಲಗ್ಗೆ ಇಟ್ಟ ಪ್ರತಿಸ್ಪರ್ಧಿ ಸ್ಟಾರ್‌ಬಕ್ಸ್ ನಿಧಾನಗತಿಯಲ್ಲಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಕಂಡುಕೊಳ್ಳುತ್ತಿದೆ. ಕೋವಿಡ್ 19 ನಿರ್ಬಂಧದ ಅವಧಿಯಲ್ಲಿ ಇತರೆ ವಾಣಿಜ್ಯ ಬೆಳೆ, ಮಳಿಗೆಗಳು ಅನುಭವಿಸಿದ ಕಷ್ಟ ನಷ್ಟಗಳು ಟಾಟಾ ಸ್ಟಾರ್‌ಬಕ್ಸ್ ಸಂಸ್ಥೆಗೂ ಎದುರಾಗಿತ್ತು. ಆದರೆ, ಟಾಟಾ ಸ್ಟಾರ್‌ಬಕ್ಸ್ ವಾರ್ಷಿಕ ಆದಾಯ ಏರಿಕೆಯಾಗಿದ್ದು, ನಿವ್ವಳ ನಷ್ಟ ಪ್ರಮಾಣವನ್ನು ತಗ್ಗಿಸಿಕೊಂಡಿದೆ.
ದೇಶದೆಲ್ಲೆಡೆ ಕಾಫಿ ಕೆಫೆ ಮಳಿಗೆಗಳನ್ನು ಹೊಂದಿರುವ ಟಾಟಾ ಸ್ಟಾರ್‌ಬಕ್ಸ್ ಲಿಮಿಟೆಡ್ 2021-22ರಲ್ಲಿ ಶೇ 76 ರಷ್ಟು ಆದಾಯ ಹೆಚ್ಚಿಸಿಕೊಂಡು 636 ಕೋಟಿ ರೂ ಗಳಿಕೆ ಕಂಡಿದೆ. ಕೋವಿಡ್ 19 ಸಂಬಂಧಿತ ನಿರ್ಬಂಧಗಳು ತೆರವುಗೊಂಡ ಬಳಿಕ ತ್ರೈಮಾಸಿಕವೊಂದರಲ್ಲೆ ತನ್ನ ನಿವ್ವಳ ನಷ್ಟವನ್ನು ಕಡಿಮೆ ಮಾಡಿಕೊಂಡಿದೆ.
ಟಾಟಾ ಗ್ರಾಹಕ ಉತ್ಪನ್ನಗಳ ಕುರಿತು ಸಂಸ್ಥೆ ಇತ್ತೀಚಿಗೆ ಪ್ರಕಟಿಸಿರುವ ವಾರ್ಷಿಕ ವರದಿಯ ಪ್ರಕಾರ ಮಾರ್ಚ್ 31, 2022 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಅಸ್ತಿತ್ವದಲ್ಲಿರುವ ಸ್ಟೋರ್‌ಗಳು ಮತ್ತು ಹೊಸ ಸ್ಟೋರ್‌ಗಳ ಸೇರ್ಪಡೆಯಿಂದ ಆದಾಯದ ಬೆಳವಣಿಗೆಯಾಗಿದೆ ಎನ್ನಲಾಗಿದೆ.

"636 ಕೋಟಿ ರೂ.ಗಳಲ್ಲಿ ಕಾರ್ಯಾಚರಣೆಗಳಿಂದ ಆದಾಯವು ಶೇ 76 ರಷ್ಟು ಬೆಳೆದಿದೆ ಮತ್ತು ನಿವ್ವಳ ನಷ್ಟವು ಗಮನಾರ್ಹವಾಗಿ ಕಡಿಮೆಯಾಗಿದೆ" ಎಂದು TCPL ತನ್ನ JV ಯ ಕಾರ್ಯಕ್ಷಮತೆಯ ವಿವರಗಳನ್ನು ಹಂಚಿಕೊಂಡಿದೆ. ಆದರೆ, ನಷ್ಟದ ಪ್ರಮಾಣವನ್ನು ಬಹಿರಂಗಪಡಿಸಿಲ್ಲ.
"ಕೋವಿಡ್ 19 ಸಾಂಕ್ರಾಮಿಕ ರೋಗದ ಎರಡನೇ ಅಲೆ ನಂತರ ಲಾಕ್ ಡೌನ್ ತೆರವು ಮಾಡಿದ ಬಳಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿದೆ" ವರ್ಷದಲ್ಲಿ 50 ಹೊಸ ಮಳಿಗೆಗಳನ್ನು ಸ್ಥಾಪಿಸಿ, ದಾಖಲೆ ಬರೆಯಲು ನೆರವಾಯಿತು ಎಂದು ಸಂಸ್ಥೆ ಹೇಳಿದೆ. ಒಟ್ಟಾರೆ, ಭಾರತದ 26 ಪಟ್ಟಣಗಳಲ್ಲಿ 268 ಮಳಿಗೆಗಳನ್ನು ಟಾಟಾ ಸ್ಟಾರ್‌ಬಕ್ಸ್ ಹೊಂದಿದೆ.
2012 ರಲ್ಲಿ ಟಾಟಾ ಸಂಸ್ಥೆಯ ಎಫ್‌ಎಂಸಿಜಿ ಅಂಗ ಸಂಸ್ಥೆ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) ಹಾಗೂ ಸ್ಟಾರ್‌ಬಕ್ಸ್ ಕಾರ್ಪೊರೇಷನ್ ನಡುವೆ 50:50 ಅನುಪಾತದಲ್ಲಿ ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕಲಾಯಿತು.
"2021-22 ರ ಹಣಕಾಸು ವರ್ಷದಲ್ಲಿ, ಕಂಪನಿಯು ಈಕ್ವಿಟಿ ಬಂಡವಾಳಕ್ಕಾಗಿ 86 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ" ಎಂದು TCPL ಹೇಳಿದೆ.
ಕೋವಿಡ್ 19 ನಿರ್ಬಂಧಗಳು ಸರಾಗವಾಗುತ್ತಿದ್ದಂತೆ, ಟಾಟಾ ಸ್ಟಾರ್‌ಬಕ್ಸ್ ವ್ಯಾಪಾರದಲ್ಲಿ ಮಾರಾಟ ಚೇತರಿಕೆ ಕಂಡಿತು ಮತ್ತು ಮಾರ್ಚ್ ವೇಳೆಗೆ, ಸ್ಟೋರ್ ಕಾರ್ಯಾಚರಣೆ ಸೂಚ್ಯಂಕವು ಶೇ 95 ತಲುಪಿತು ಎಂದು TCPL ಹೇಳಿದೆ.
"ನಮ್ಮ ವಿತರಣಾ ಚಾನೆಲ್‌ನಲ್ಲಿ ನಾವು ನಿರ್ಬಂಧಗಳೊಂದಿಗೆ ಸರಾಸರಿ ದೈನಂದಿನ ವಹಿವಾಟುಗಳಲ್ಲಿ ಹೆಚ್ಚಳವನ್ನು ಕಂಡಿದ್ದೇವೆ ಮತ್ತು ಕೋವಿಡ್ ಪೂರ್ವ ಅವಧಿಯ ವಹಿವಾಟು ಮಟ್ಟದ ಗುರಿಯನ್ನು ದಾಟಿದ್ದೇವೆ" ಎಂದು ಕಂಪನಿ ಹೇಳಿದೆ.


Click it and Unblock the Notifications