ಈಗಾಗಲೇ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಾ ಬಂದಿದೆ. ಕಳೆದ ವರ್ಷದಿಂದ ಆರಂಭವಾದ ಲೇ ಆಫ್ ಪ್ರಕ್ರಿಯೆಯು ಇನ್ನೂ ಕೂಡಾ ನಿಂತಿಲ್ಲ. ಇನ್ನು ಕೆಲವು ದೈತ್ಯ ಸಂಸ್ಥೆಗಳು ಒಂದಲ್ಲ ಎರಡಲ್ಲ ನಾಲ್ಕಾರು ಸುತ್ತಿನಲ್ಲಿ ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ.
ಈ ಉದ್ಯೋಗ ಕಡಿತವು ಬರೀ ಭಾರತಕ್ಕೆ ಸೀಮಿತವಾಗಿರುವುದಲ್ಲ. ಜಾಗತಿಕವಾಗಿ ಈ ಸಮಸ್ಯೆ ಇದೆ. ಸಂಸ್ಥೆಗಳು ತಮ್ಮ ವೆಚ್ಚವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುತ್ತಿದೆ. ಈಗ ಟಾಟಾ ಸ್ಟೀಲ್ಸ್ ಕೂಡಾ ಇಂತಹುದ್ದೆ ಕ್ರಮಕ್ಕೆ ಮುಂದಾಗಿದೆ. ಸಂಸ್ಥೆ ಎಲ್ಲಿ, ಎಷ್ಟು ಮಂದಿಯನ್ನು ಲೇಆಫ್ ಮಾಡಿದೆ, ಕಾರಣವೇನು ನೀಡಿದೆ ತಿಳಿಯೋಣ ಮುಂದೆ ಓದಿ....

ಟಾಟಾ ಸ್ಟೀಲ್‌ನಲ್ಲಿ ಉದ್ಯೋಗ ಕಡಿತ
ಟಾಟಾ ಸ್ಟೀಲ್ ನೆದರ್‌ಲ್ಯಾಂಡ್ ತನ್ನ ಮಾರುಕಟ್ಟೆ ಸ್ಥಿತಿಯನ್ನು ಸುಧಾರಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕ ಕೆಲಸಗಾರರನ್ನು ಒಳಗೊಂಡಂತೆ 800 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಈಗ ಉದ್ಯೋಗ ಕಡಿತವನ್ನು ಮಾಡಿದರೂ ಕೂಡಾ ಉದ್ಯೋಗ ನೇಮಕಾತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಹೇಳಿದೆ.
"ಟಾಟಾ ಸ್ಟೀಲ್ ತನ್ನ ಮಾರುಕಟ್ಟೆ ಸ್ಥಾನವನ್ನು ಸುಧಾರಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಆದರೆ ಅದು ಸಾಕಾಗುತ್ತಿಲ್ಲ, ಇನ್ನೂ ಪ್ರಯತ್ನದ ಅಗತ್ಯವಿದೆ. ಕಂಪನಿಯು ಸಿಬ್ಬಂದಿ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಬೇಕಾಗುತ್ತದೆ. ಉದ್ಯೋಗಿಗಳು ಮತ್ತು ಅವರ ಕುಟುಂಬದ ಮೇಲೆ ಉದ್ಯೋಗ ಕಡಿತ ಪ್ರಭಾವ ಬೀರುವ ಕಾರಣದಿಂದಾಗಿ ಈ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಕಠಿಣ ನಿರ್ಧಾರವಾಗಿದೆ," ಎಂದು ಟಾಟಾ ಸ್ಟೀಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅದರಂತೆ, ಉದ್ಯೋಗ ಕಡಿತವು ಸುಮಾರು 500 ಟಾಟಾ ಸ್ಟೀಲ್ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಟಾಟಾ ಸ್ಟೀಲ್ ಹೇಳಿದೆ. "ಐದು-ಶಿಫ್ಟ್ ವ್ಯವಸ್ಥೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಬಲವಂತವಾಗಿ ಶಿಫ್ಟ್ ಮುಂದುವರಿಸಲು ಹೇಳಲಾಗುವುದಿಲ್ಲ. ಕಂಪನಿಯು ಸಾಮಾಜಿಕ ಯೋಜನೆಯನ್ನು ಚರ್ಚಿಸುತ್ತದೆ," ಎಂದು ಸಂಸ್ಥೆ ಹೇಳಿದೆ.
"ಇನ್ನು ಉಳಿದಂತೆ 300 ತಾತ್ಕಾಲಿಕ ಕಾರ್ಮಿಕರನ್ನು ತೆಗೆದುಹಾಕಲಾಗುತ್ತದೆ. ಖಾಲಿ ಹುದ್ದೆಗಳನ್ನು ತುಂಬಲು ವಿಫಲವಾಗಿರುವುದು ಉತ್ಪಾದನೆಗೆ ನೇರವಾಗಿ ಸಂಬಂಧಿಸದಲ್ಲ. ಸ್ವಚ್ಛ, ಹಸಿರು ಮತ್ತು ಹೆಚ್ಚು ಬೃಹತ್ ಆದ ಉಕ್ಕಿನ ಕಂಪನಿಯಾಗಿ ಪರಿವರ್ತನೆಯಾಗುವ ಹಿತಾಸಕ್ತಿಯಿಂದಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಟಾಟಾ ಸ್ಟೀಲ್ ಹೇಳಿದೆ.
"ಈಗ ಮತ್ತು ಮುಂಬರುವ ವರ್ಷಗಳಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಆದ್ದರಿಂದ ಪ್ರಬಲ ಸ್ಪರ್ಧಾತ್ಮಕ ಸ್ಥಾನವನ್ನು ಹೊಂದುವುದು ಮತ್ತು ನಿರ್ವಹಿಸುವುದು ಮತ್ತು ವೇಗವಾಗಿ ಬದಲಾಗುತ್ತಿರುವ ಸಂದರ್ಭಗಳು ಮತ್ತು ಹೊಸ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಲು ಸಾಕಷ್ಟು ಚುರುಕುತನವನ್ನು ಹೊಂದಿರುವುದು ಮುಖ್ಯವಾಗಿದೆ," ಎಂದು ಸಂಸ್ಥೆ ಹೇಳಿಕೊಂಡಿದೆ.
"ಉದ್ಯೋಗಗಳ ಸಂಖ್ಯೆಯಲ್ಲಿ ಕಡಿತ ಮಾಡಿದರೂ ಕೂಡಾ ನೇಮಕಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದಿಲ್ಲ. ತಾಂತ್ರಿಕವಾಗಿ ತರಬೇತಿ ಪಡೆದ ಜನರ ಅಗತ್ಯತೆ, ಉದಾಹರಣೆಗೆ ಉತ್ಪಾದನೆಯಲ್ಲಿ ಇದೆ," ಎಂದು ಸಂಸ್ಥೆ ತಿಳಿಸಿದೆ.
ಬಿಎಸ್‌ಇಯಲ್ಲಿ, ಟಾಟಾ ಸ್ಟೀಲ್ ಷೇರುಗಳು ಸೋಮವಾರದಂದು 120.95 ರೂಪಾಯಿಗೆ ವಹಿವಾಟು ಕೊನೆ ಮಾಡಿದೆ. ಎನ್‌ಎಸ್‌ಸಿಯಲ್ಲಿ ಟಾಟಾ ಸ್ಟೀಲ್ ಷೇರುಗಳು ಸೋಮವಾರದಂದು 120.80 ರೂಪಾಯಿಗೆ ಸ್ಥಿರವಾಗಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 1.48 ಲಕ್ಷ ಕೋಟಿ ರೂಪಾಯಿ ಆಗಿದೆ.


Click it and Unblock the Notifications