ಅಮೆರಿಕನ್ ಆರ್ಥಿಕ ತಜ್ಞ ಹಾಗೂ ನೊಬೆಲ್ ವಿಜೇತ ಜೋಸೆಫ್ ಇ ಸ್ಟಿಗ್ಲಿಜ್ ಅವರು ಭಾರತ ನಡೆಸುತ್ತಿರುವ ಕೊರೊನಾ ಹೋರಾಟಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿದ್ದಾರೆ. ಸರ್ಕಾರಕ್ಕೆ ಅಗತ್ಯ ಇರುವ ಹಣ ಸಂಗ್ರಹಕ್ಕಾಗಿ ಅತ್ಯಂತ ಶ್ರೀಮಂತರ ಮೇಲೆ ತೆರಿಗೆ ಹಾಕುವಂತೆ ಹೇಳಿದ್ದಾರೆ. ಈ ವಿಚಾರದಲ್ಲಿ ಭಾರತೀಯ ಸರ್ಕಾರ ಸಂಕೋಚ ಪಡಬಾರದು. ಕೊರೊನಾ ಬಿಕ್ಕಟ್ಟು ತಡೆಗೆ ಖರ್ಚನ್ನು ತಡೆಯಬಾರದು ಹಾಗೂ ದುರ್ಬಲ ವರ್ಗದವರಿಗೆ ಸಹಾಯ ಮಾಡಬೇಕು ಎಂದಿದ್ದಾರೆ.
"ಹೆಚ್ಚು ಪರಿಣಾಮ ಬೀರುವ ಕ್ಷೇತ್ರಗಳತ್ತ ಹಣ ತೊಡಗಿಸುವುದಕ್ಕೆ ಯೋಚಿಸಬೇಕೆ ವಿನಾ ಕಡಿಮೆ ಪರಿಣಾಮ ಬೀರುವ ಕಡೆಗೆ ಅಲ್ಲ. ಒಂದು ವೇಳೆ ಸಂಪನ್ಮೂಲ ದೊರೆಯದಿದ್ದಲ್ಲಿ, ಹೇಗಿದ್ದರೂ ನಿಮ್ಮಲ್ಲಿ (ಭಾರತದಲ್ಲಿ) ಬೇಕಾದಷ್ಟು ಜನ ಶತಕೋಟ್ಯಧಿಪತಿಗಳು ಇದ್ದಾರೆ. ಅವರ ಮೂಲಕ ತೆರಿಗೆ ಸಂಗ್ರಹಿಸಿ," ಎಂದು ಎಫ್ ಐಸಿಸಿಐ ಆಯೋಜಿಸಿದ್ದ ಸಂವಾದವೊಂದರಲ್ಲಿ ಸ್ಟಿಗ್ಲಿಜ್ ಹೇಳಿದ್ದಾರೆ.
ವಿಪರೀತ ಸ್ವಾವಲಂಬನೆಯಿಂದ ಜೀವನ ಮಟ್ಟ ಕಡಿಮೆ
ಕೋವಿಡ್ ತೆರಿಗೆ ಎಂದು ಭಾರತದ ಅತಿ ಶ್ರೀಮಂತರ ಮೇಲೆ ಹೇರುವ ಬಗ್ಗೆ ಈಚೆಗೆ ಚರ್ಚೆ ನಡೆಯುತ್ತಿದೆ. ಇನ್ನು ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಬಗ್ಗೆ ಮಾತನಾಡಿದ ಅವರು, ವಿಪರೀತ ಸ್ವಾವಲಂಬನೆಯು ಜೀವನಮಟ್ಟವನ್ನು ಕಡಿಮೆ ಮಾಡುತ್ತದೆ. ಏಕೆಂದರೆ, ಲಸಿಕೆ ಸೇರಿದಂತೆ ಸಾಕಷ್ಟು ಉತ್ಪನ್ನಗಳು ಆಮದಾಗುತ್ತದೆ. ಇದು ವಾಸ್ತವವಾದ ವಿಚಾರ ಅಲ್ಲ. ಕೊರೊನಾ ಮತ್ತು ತಾಪಮಾನ ಬದಲಾವಣೆ ವಿಚಾರಗಳು ಸಹಕಾರ ಹಾಗೂ ಒಗ್ಗೂಡಿ ಕೆಲಸ ಮಾಡುವ ಅಗತ್ಯವನ್ನು ಹೇಳಿವೆ ಎಂದಿದ್ದಾರೆ.
ಲಾಕ್ ಡೌನ್ ಉದ್ದೇಶವೇ ಸೋಲುವಂತೆ ಮಾಡಿತು
ಭಾರತ ಹಾಗೂ ಯುಎಸ್ ಎರಡೂ ಕೊರೊನಾ ಸನ್ನಿವೇಶವನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಸ್ಟಿಗ್ಲಿಜ್ ಅಭಿಪ್ರಾಯಪಟ್ಟಿದ್ದಾರೆ. ವಲಸಿಗ ಕಾರ್ಮಿಕರನ್ನು ಹೇಗೆಂದರೆ ಹಾಗೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದು ಲಾಕ್ ಡೌನ್ ಉದ್ದೇಶವೇ ಸೋಲುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ವಿಭಜನೆಯ ರಾಜಕೀಯ
ಯುಎಸ್ ನಲ್ಲಿ ಜನಾಂಗೀಯ ಹಾಗೂ ಆದಾಯ ಆಧಾರದಲ್ಲಿ ವಿಭಜನೆ ದೊಡ್ಡ ಮಟ್ಟದಲ್ಲಿ ಆಗುತ್ತಿರುವುದನ್ನು ಟೀಕಿಸಿದ ಅವರು, ಅದೇ ರೀತಿಯ ವಿಭಜನೆಯ ರಾಜಕೀಯ ಭಾರತದಲ್ಲಿ ಇದೆ ಎಂದು ಹೇಳಿದ್ದಾರೆ. ಇದರಿಂದಾಗಿಯೇ ಸಮಾಜ ಹಾಗೂ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications