ತುಮಕೂರಿಗೆ ಮತ್ತೊಂದು ಸಿಹಿಸುದ್ದಿ.. ಹೌದು, ತುಮಕೂರಿನಿಂದ ಶಿರಾ, ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ಹೊಸದಾಗಿ ನಿರ್ಮಾಣವಾಗಲಿರುವ ರೈಲ್ವೆ ಬ್ರಾಡ್ ಗೇಜ್ ಮಾರ್ಗದೊಂದಿಗೆ ಪ್ರತ್ಯೇಕ ಸರಕು ಸಾಗಣೆ ಮಾರ್ಗವನ್ನು ಕೂಡ ನಿರ್ಮಿಸಬೇಕು ಎಂದು ಶಿರಾ ಶಾಸಕ ಹಾಗೂ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರು ಅವರು ಹೇಳಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆ ಕಾಮಗಾರಿ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರು ಈ ಮಾಹಿತಿಯನ್ನು ತಿಳಿಸಿದ್ದಾರೆ.

ಚಿತ್ರದುರ್ಗ ಸಂಸದರಾದ ಗೋವಿಂದ ಕಾರಜೋಳ, ರಾಜ್ಯ ಯೋಜನೆ ಹಾಗೂ ಸಚಿವರಾದ ಸುಧಾಕರ್, ಚಳ್ಳಕೆರೆ ಶಾಸಕರಾದ ರಘುಮೂರ್ತಿ ಅವರ ಉಪಸ್ಥಿತಿಯಲ್ಲಿ ಈ ಸಂಬಂಧ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ, ತುಮಕೂರಿನಿಂದ ಶಿರಾ ಮೂಲಕ ಚಿತ್ರದುರ್ಗದವರೆಗೆ ರೈಲ್ವೆ ಸರಕು ಸಾಗಣೆ ಮಾರ್ಗ ನಿರ್ಮಾಣದಿಂದ ಸುತ್ತಮುತ್ತಲ ಭಾಗದ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಗೆ ತುಂಬಾ ಅನುಕೂಲವಾಗಲಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಯೋಜನೆಗಳ ಭಾಗವಾಗಿ ತುಮಕೂರು ಸುತ್ತಮುತ್ತ ಆಹಾರೋದ್ಯಮಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ. ಜೊತೆಗೆ, ಮಧ್ಯ ಕರ್ನಾಟಕ ಭಾಗದಲ್ಲಿ 30 ಮಿನಿ ಫುಡ್ ಪಾರ್ಕ್ ಗಳನ್ನು ನಿರ್ಮಿಸುವ ಪ್ರಸ್ತಾವವೂ ಇದೆ. ಶಿರಾ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಪರಿಶೀಲಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ, ತುಮಕೂರು-ಶಿರಾ-ಚಿತ್ರದುರ್ಗ ನಡುವೆ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗ ನಿರ್ಮಾಣವು ಅತ್ಯಂತ ಸೂಕ್ತ ನಿರ್ಧಾರವಾಗಲಿದ್ದು, ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಜಯಚಂದ್ರ ಅವರು ವಿವರಸಿದ್ದಾರೆ.
ಕೇಂದ್ರ ಸರ್ಕಾರವು ದೇಶದ ಪೂರ್ವ ಭಾಗವನ್ನು ಸಂಪರ್ಕಿಸುವ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗ ನಿರ್ಮಿಸಿದ ನಂತರ ಪಂಜಾಬ್ ಮತ್ತು ಹರ್ಯಾಣದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಅದೇ ರೀತಿ ತುಮಕೂರು-ಚಿತ್ರದುರ್ಗ ಪ್ರತ್ಯೇಕ ಸರಕು ಸಾಗಣೆ ಮಾರ್ಗ ನಿರ್ಮಿಸಿದರೆ ಈ ಪ್ರದೇಶದಲ್ಲೂ ಕೃಷಿ ಆಧರಿತ ಉದ್ಯಮಗಳು ಹಾಗೂ ಇತರ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ಮಾಹಿತಿಯನ್ನು ತಿಳಿಸಿದ್ದಾರೆ.
498 ಕೋಟಿ ಅನುದಾನ
ತುಮಕೂರು-ಚಿತ್ರದುರ್ಗ-ದಾವಣಗೆರೆ ಬ್ರಾಡ್ ಗೇಜ್ ರೈಲ್ವೆ ಮಾರ್ಗದಲ್ಲಿ ತಿಮ್ಮರಾಜನಹಳ್ಳಿಯಿಂದ ತಾವರೆಕೆರೆಯವರೆಗೆ 498ರೂ ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಂದವಾಗಿದ್ದು,ಶಿರಾ ಸೇರಿದಂತೆ ನಾಲ್ಕು ಕಡೆಗಳಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಶಿರಾ ಕ್ಷೇತ್ರದ ಶಾಸಕ ಹಾಗೂ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಈ ಕಾಮಗಾರಿ ಪೂರ್ಣಗೊಳಲು ಒಟ್ಟು 41 ಕಿ.ಮೀ. ಉದ್ದದ ಈ ಕಾಮಗಾರಿಗೆ ಫರೀದಾಬಾದ್ ನ ಮೆಸರ್ಸ್ ಕೆ.ಆರ್.ಸಿ.ಆಲ್ಟಿಸ್ ಜಾಯಿಂಟ್ ವೆಂಚರ್ ಎಂಬ ಏಜೆನ್ಸಿಯೊಂದಿಗೆ ಒಪ್ಪಂದವಾಗಿದ್ದು, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ ಮತ್ತು ತಾವರೆಕೆರೆಯಲ್ಲಿ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ. ಒಟ್ಟು 11 ದೊಡ್ಡ ಸೇತುವೆಗಳು, 55 ಕಿರುಸೇತುವೆ-ಕಲ್ವರ್ಟ್ ಗಳು, 35 ಓವರ್ ಬ್ರಿಜ್ ಹಾಗೂ 35 ಅಂಡರ್ ಬ್ರಿಜ್ ಗಳು ಕಾಮಗಾರಿಯ ಭಾಗವಾಗಿರುತ್ತವೆ ಎಂದು ಹೇಳಿದ್ದಾರೆ.
ಈ ರೈಲು ಮಾರ್ಗವು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸೀಬಿಯಿಂದ ಆರಂಭವಾಗಿ ಧರ್ಮಪುರದ ಮೂಲಕ 41 ಕಿ.ಮೀ. ಉದ್ದಕ್ಕೆ ಹಾದುಹೋಗುತ್ತದೆ. ಇದರಿಂದ ಶಿರಾ ತಾಲ್ಲೂಕಿನಲ್ಲಿ ಶೇಂಗಾ, ತೆಂಗಿನಕಾಯಿ, ಅಡಿಕೆ, ಹುಣಸೆಹಣ್ಣು, ತರಕಾರಿ ಮತ್ತು ದವಸ ಧಾನ್ಯಗಳನ್ನು ಬೆಳೆಯುವ ರೈತರಿಗೆ ಉತ್ಪನ್ನಗಳ ಸಾಗಣೆ ಹಾಗೂ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗುತ್ತದೆ.


Click it and Unblock the Notifications