ನವದೆಹಲಿ, ಮಾರ್ಚ್ 25: ಮನುಕುಲವನ್ನು ಪ್ರಾಚೀನ ಕಾಲದಿಂದಲೂ ಕಾಡುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಕ್ಷಯ (ಟಿಬಿ) ಕೂಡಾ ಒಂದಾಗಿದ್ದು, ಇದರ ನಿರ್ಮೂಲನೆಗೆ ಭಾರತ ಸರ್ಕಾರ ಸಹಿತ ವಿಶ್ವಸಂಸ್ಥೆ ಶ್ರಮಿಸುತ್ತಿದೆ. ಮತ್ತೊಂದೆಡೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಭಾರತದಲ್ಲಿ ವಯಸ್ಕರ ಮೇಲೆ "ಕ್ಷಯರೋಗದ ವಿರುದ್ದ ಲಸಿಕೆ" ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಭಾನುವಾರ ಹೇಳಿದೆ.
ವಾರ್ಷಿಕವಾಗಿ 1.6 ಮಿಲಿಯನ್ ಜನರ ಸಾವಿಗೆ ಕಾರಣವಾಗಿರುವ ವಿಶ್ವದ ಮಾರಕ ಸಾಂಕ್ರಾಮಿಕ ರೋಗ ಕ್ಷಯದ ವಿರುದ್ಧದ ಹೋರಾಟದಲ್ಲಿ ಲಸಿಕೆಯ ಅಭಿವೃದ್ದಿಯೂ "ದೈತ್ಯ ಹೆಜ್ಜೆ" ಎಂದು ಬಣ್ಣಿಸಲಾಗಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಸ್ಪ್ಯಾನಿಷ್ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಬಯೋಫ್ಯಾಬ್ರಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ "MTBVAC " ಲಸಿಕೆಯನ್ನು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಬ್ಯಾಕ್ಟೀರಿಯಾದ ಮಾನವ ತಳಿಯಿಂದ ಪಡೆಯಲಾಗಿದೆ. ಪ್ರಸ್ತುತ ಲಭ್ಯವಿರುವ ಏಕೈಕ ಕ್ಷಯರೋಗ (TB) ಲಸಿಕೆಯಾದ BCG (ಬ್ಯಾಸಿಲಸ್ ಕ್ಯಾಲ್ಮೆಟ್ ಗೆರಿನ್) ಲಸಿಕೆಗಿಂತ ಹೆಚ್ಚು ಪರಿಣಾಮಕಾರಿ ಮತ್ತು ದೀರ್ಘಕಾಲೀನ ಪರ್ಯಾಯ ಲಸಿಕೆಯಾಗುವ ಭರವಸೆ MTBVAC ಹೊಂದಿದೆ. ಇದಲ್ಲದೇ ವಯಸ್ಕರು ಮತ್ತು ಹದಿಹರೆಯದವರಿಗೆ TB ತಡೆಗಟ್ಟಲು ಪ್ರಸ್ತುತ ಯಾವುದೇ ಪರಿಣಾಮಕಾರಿ ಲಸಿಕೆ ಇಲ್ಲ. ಹೀಗಾಗಿ MTBVAC ಆಶಾಕಿರಣವಾಗಲಿದೆ.
ಈ ಕ್ಲಿನಿಕಲ್ ಪ್ರಯೋಗಗಳು MTBVAC ಯ ಸುರಕ್ಷತೆ, ಇಮ್ಯುನೊಜೆನಿಸಿಟಿ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸುವ ಗುರಿಯನ್ನು ಹೊಂದಿವೆ. ಈ ಲಸಿಕೆಯ ಪ್ರಯೋಗಗಳು ಲಸಿಕೆಯ ಸುರಕ್ಷತೆ, ಪ್ರತಿರಕ್ಷಣಾ ಪ್ರತಿಕ್ರಿಯೆ ಮತ್ತು ವಯಸ್ಕರು ಮತ್ತು ಹದಿಹರೆಯದವರಲ್ಲಿ ಟಿಬಿಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿತ್ವವನ್ನು ನಿರ್ಣಯಿಸುತ್ತವೆ. MTBVAC ಅನ್ನು ಮೂರು ದಶಕಗಳ ಸಂಶೋಧನೆಯ ನಂತರ ಅಭಿವೃದ್ಧಿಪಡಿಸಲಾಗಿದೆ.
"ಟಿಬಿಯು ವಿಶ್ವದಲ್ಲಿ ಪ್ರಮುಖವಾಗಿ ಸಾವಿಗೀಡಾಗಲು ಕಾರಣವಾಗುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ, ವಿಶೇಷವಾಗಿ ಭಾರತದಲ್ಲಿ ವಿಶ್ವದ 28 ಪ್ರತಿಶತದಷ್ಟು ಟಿಬಿ ಪ್ರಕರಣಗಳು ದಾಖಲಾಗುತ್ತವೆ. ಹೀಗಾಗಿ, ಮೂರು ದಶಕಗಳಿಗಿಂತಲೂ ಹೆಚ್ಚು ಸಂಶೋಧನೆಯ ನಂತರ, ಭಾರತದಲ್ಲಿ ವಯಸ್ಕರು ಮತ್ತು ಹದಿಹರೆಯದವರಲ್ಲಿ ಲಸಿಕೆ ಪ್ರಯೋಗ ಒಂದು ದೊಡ್ಡ ಹೆಜ್ಜೆಯಾಗಿದೆ" ಎಂದು ಬಯೋಫ್ಯಾಬ್ರಿಯ ಸಿಇಒ ಎಸ್ಟೆಬಾನ್ ರೋಡ್ರಿಗಸ್ ಹೇಳಿದ್ದಾರೆ.
ಭಾರತ್ ಬಯೋಟೆಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕೃಷ್ಣ ಎಲ್ಲ ಮಾತನಾಡಿ, "ಕ್ಷಯರೋಗದ ವಿರುದ್ಧ ಹೆಚ್ಚು ಪರಿಣಾಮಕಾರಿಯಾದ ಲಸಿಕೆಗಾಗಿ ನಮ್ಮ ಅನ್ವೇಷಣೆಯು ಇಂದು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳೊಂದಿಗೆ ದೊಡ್ಡ ಉತ್ತೇಜನವನ್ನು ಪಡೆದುಕೊಂಡಿದೆ. ವಯಸ್ಕರು ಮತ್ತು ಹದಿಹರೆಯದವರಲ್ಲಿ ರೋಗವನ್ನು ತಡೆಗಟ್ಟಲು ಟಿಬಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ನಮ್ಮ ಗುರಿ ಇಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿದೆ. BioFabri ನೊಂದಿಗೆ ಪಾಲುದಾರರಾಗಲು ನಮಗೆ ಗೌರವವಿದೆ" ಎಂದಿದ್ದಾರೆ.
ಏನಿದು ಕ್ಷಯ ರೋಗ?
ಟಿಬಿ ಎಂದು ಕರೆಸಿಕೊಳ್ಳುವ ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಹೆಚ್ಚಾಗಿ ಇದು ರೋಗಿಯ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಹಾಗಾಗು ಇದನ್ನು ಪಲ್ಮನರಿ ಕ್ಷಯರೋಗ ಎಂದು ಕರೆಯಲಾಗುತ್ತದೆ. ದೇಹದ ಇತರ ಭಾಗಗಳಿಗೂ ಇದು ಹರಡುತ್ತದೆ. ಎಚ್‌ಐವಿ/ಏಡ್ಸ್ ಹೊರತುಪಡಿಸಿದರೆ ಜಾಗತಿಕವಾಗಿ ಅತಿ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಳ್ಳುವ ಕಾಯಿಲೆಯಾಗಿದೆ.


Click it and Unblock the Notifications