ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹಣಕಾಸು ವರ್ಷ 2024ರ ಸೆಪ್ಟೆಂಬರ್ 2023 ತ್ರೈಮಾಸಿಕದ ತನ್ನ ವರದಿಯನ್ನು ಬುಧವಾರ ಘೋಷಣೆ ಮಾಡಿದೆ. ಕಂಪನಿಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 2.4 ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ನೋಡಿದಾಗ ಶೇಕಡ 8.73 ರಷ್ಟು ಏರಿಕೆಯಾಗಿದೆ.
ಸಂಸ್ಥೆಯು 11,342 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಪ್ರಕಟಿಸಿದೆ. ಸಂಸ್ಥೆಯು ಷೇರುದಾರರಿಗೆ ಕಂಪನಿಯ ಲಾಭವನ್ನು ನೀಡಲಿದೆ. ಟಿಸಿಎಸ್ ನಿವ್ವಳ ಲಾಭವು ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ 11,074 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 10,431 ಕೋಟಿ ರೂಪಾಯಿ ಆಗಿದೆ.

ಕಾರ್ಯಾಚರಣೆಗಳಿಂದ ಅದರ ಏಕೀಕೃತ ಆದಾಯವು 59,692 ಕೋಟಿ ರೂಪಾಯಿಗಳಷ್ಟಿದ್ದು, ಶೇಕಡ 7.9 ರಷ್ಟು ಬೆಳವಣಿಗೆಯನ್ನು ಗಳಿಸಿದೆ. ಇನ್ನು ಟಿಸಿಎಸ್ ತ್ರೈಮಾಸಿಕ ವರದಿ ಪ್ರಕಟಿಸುವುದಕ್ಕೂ ಮುನ್ನ ಷೇರು ಬೆಲೆ ಸುಮಾರು 19 ರೂಪಾಯಿ ಅಥವಾ ಶೇಕಡ 0.52 ರಷ್ಟು ಕುಸಿದು 3,610.20 ರೂಪಾಯಿಗೆ ಕೊನೆಗೊಂಡಿದೆ.
ಟಿಸಿಎಸ್ ಅತಿದೊಡ್ಡ ಭಾರತೀಯ ಐಟಿ ಕಂಪನಿಯಾಗಿ ಮುಂದುವರೆದಿದೆ. ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಟಿಸಿಎಸ್ ಸಂಸ್ಥೆಯು ಆರ್‌ಐಎಲ್ ನಂತರದ ಸ್ಥಾನದಲ್ಲಿ, ದೇಶದ ಅತಿದೊಡ್ಡ ಸಂಸ್ಥೆಯಾಗಿದೆ. ಇಂದಿನ ವಹಿವಾಟಿನ ಅಂತ್ಯದಲ್ಲಿ ಟಿಸಿಎಸ್ ಷೇರು ಸುಮಾರು ಶೇಕಡ 0.44 ರಷ್ಟು ಇಳಿದು, 3,613 ರೂಪಾಯಿಗೆ ತಲುಪಿದೆ.
ಅಕ್ಟೋಬರ್ 11 ರ ಹೊತ್ತಿಗೆ ಟಿಸಿಎಸ್ ಮಾರುಕಟ್ಟೆ ಮೌಲ್ಯ 13,20,990.73 ಕೋಟಿ ರೂಪಾಯಿ ಆಗಿದೆ. ಟಾಟಾ ಗ್ರೂಪ್ ಬೆಂಬಲಿತ ಟಿಸಿಎಸ್ ಐಟಿ ಸೇವೆಗಳು, ಸಲಹಾ ಮತ್ತು ವ್ಯಾಪಾರ ಪರಿಹಾರಗಳ ಸಂಸ್ಥೆಯಾಗಿದೆ. 55 ವರ್ಷಗಳಿಂದ ತಮ್ಮ ಪರಿವರ್ತನೆಯ ಪ್ರಯಾಣದಲ್ಲಿ ವಿಶ್ವದ ಹಲವು ದೊಡ್ಡ ವ್ಯಾಪಾರಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.


Click it and Unblock the Notifications