ಭಾರತದ ಅತೀ ದೊಡ್ಡ ಐಟಿ ಸಂಸ್ಥೆಯಾದ ಟಾಟಾ ಕನ್ಸಲ್‌ಟೆನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ನಾಲ್ಕನೇ ತ್ರೈಮಾಸಿಕದ ವರದಿಯನ್ನು ಏಪ್ರಿಲ್ 12ರಂದು ಪ್ರಕಟಿಸಿದೆ. ಈ ವರದಿ ಪ್ರಕಾರ ಟಿಸಿಎಸ್ ಸಂಸ್ಥೆಯ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 14.8ರಷ್ಟು ಏರಿಕೆ ಕಂಡು ಬಂದಿದೆ. ಮಾರ್ಚ್ 31, 2023ರಲ್ಲಿ ಕೊನೆಯಾಗುವ ತ್ರೈಮಾಸಿಕದಲ್ಲಿ ಟಿಸಿಎಸ್ ಸಂಸ್ಥೆಯ ನಿವ್ವಳ ಲಾಭವು 11,392 ಕೋಟಿ ರೂಪಾಯಿಗೆ ತಲುಪಿದೆ.
ಇನ್ನು ಕಳೆದ ಡಿಸೆಂಬರ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಈ ಪ್ರಮುಖ ಐಟಿ ಸಂಸ್ಥೆಯ ಲಾಭವು 10,846 ಕೋಟಿ ರೂಪಾಯಿ ಆಗಿತ್ತು. ಇನ್ನು ವರ್ಷದಿಂದ ವರ್ಷಕ್ಕೆ ಲಭ್ಯವಾದ ಆದಾಯವು ಅಂದಾಜಿಗಿಂತ ಅಧಿಕವಾಗಿದೆ. ಆದರೆ ಲಾಭವು ಅಂದಾಜಿಗಿಂತ ಕೆಳಗಿದೆ. ಟಾಟಾ ಗ್ರೂಪ್‌ನ ಈ ಸಂಸ್ಥೆಯು ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಈ ತ್ರೈಮಾಸಿಕದಲ್ಲಿ ಶೇಕಡ 2.1ರಷ್ಟು ನಿವ್ವಳ ಆದಾಯ ಹೆಚ್ಚಳ ಕಾಣಲಿದೆ, ನಿವ್ವಳ ಲಾಭ ಕೂಡಾ ಶೇಕಡ 6.2ರಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿತ್ತು.

ಇನ್ನು ಆದಾಯವು 59,162 ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದ ಆದಾಯಕ್ಕಿಂತ ಶೇಕಡ 16.9ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಟಿಸಿಎಸ್ ನಿವ್ವಳ ಆದಾಯವು 50,591 ಕೋಟಿ ರೂಪಾಯಿ ಆಗಿತ್ತು. ಇನ್ನು ಡಿಸೆಂಬರ್ 2022ರಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಟಿಸಿಎಸ್ ಆದಾಯವು 58,229 ಕೋಟಿ ರೂಪಾಯಿ ಆಗಿದೆ. ಇನ್ನು ಸ್ಥಿರ ಕರೆನ್ಸಿ (ಸಿಸಿ) ಲೆಕ್ಕಾಚಾರದಲ್ಲಿ ನೋಡಿದಾಗ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 10.7ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ.
ತೆರಿಗೆ ಹಾಗೂ ಬಡ್ಡಿದರಕ್ಕೂ ಮುನ್ನ ಇದ್ದ ಆದಾಯ (EBIT) 14,488 ಕೋಟಿ ರೂಪಾಯಿ ಆಗಿದೆ. ಇಬಿಐಟಿ ಮಾರ್ಜಿನ್ 0.5 ಶೇಕಡ ವರ್ಷದಿಂದ ಶೇಕಡ 24.5ರಷ್ಟಿದೆ. ನಿವ್ವಳ ಮಾರ್ಜಿನ್ ಶೇಕಡ 19.3ರಷ್ಟಿದೆ. ಸಂಸ್ಥೆಯ ಪ್ರಕಾರ ಆದಾಯ ಅಭಿವೃದ್ಧಿಯು ಯುಕೆ (ಶೇಕಡ 17 QoQ), ರಿಟೇಲ್ & ಕನ್ಸ್ಯೂಮರ್ ಪ್ಯಾಕೇಜ್ಡ್ ಗೂಡ್ಸ್ (ಸಿಪಿಜಿ) (ಶೇಕಡ 13 QoQ) ಮತ್ತು ಜೀವ ವಿಜ್ಞಾನ ಮತ್ತು ಆರೋಗ್ಯ ಸೇವೆ (ಶೇಕಡ 12 QoQ) ಮೇಲೆ ಆಧಾರಿತವಾಗಿದೆ.
ಈಸಂಸ್ಥೆಯ ಅಧಿಕಾರಿಗಳು ಹೇಳುವುದೇನು?
ಈ ಬಗ್ಗೆ ಮಾಹಿತಿ ನೀಡಿದ ಟಿಸಿಎಸ್‌ನ ಸಿಇಒ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಗೋಪಿನಾಥನ್, "ಹಣಕಾಸು ವರ್ಷ 2023ರಲ್ಲಿ ನಾವು ಅತೀ ಪ್ರಬಲವಾಗಿ ಬೆಳವಣಿಗೆ ಕಂಡಿರುವುದನ್ನು ನೋಡಿದಾಗ ನಮಗೆ ಸಂತೋಷವಾಗುತ್ತದೆ. ನಮ್ಮಲ್ಲಿನ ಆರ್ಡರ್ ಸಾಮರ್ಥ್ಯವು ಹೆಚ್ಚಾಗುತ್ತಿದೆ. ಮಧ್ಯಮ ಅವಧಿಯ ಬೆಳವಣಿಗೆ ಕಾಣುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ನಾಯಕತ್ವದ ಪರಿವರ್ತನೆಯು ನಮ್ಮ ಎಲ್ಲಾ ಪಾಲುದಾರರಿಗೆ ಸರಳ ಪ್ರಕ್ರಿಯೆಯಾಗಲಿದೆ," ಎಂದು ತಿಳಿಸಿದ್ದಾರೆ.
ಇನ್ನು ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತದಿಂದಾಗಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವಾಗ ಟಿಸಿಎಸ್‌ನಲ್ಲಿ ಈ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆಯು 821ರಷ್ಟು ಹೆಚ್ಚಳವಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಇನ್ನು ಸಂಸ್ಥೆಯು ಅಂತಿಮ ಡಿವಿಡೆಂಟ್ ಅನ್ನು ಘೋಷಣೆ ಮಾಡಿದೆ. ಪ್ರತಿ ಷೇರಿಗೆ 24 ರೂಪಾಯಿ ಡಿವಿಡೆಂಟ್ ಘೋಷಿಸಿದೆ. ಇನ್ನು ನಾಲ್ಕನೇ ತ್ರೈಮಾಸಿಕದ ವರದಿಯನ್ನು ಘೋಷಣೆ ಮಾಡಿದ ದಿನ ಷೇರು ಮಾರುಕಟ್ಟೆಯಲ್ಲಿ ಟಿಸಿಎಸ್ ಷೇರು ಶೇಕಡ 0.99ರಷ್ಟು ಏರಿಕೆಯಾಗಿ, 3,245.50 ರೂಪಾಯಿಗೆ ತಲುಪಿದೆ.
ಜೂನ್‌ನಿಂದ ಕೃತಿವಾಸನ್ ಟಿಸಿಎಸ್ ಸಿಇಒ
ಮಾರ್ಚ್‌ನಲ್ಲಿ ಟಾಟಾ ಕನ್ಸಲ್ಟೆನ್ಸ್ ಸರ್ವಿಸಸ್‌ನ (ಟಿಸಿಎಸ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೇಶ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಟಿಸಿಎಸ್‌ನ ಸಿಇಒ ಸ್ಥಾನಕ್ಕೆ ಕೆ. ಕೃತಿವಾಸನ್‌ರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. 1989ರಿಂದ ಟಿಸಿಎಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಾ ಬಂದಿರುವ ಕೃತಿವಾಸನ್ ಜೂನ್ 1, 2023ರಿಂದ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.


Click it and Unblock the Notifications