ಕಳೆದ ವರ್ಷದಲ್ಲಿ ಆರಂಭವಾದ ಉದ್ಯೋಗ ಕಡಿತವು ಈ ವರ್ಷವೂ ಕೂಡಾ ಮುಂದುವರಿದಿದೆ. ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಟೆಕ್ಕಿಗಳು ಹೆಚ್ಚಾಗಿ ವಜಾಗೊಳ್ಳುತ್ತಿದ್ದಾರೆ. ಪ್ರತಿ ದಿನ 555 ಮಂದಿ, ಪ್ರತಿ ಗಂಟೆಗೆ 23 ಮಂದಿ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ.
ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಟೆಕ್ ಕಂಪನಿಗಳು ಕಳೆದ ಎರಡು ವರ್ಷದಲ್ಲಿ (ಅಕ್ಟೋಬರ್ 13ರವರೆಗೆ) ವಿಶ್ವದಾದ್ಯಂತ 400000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದೇ ಸಮಯದಲ್ಲಿ 110 ಭಾರತೀಯ ಸ್ಟಾರ್ಟ್‌ಅಪ್‌ಗಳು ಭಾರತದಲ್ಲಿ ಸುಮಾರು 30 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.

ಜಾಗತಿಕವಾಗಿ ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಕಾರಣವನ್ನು ನೀಡಿ, ಹಲವಾರು ದೊಡ್ಡ ಟೆಕ್ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳು ಉದ್ಯೋಗಿಗಳನ್ನು ವಜಾಗೊಳಿಸಿದೆ. ನೂತನ ಡೇಟಾದ ಪ್ರಕಾರ ಈವರೆಗೆ ಜಾಗತಿಕವಾಗಿ ಸುಮಾರು 2120 ಸಂಸ್ಥೆಗಳು ಸುಮಾರು 404962 ಉದ್ಯೋಗಿಗಳನ್ನು ವಜಾಗೊಳಿಸಿದೆ.
2022 ರಲ್ಲಿ ಸುಮಾರು 1061 ಟೆಕ್ ಕಂಪನಿಗಳು 164,769 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಇನ್ನು 2023 ರಲ್ಲಿ ಅಕ್ಟೋಬರ್ 13 ರವರೆಗೆ ಜಾಗತಿಕವಾಗಿ 1059 ಕಂಪನಿಗಳು ಸುಮಾರು 240193 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಪ್ರತಿ ದಿನ 555 ಉದ್ಯೋಗಿಗಳು ವಜಾ
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪ್ರತಿ ದಿನ ಸುಮಾರು 555 ಟೆಕ್ಕಿಗಳನ್ನು ಸಂಸ್ಥೆಗಳು ವಜಾಗೊಳಿಸಿದೆ. ಪ್ರತಿ ಗಂಟೆಗೆ 23 ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಜನವರಿಯಲ್ಲಿಯೇ ಸುಮಾರು 89,554 ಉದ್ಯೋಗಿಗಳು ಪಿಂಕ್ ಸ್ಲಿಪ್ ಪಡೆದಿದ್ದಾರೆ. ಈಗ ವಜಾಗೊಳ್ಳುತ್ತಿರುವ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಕೂಡಾ ವಜಾ ಪ್ರಕ್ರಿಯೆ ನಿಂತಿಲ್ಲ. ಕಳೆದ ತಿಂಗಳೇ ಸುಮಾರು 4,632 ಉದ್ಯೋಗಿಗಳು ವಜಾಗೊಂಡಿದ್ದಾರೆ.
ರಿಟೇಲ್ ಟೆಕ್ ಮತ್ತು ಕನ್ಸ್ಯೂಮರ್ ಟೆಕ್ ಸೆಕ್ಟರ್‌ನಲ್ಲಿ ಅತೀ ಅಧಿಕ ಉದ್ಯೋಗ ಕಡಿತ ಮಾಡಲಾಗಿದೆ. ಕ್ರಮವಾಗಿ 29,161 ಮತ್ತು 28,873 ಉದ್ಯೋಗಿಗಳು ವಜಾಗೊಂಡಿದ್ದಾರೆ. ಇನ್ನು ಕೂಡಾ 2023 ಕೊನೆಗೊಂಡಿಲ್ಲ. ಆದರೆ ಈಗಲೂ ಇನ್ನಷ್ಟು ಉದ್ಯೋಗ ಕಡಿತ ನಡೆಯುವ ಸಾಧ್ಯತೆಗಳು ಅಧಿಕವಾಗಿದೆ.
ಕಳೆದ ವರ್ಷ ಆರಂಭವಾಗಿರುವ ಉದ್ಯೋಗ ಕಡಿತದ ಸೀಸನ್ ಇನ್ನೂ ಕೂಡಾ ಮುಗಿದಂತೆ ಕಾಣುತ್ತಿಲ್ಲ. ಹಲವಾರು ದೊಡ್ಡ ದೊಡ್ಡ ಸಂಸ್ಥೆಗಳು ಬೇರೆ ಬೇರೆ ಹಂತಗಳಲ್ಲಿ ಲೇಆಫ್ ಪ್ರಕ್ರಿಯೆಯನ್ನು ನಡೆಸುತ್ತಲೇ ಇದೆ. ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನ ಪೋಷಕ ಸಂಸ್ಥೆಯಾದ ಮೆಟಾವು ಇತ್ತೀಚೆಗೆ ಮತ್ತೆ ಉದ್ಯೋಗ ಕಡಿತ ಘೋಷಣೆ ಮಾಡಿದೆ.
ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ಚಿಪ್ ಮೇಕರ್ ಸಂಸ್ಥೆ ಕ್ವಾಲ್‌ಕಾಮ್ ಸುಮಾರು 1258 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇನ್ನು ಇತರೆ ಚಿಪ್ ತಯಾರಕ ಸಂಸ್ಥೆಗಳಾದ ಚೇನ್‌ಅನಾಲಿಸಿಸ್, ಫ್ಲೆಕ್ಸ್, ಕಿಸ್ಕೋ, ಪೈ ಇನ್ಶುರೆನ್ಸ್ ಸೇರಿದಂತೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ. ಎಪಿಕ್ ಗೇಮ್ಸ್ ಶೇಕಡ 16 ರಷ್ಟು ಅಥವಾ ಸುಮಾರು 870 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಇನ್ನು ಬೈಜೂಸ್ ಸುಮಾರು 4-5 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ಸ್ಟಾರ್ಟ್‌ಅಪ್ ಕಳೆದ ಎರಡು ವರ್ಷದಲ್ಲಿ 10 ಸಾವಿರ ಮಂದಿಯನ್ನು ವಜಾಗೊಳಿಸಿದೆ. ಇನ್ನು ಡೋನ್ಜೊ 150-200 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ.


Click it and Unblock the Notifications