ಇರಾನ್ (Iran) ಆಡಳಿತ ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿರುವ ಜನ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ದಿನ ಹೋದಂತೆ ಪ್ರತಿಭಟನೆಗಳು ತೀವ್ರಗೊಂಡಿದ್ದು, ಸರ್ಕಾರದ ಕಠಿಣ ನಿರ್ಧಾಗಳಿಂದ ನೂರಾರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಇನ್ನು ಪ್ರತಿಭಟನಾಕಾರರಿಗೆ ಏನೂ ಮಾಡದಂತೆ ಅಮೆರಿಕ ಕೂಡಾ ಇರಾನ್ ಆಡಳಿತಕ್ಕೆ ಎಚ್ಚರಿಕೆ ನೀಡಿದೆ. ಪ್ರತಿಭಟನಾಕಾರರನ್ನು ಕೊಂದರೆ ಯುಎಸ್ ಮಿಲಿಟರಿ ದಾಳಿ ಮಾಡಬಹುದು ಎಂದು ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ವಾರ್ನಿಂಗ್ ಬೆನ್ನಲ್ಲೇ ಇರಾನ್ ತನ್ನೆಲ್ಲಾ ಏರ್‌ಸ್ಪೇಸ್ ಮುಚ್ಚುವಂತೆ (Iran Airspace Shutdown) ಆದೇಶ ಹೊರಡಿಸಿದೆ.

ಹೌದು, ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗಗಳನ್ನು ಬದಲಾಯಿಸಿವೆ. ಲುಫ್ಥಾನ್ಸ ಮತ್ತು ಇಂಡಿಗೋ ವಿಮಾನಗಳು ಮಾರ್ಗ ಬದಲಾಯಿಸಿದ್ದರೆ, ಏರ್ ಇಂಡಿಯಾ ಕೆಲವು ವಿಮಾನಗಳನ್ನು ರದ್ದುಗೊಳಿಸಿದೆ. ಆರಂಭದಲ್ಲಿ ಪ್ರತಿಭಟನೆಯಾಗಿ ಇರಾನ್‌ನಲ್ಲಿ ಶುರುವಾದ ಗದ್ದಲ, ಇದೀಗ ಯುದ್ಧದ ಭೀತಿ ಶುರುವಾಗಿದೆ. ಈ ಪರಿಣಾಮ ನಾಗರಿಕ ವಿಮಾನಗಳಿಗೆ ಸಂಭವನೀಯ ಅಪಾಯಗಳನ್ನು ತಗ್ಗಿಸಲು ವಿಮಾನಯಾನ ಸಂಸ್ಥೆಗಳು ಸುರಕ್ಷತೆಗೆ ಆದ್ಯತೆ ನೀಡುತ್ತಿವೆ.
ರಾಯಿಟರ್ಸ್ ವರದಿಯಂತೆ, ಇರಾನ್ ತನ್ನ ವಾಯುಪ್ರದೇಶವನ್ನು ಭಾರತೀಯ ಕಾಲಮಾನ ಗುರುವಾರ ಮುಂಜಾನೆ 3:45ಕ್ಕೆ (ಇಟಿ ಸಂಜೆ 5:15, ಜಿಎಂಟಿ 2215) ಎಲ್ಲಾ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಸೂಚನೆಯ ಪ್ರಕಾರ, ಅಧಿಕೃತ ಅನುಮತಿ ಪಡೆದ ಅಂತರರಾಷ್ಟ್ರೀಯ ವಿಮಾನಗಳಿಗೆ ಮಾತ್ರ ದೇಶದಲ್ಲಿ ಹಾರಾಟಕ್ಕೆ ಅವಕಾಶ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇಂಡಿಗೋ ವಿಮಾನ ಮಾರ್ಗ ಬದಲು
ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ, ಇರಾನ್‌ನ ಹಠಾತ್ ವಾಯುಪ್ರದೇಶ ಬಂದ್‌ನಿಂದ ತಮ್ಮ ಕೆಲವು ಅಂತರರಾಷ್ಟ್ರೀಯ ವಿಮಾನಗಳಿಗೆ ಪರಿಣಾಮ ಬೀರಿದೆ ಎಂದು ತಿಳಿಸಿದೆ. 'ಎಕ್ಸ್' (X) ಪೋಸ್ಟ್ ಒಂದರಲ್ಲಿ, "ಇರಾನ್‌ನ ಹಠಾತ್ ವಾಯುಪ್ರದೇಶ ಬಂದ್‌ನಿಂದಾಗಿ, ನಮ್ಮ ಕೆಲವು ಅಂತರರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ನಿಮ್ಮ ವಿಮಾನಕ್ಕೆ ತೊಂದರೆಯಾಗಿದ್ದಲ್ಲಿ, ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ರೀಬುಕಿಂಗ್ ಆಯ್ಕೆಗಳನ್ನು ಸರ್ಚ್ ಮಾಡಿ ಅಥವಾ ರಿಫಂಡ್ ಪಡೆಯಿರಿ" ಎಂದು ಇಂಡಿಗೋ ಹೇಳಿದೆ.
ಇದೇ ವೇಳೆ, ಏರ್ ಇಂಡಿಯಾ ಕೂಡ ಮಾರ್ಗ ಬದಲಾವಣೆ ಸಾಧ್ಯವಾಗದಿದ್ದ ಸಂದರ್ಭಗಳಲ್ಲಿ ಕೆಲವು ವಿಮಾನಗಳನ್ನು ರದ್ದುಗೊಳಿಸಿದೆ. ಇರಾನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ, ಆ ಪ್ರದೇಶಗಳಲ್ಲಿ ಹಾರಾಟ ಮಾಡಬೇಕಿದ್ದ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಆದ್ದರಿಂದ ಪ್ರಯಾಣದಲ್ಲಿ ವಿಳಂಬವಾಗಬಹುದು ಎಂದು ಸಂಸ್ಥೆ ತಿಳಿಸಿದೆ.
ವಾಯುಪ್ರದೇಶ ಮುಚ್ಚಿದ ನಂತರ, ಟೆಹ್ರಾನ್‌ಗೆ ತೆರಳಬೇಕಿದ್ದ ಏರೋಫ್ಲಾಟ್ ವಿಮಾನವು Flightradar24 ದತ್ತಾಂಶದ ಪ್ರಕಾರ ಮಾಸ್ಕೋಗೆ ಮರಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಮೊದಲು, ಪ್ರಾದೇಶಿಕ ಉದ್ವಿಗ್ನತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜರ್ಮನಿ ತನ್ನ ವಿಮಾನಯಾನ ಸಂಸ್ಥೆಗಳಿಗೆ ಇರಾನ್ ವಾಯುಪ್ರದೇಶವನ್ನು ತಪ್ಪಿಸಲು ಎಚ್ಚರಿಕೆ ನೀಡಿತ್ತು.
ಅಮೆರಿಕ ವಿಮಾನಗಳಿಗೆ ನಿಷೇಧ
ಅಮೆರಿಕ ಈಗಾಗಲೇ ತನ್ನ ವಾಣಿಜ್ಯ ವಿಮಾನಗಳಿಗೆ ಇರಾನ್ ಮೇಲೆ ಹಾರಾಟ ನಿಷೇಧಿಸಿದೆ. ಅಲ್ಲದೆ, ಉಭಯ ದೇಶಗಳ ನಡುವೆ ಯಾವುದೇ ನೇರ ವಿಮಾನ ಮಾರ್ಗಗಳಿಲ್ಲ. ಕಳೆದ ವಾರ ಫ್ಲೈದುಬೈ ಮತ್ತು ಟರ್ಕಿಶ್ ಏರ್‌ಲೈನ್ಸ್‌ನಂತಹ ಸಂಸ್ಥೆಗಳು ಕೂಡಾ ಇರಾನ್‌ಗೆ ತೆರಳಬೇಕಿದ್ದ ಹಲವು ವಿಮಾನಗಳನ್ನು ರದ್ದುಗೊಳಿಸಿವೆ.
OPSGROUP ನಡೆಸುವ ವಿಮಾನ-ಅಪಾಯದ ಮಾಹಿತಿ ತಾಣ "ಸೇಫ್ ಏರ್‌ಸ್ಪೇಸ್" ಪ್ರಕಾರ, ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ಕಡಿಮೆ ಮಾಡಿವೆ ಅಥವಾ ನಿಲ್ಲಿಸಿವೆ. ಬಹುತೇಕ ವಿಮಾನಗಳು ಇರಾನ್ ವಾಯುಪ್ರದೇಶದಿಂದ ದೂರವಿವೆ ಎಂದು ರಾಯಿಟರ್ಸ್ ವರದಿ ಹೈಲೈಟ್ ಮಾಡಿದೆ.
ಸೇಫ್ ಏರ್‌ಸ್ಪೇಸ್ ಗುಂಪು ಎಚ್ಚರಿಸಿದಂತೆ, ಈ ಪರಿಸ್ಥಿತಿಯು ಸಂಭಾವ್ಯ ಭದ್ರತಾ ಅಥವಾ ಮಿಲಿಟರಿ ಚಟುವಟಿಕೆಗಳನ್ನು ಸೂಚಿಸುತ್ತದೆ. ಕ್ಷಿಪಣಿ ಹಾರಾಟಗಳು ಅಥವಾ ವಾಯು ರಕ್ಷಣಾ ಪ್ರತಿಕ್ರಿಯೆಗಳ ಹೆಚ್ಚಳದಿಂದ ನಾಗರಿಕ ವಿಮಾನಗಳು ತಪ್ಪಾಗಿ ಗುರುತಿಸಲ್ಪಟ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆಯನ್ನು ಇದು ಹೆಚ್ಚಿಸುತ್ತದೆ.
ಬುಧವಾರ, ಲುಫ್ಥಾನ್ಸ ಮುಂದಿನ ಸೂಚನೆ ಬರುವವರೆಗೆ ಇರಾನ್ ಮತ್ತು ಇರಾಕ್‌ನ ವಾಯುಪ್ರದೇಶದಲ್ಲಿ ವಿಮಾನಯಾನ ನಿಲ್ಲಿಸಲಾಗಿದೆ ಎಂದು ತಿಳಿಸಿದೆ.
ಇದೇ ವೇಳೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ ಒಂದು ಅಧಿಸೂಚನೆ ಹೊರಡಿಸಿ, ದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಪ್ರತಿಭಟನೆಗಳ ದೃಷ್ಟಿಯಿಂದ ಮುಂದಿನ ಸೂಚನೆ ಬರುವವರೆಗೆ ಭಾರತೀಯ ನಾಗರಿಕರು ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಖಡಕ್ ಸೂಚನೆ ನೀಡಿದೆ.


Click it and Unblock the Notifications