ನವದೆಹಲಿ, ಏಪ್ರಿಲ್ 21: ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾದ ಸಂಸ್ಥಾಪಕ ಹಾಗೂ ವಿಶ್ವದ ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಅವರು ತಮ್ಮ ಬಹು ನಿರೀಕ್ಷಿತ ಭಾರತ ಪ್ರವಾಸವನ್ನು ಮುಂದೂಡಿದ್ದಾರೆ. ಕಳೆದ ಕೆಲದಿನಗಳ ಹಿಂದೆಯಷ್ಟೇ ಭಾರತಕ್ಕೆ ಭೇಟಿ ನೀಡುವ ಕುರಿತು ಖಚಿತ ಪಡಿಸಿದ್ದ ಅವರು, ಇದೀಗ ತಮ್ಮ ಪ್ರವಾಸ ರದ್ದುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ದೃಢಪಡಿಸಿದ್ದಾರೆ.
ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ತಮ್ಮ ಪ್ರವಾಸ ರದ್ದುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ದೃಢಪಡಿಸಿದ್ದು, 'ದುರಾದೃಷ್ಟವಶಾತ್ ಟೆಸ್ಲಾದ ಮೇಲಿರುವ ಜವಾಬ್ದಾರಿಗಳ ಹಿನ್ನಲೆ ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡುವ ಅನಿವಾರ್ಯತೆ ಬಂದೊಂದಗಿದೆ" ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಬಿಲಿಯನೇರ್ ಮಸ್ಕ್ ಟ್ವೀಟ್ ಮಾಡಿರುವ ಪ್ರಕಾರ ಏ. 3ನೇ ವಾರದಲ್ಲಿ ಅಥವಾ ಏ.22 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬೇಕಿತ್ತು. ಈ ಕುರಿತು ಕಳೆದ ವಾರ ಟೆಸ್ಲಾ ಸಂಸ್ಥಾಪಕ ಕೂಡ ಎಕ್ಸ್ನಲ್ಲಿ ಖಚಿತಪಡಿಸಿದ್ದರು. ಈ ಭೇಟಿಯ ಮೂಲ ಉದ್ದೇಶ ಭಾರತದಲ್ಲಿ ಟೆಸ್ಲಾ ಇವಿ ಘಟಕ ಸ್ಥಾಪನೆಯಾಗಿತ್ತು. ಇದರ ಜೊತೆ ದೇಶದಲ್ಲಿ ತಮ್ಮ ಸಾಟಲೈಟ್ ಇಂಟರ್ನೆಟ್ ಸೇವೆ ಸ್ಟಾರ್ಲಿಂಕ್ ಪ್ರವೇಶ ಕುರಿತು ಕೂಡ ಚರ್ಚಿಸಲಿದ್ದಾರೆ ಎನ್ನಲಾಗಿತ್ತು.
ಆದರೆ ಇದೀಗ ಮಸ್ಕ್ ಅವರ ಭಾರತ ಪ್ರವಾಸ ಮುಂದೂಡಿಕೆಯಾಗಿದೆ. ಆದರೆ ಅವರು ಈ ವರ್ಷಾಂತ್ಯದಲ್ಲಿ ಭಾರತ ಪ್ರವಾಸ ಕುರಿತು ಯೋಚಿಸಲಾಗುವುದು' ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷದ ಜೂನ್‌ನಲ್ಲಿ ಮೋದಿ ಅವರು ಅಮೇರಿಕಾದ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದ ವೇಳೆ ಮಸ್ಕ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ 2024 ರಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಮಾತುಕತೆ ವೇಳೆ ಮಸ್ಕ್ ಪ್ರಕಟಿಸಿದ್ದರು. ಮಾತ್ರವಲ್ಲದೇ ಟೆಸ್ಲಾ ಸಂಸ್ಥೆಯೂ ಉತ್ಪಾದಿಸುತ್ತಿರುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡಲು ಭಾರತಕ್ಕೆ ವಿನಂತಿಯನ್ನು ಮಾಡಿದ್ದರು.
ಭಾರತವು ಕಳೆದ ತಿಂಗಳು ಹೊಸ ಎಲೆಕ್ರ್ಟಿಕ್ ವಾಹನ ನೀತಿಗೆ ಅನುಮೋದನೆ ನೀಡಿದೆ. ದೇಶದಲ್ಲಿ ತಯಾರಕರು ಕನಿಷ್ಠ $500 ಮಿಲಿಯನ್(4150 ಕೋಟಿ ರೂ) ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಕೆಲವು ಮಾದರಿಗಳ ಮೇಲಿನ ಆಮದು ತೆರಿಗೆಗಳನ್ನು 100% ರಿಂದ 15% ಕ್ಕೆ ಇಳಿಸಲಿದೆ. ಇದು ಭಾರತದ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಟೆಸ್ಲಾಗೆ ಇದು ವರದಾನವಾಗಲಿದೆ.


Click it and Unblock the Notifications