ಬ್ಯಾಂಕಾಕ್, ಅ. 26: ಅಚ್ಚರಿಗೆ ಹುಬ್ಬೇರಿಸುವಂಥ ಸದ್ದಿ ಇದು. ವಿಶ್ವ ಸುಂದರಿ ಅಥವಾ ಭುವನ ಸುಂದರಿ ಎನಿಸಿಕೊಳ್ಳುವುದು ಪ್ರಪಂಚಾದ್ಯಂತ ಮಾಡೆಲ್‌ಗಳ ಕನಸು. ಆದರೆ, ಥಾಯ್ಲೆಂಡ್‌ನ ಮಹಿಳಾ ಉದ್ಯಮಿಯೊಬ್ಬಳು ಮಿಸ್ ಯೂನಿವರ್ಸ್ ಅನ್ನೇ ಖರೀದಿಸಿದ್ದಾಳೆ.
ಈ ಸುದ್ದಿ ನಿಮಗೆ ಗೊಂದಲ ಎನಿಸಿರಬಹುದು. ಭುವನ ಸುಂದರಿ ಸ್ಪರ್ಧೆಯನ್ನು ಆಯೋಜಿಸುವ ಮಿಸ್ ಯೂನಿವರ್ಸ್ ಸಂಸ್ಥೆಯನ್ನು ಜೆಕೆಎನ್ ಗ್ಲೋಬಲ್ ಗ್ರೂಪ್ 20 ಮಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿ ಮಾಡಿದೆ. 20 ಮಿಲಿಯನ್ ಡಾಲರ್ ಎಂದರೆ ಸುಮಾರು 163 ಕೋಟಿ ರೂಪಾಯಿ.
ತೃತೀಯ ಲಿಂಗಿ
ಜೆಕೆನ್ ಗ್ಲೋಬಲ್ ಗ್ರೂಪ್‌ನ ಒಡತಿ ಮತ್ತು ಸಿಇಒ ಜಾಕಾಪೋಂಗ್ 'ಆ್ಯನೆ' ಜಕ್ರಾಜುಟಾಟಿಪ್ (!!?) ಥಾಯ್ಲೆಂಡ್‌ನಲ್ಲಿ ತೃತೀಯ ಲಿಂಗಿಗಳ ಹಕ್ಕುಗಳಿಗೆ ಹೋರಾಡುವ ಆ್ಯಕ್ಟಿವಿಸ್ಟ್ ಆಗಿ ಪರಿಚಿತ. ಈಕೆ ಸ್ವತಃ ಟ್ರಾನ್ಸ್‌ಜೆಂಡರ್ ಆಗಿದ್ದಾಳೆ. ಹಾಗೆಯೇ, ಥಾಯ್ಲೆಂಡ್‌ನ ಅನೇಕ ಮಾಧ್ಯಮಗಳ ಒಡಗಿಯೂ ಹೌದು. ಶಾರ್ಕ್ ಟ್ಯಾಂಕ್, ಪ್ರಾಜೆಕ್ಟ್ ರನ್ ಅವೇ ಮೊದಲಾದ ರಿಯಾಲಿಟಿ ಶೋಗಳ ಸ್ಥಳೀಯ ಶೋಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಸೆಲಬ್ರಿಟಿ ಈಕೆ.
ಇಂತಿಪ್ಪ ಈಕೆ ಮಿಸ್ ಯೂನಿವರ್ಸ್ ಸಂಸ್ಥೆಯನ್ನೇ ಖರೀದಿ ಮಾಡಿದ್ದಾಳೆ. ಡೊನಾಲ್ಡ್ ಟ್ರಂಪ್ ಒಂದು ಕಾಲದಲ್ಲಿ ಈ ಸಂಸ್ಥೆಯ ಮಾಲೀಕರಾಗಿದ್ದವರು. ಮಿಸ್ ಯೂನಿವರ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಮಾಲೀಕರಾಗಿರುವುದು.
ಮಿಸ್ ಯೂನಿವರ್ಸ್ ಮಹತ್ವ
ಮಿಸ್ ಯೂನಿವರ್ಸ್ ಸಂಘಟನೆ ಕಳೆದ 71 ವರ್ಷಗಳಿಂದ ಸೌಂದರ್ಯ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. 165 ದೇಶಗಳಲ್ಲಿ ಈ ಸ್ಪರ್ಧೆಯ ಪ್ರಸಾರ ಆಗುತ್ತದೆ. ಭುವನ ಸುಂದರಿ ಮುಕುಟ ಗೆಲ್ಲುವ ಸ್ಪರ್ಧಾಳುವಿಗೆ ಕಳೆದ ವರ್ಷ 1.8 ಕೋಟಿ ರೂಪಾಯಿ ಬಹುಮಾನ ಕೊಡಲಾಗಿತ್ತು. ಇಲ್ಲಿ ಹಣಕ್ಕಿಂತ ಹೆಚ್ಚಾಗಿ ಪ್ರತಿಷ್ಠೆ ಹಾಗು ವಿವಿಧ ಸಾಮಾಜಿಕ ಕಾರ್ಯಗಳಿಗೆ ರಾಯಭಾರಿಯಾಗಿ ಮಿಂಚುವ ಅವಕಾಶ ಸಿಗುತ್ತದೆ.
1994ರಲ್ಲಿ ಸುಷ್ಮಿತಾ ಸೇನ್ ಭಾರತದ ಮೊದಲ ಭುವನ ಸುಂದರಿ ಎನಿಸಿದ್ದರು. ಅದಾದ ಬಳಿಕ 2000ರಲ್ಲಿ ಲಾರಾ ದತ್ತ ಮತ್ತು 2021ರಲ್ಲಿ ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್ ಮುಕುಟ ಧರಿಸಿದ್ದರು. ಈ ಸೌಂದರ್ಯ ಸ್ಪರ್ಧೆ ವರ್ಷಕ್ಕೊಮ್ಮೆ ನಡೆಯುತ್ತದೆ. 1996ರಿಂದ 2002ರವರೆಗೆ ಡೊನಾಲ್ಡ್ ಟ್ರಂಪ್ ಅವರು ಮಿಸ್ ಯೂನಿವರ್ಸ್ ಸಂಸ್ಥೆಯ ಸಹ-ಮಾಲೀಕರಾಗಿದ್ದರು.
ಜೆಕೆಎನ್ ಷೇರು ವೃದ್ಧಿ
ಇದೀಗ ಜೆಕೆಎನ್ ಸಂಸ್ಥೆ ಮಿಸ್ ಯೂನಿವರ್ಸ್ ಅನ್ನು ಖರೀದಿ ಮಾಡಿದೆ. ಈ ಸುದ್ದಿ ಹೊರಬರುತ್ತಲೇ ಇವತ್ತು ಬುಧನವಾರ ಥಾಯ್ಲೆಂಡ್‌ನ ಷೇರುಪೇಟೆಯಲ್ಲಿ ಜೆಕೆಎನ್ ಕಂಪನಿಯ ಷೇರುಗಳು ಶೇ. 10ರಷ್ಟು ಮೌಲ್ಯ ವೃದ್ಧಿಸಿಕೊಂಡಿವೆ.
ಜೆಕೆಎನ್ ಸಂಸ್ಥೆ ಹಿಂದಿನ ಧಾರವಾಹಿ, ಬಾಲಿವುಡ್ ಸಿನಿಮಾ, ವಿದೇಶೀ ಮಾಧ್ಯಮಗಳ ಇತರ ಶೋ, ಡಾಕುಮೆಂಟರಿಗಳನ್ನು ಥಾಯ್ಲೆಂಡ್‌ನಲ್ಲಿ ವಿತರಿಸುವುದಲ್ಲದೇ ತನ್ನದೇ ಸ್ವಂತ ಶೋಗಳನ್ನು ತಯಾರಿಸುತ್ತದೆ. ಇದೀಗ ಮಿಸ್ ಯೂನಿವರ್ಸ್‌ನ ಲೈಸೆನ್ಸಿಂಗ್ ಇತ್ಯಾದಿ ವ್ಯವಹಾರಗಳನ್ನು ಏಷ್ಯನ್ ಮಾರುಕಟ್ಟೆಯಲ್ಲಿ ವಿಸ್ತರಿಸಿ ಲಾಭ ಮಾಡಿಕೊಳ್ಳುವ ಯೋಜನೆಯಲ್ಲಿ ಜೆಕೆಎನ್ ಇದೆ.
ಜೆಕೆಎನ್‌ನ ಮಾಲೀಕಳಾದ ಜಾಕಪೋಂಗ್ ಒಬ್ಬ ಟ್ರಾನ್ಸ್‌ಜೆಂಡರ್ (ಲಿಂಗ ಬದಲಾವಣೆ) ಮಹಿಳೆಯಾಗಿದ್ದಾಳೆ. ತೃತೀಯ ಲಿಂಗಿ ಜನರ ಹಕ್ಕಿಗಾಗಿ ಹೋರಾಡಲು "ಲೈಫ್ ಇನ್ಸ್‌ಪೈರ್ಡ್ ಫಾರ್ ಥಾಯ್ಲೆಂಡ್ ಫೌಂಡೇಶನ್" ಸಂಸ್ಥೆಯನ್ನೂ ಸ್ಥಾಪಿಸಿದ್ದಾಳೆ. ಹಲವಾರು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿರುವ ಅವರು, ತಾನು ಟ್ರಾನ್ಸ್‌ಜೆಂಡರ್ ಆಗಿ ಗಳಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾಳೆ.


Click it and Unblock the Notifications