ದಳಪತಿ ವಿಜಯ್ ಕೊನೆಯ ಸಿನಿಮಾ "ಜನ ನಾಯಗನ್" (Jana Nayagan) ರಿಲೀಸ್‌ಗೆ ಸಂಕಷ್ಟ ಎದುರಾಗಿದೆ. ಚಿತ್ರರಂಗ ಬಿಟ್ಟು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ದಳಪತಿ ವಿಜಯ್‌ಗೆ (Thalapaty Vijay) ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಇದೀಗ ಇನ್ನೊಂದು ದಿನದಲ್ಲಿ ಅಂದರೆ ಜನವರಿ 9 ರಂದು ರಿಲೀಸ್ ಆಗಬೇಕಿದ್ದ ಜನ ನಾಯಗನ್ ಸಿನಿಮಾ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿದೆ. ಅದ್ಧೂರಿಯಾಗಿ ರಿಲೀಸ್ ಕಾಣಬೇಕಿದ್ದ ವಿಜಯ್ ಸಿನಿಮಾ, ಇದೀಗ ರಿಲೀಸ್ ಆಗಲ್ಲ ಎಂಬ ಸುದ್ದಿಯಿಂದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ವಿಶ್ವದಾದ್ಯಂತ ವಿಜಯ್‌ಗೆ ಅವರದ್ದೇ ಆದ ಫ್ಯಾನ್ಸ್ ಇದ್ದಾರೆ. ಇನ್ನು ಅವರ ಸಿನಿಮಾಗಾಗಿ ಬಹುತೇಕರು ಕಾಯುತ್ತಿರುತ್ತಾರೆ. ಯುನಿಕ್ ಸ್ಟೈಲ್, ಅದ್ಭುತ ಅಭಿನಯ, ಆಕ್ಷನ್ ಮೂವಿಗಳಲ್ಲಿ ಕಾಣುವ ಲುಕ್‌ಗೆ ಜನ ಅಂತೂ ಫಿದಾ ಆಗಿಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾನದ ಟ್ರೇಲರ್ ಕೂಡಾ ರಿಲೀಸ್ ಆಗಿತ್ತು. ಟ್ರೇಲರ್‌ನಲ್ಲೇ ಭಾರೀ ಕುತೂಹಲ ಹುಟ್ಟಿಸಿದ್ದ ಜನ ನಾಯಗನ್ ಸಿನಿಮಾ, ಇದೀಗ ಜನವರಿ 9 ಕ್ಕೆ ರಿಲೀಸ್ ಆಗಲ್ಲ ಎಂದು ಹೇಳಿದೆ.
ಮುಂದೂಡಿಕೆಯಾಗಲು ಕಾರಣವೇನು?
ಜನ ನಾಯಗನ್ ಸಿನಿಮಾ ಮುಂದೂಡಿಕೆಯಾಗಲು ಮುಖ್ಯ ಕಾರಣವೆಂದರೆ ಸೆನ್ಸಾರ್ ಮಂಡಳಿ (CBFC). ಏಕೆಂದರೆ ಸೆನ್ಸಾರ್ ಮಂಡಳಿ ಇನ್ನೂ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್ ಕೊಟ್ಟೇ ಇಲ್ವಂತೆ. ಹೌದು, ಸೆನ್ಸಾರ್ ಮಂಡಳಿ, ಇನ್ನೂ ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ನೀಡಿಲ್ಲ. ಚಿತ್ರ ತಂಡ ಸಿನಿಮಾದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಕಳೆದ ತಿಂಗಳು ಸೆನ್ಸಾರ್‌ಗೆ ಕಳುಹಿಸಿತ್ತು.
ಆದ್ರೆ ಡಿಸೆಂಬರ್ 19 ರಂದು ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ, ಕೆಲವು ದೃಶ್ಯಗಳನ್ನು, ಕೆಲವು ಡೈಲಾಗ್‌ಗಳನ್ನು ಕಟ್ ಮಾಡುವಂತೆ ಸೂಚನೆ ನೀಡಿತ್ತು ಎಂದು ಹೇಳಲಾಗಿದೆ. ಇನ್ನು ಸೆನ್ಸಾರ್ ಮಂಡಳಿಯ ಸೂಚನೆಯಂತೆ ಚಿತ್ರತಂಡ ಎಡಿಟ್ ಮಾಡಿ ವಾಪಾಸ್ ಸೆನ್ಸಾರ್ ಮಂಡಳಿಗೆ ಕಳುಹಿಸಿದ್ದರೂ, ಇನ್ನೂ ಸೆನ್ಸಾರ್ ಪ್ರಮಾಣ ಪತ್ರವನ್ನು ನೀಡಲಾಗಿಲ್ಲ ಎಂದು ಹೇಳಲಾಗಿದೆ.
ಚಿತ್ರತಂಡದಿಂದ ಅಧಿಕೃತ ಪೋಸ್ಟ್!
ವಿಜಯ್ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರ ಮುಂದೂಡಿಕೆಯಾಗಿದೆ ಎಂದು ಸಿನಿಮಾದ ಪ್ರೊಡಕ್ಷನ್ ಹೌಸ್ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದೆ. ಕೆವಿಎನ್ ಪ್ರೊಡಕ್ಷನ್ಸ್, ತಮ್ಮ X ಖಾತೆಯಲ್ಲಿ "ನಮ್ಮ ಮೌಲ್ಯಯುತ ಪಾಲುದಾರರು ಮತ್ತು ಪ್ರೇಕ್ಷಕರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಲು ತುಂಬಾ ಭಾರವಾಗುತ್ತಿದೆ. ಜನವರಿ 9ಕ್ಕೆ ಕಾತರದಿಂದ ನಿರೀಕ್ಷಿಸಲಾಗಿದ್ದ 'ಜನ ನಾಯಗನ್' ಸಿನಿಮಾ ಬಿಡುಗಡೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ" ಎಂದು ತಿಳಿಸಿದೆ.
"ಈ ಚಿತ್ರದ ಮೇಲಿರುವ ನಿರೀಕ್ಷೆ, ಉತ್ಸಾಹ ಮತ್ತು ಪ್ರೀತಿಯನ್ನು ನಾವು ಆಳವಾಗಿ ಅರ್ಥಮಾಡಿಕೊಂಡಿದ್ದೇವೆ. ಈ ನಿರ್ಧಾರವನ್ನು ತೆಗೆದುಕೊಳ್ಳುವುದು ನಮಗೆ ಸುಲಭವಾಗಿರಲಿಲ್ಲ. ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಆದಷ್ಟು ಬೇಗ ಘೋಷಿಸಲಾಗುವುದು. ಅಲ್ಲಿಯವರೆಗೆ ನಿಮ್ಮ ತಾಳ್ಮೆ ಮತ್ತು ನಿರಂತರ ಪ್ರೀತಿಯನ್ನು ಕೋರುತ್ತೇವೆ. ನಿಮ್ಮ ಅಚಲ ಬೆಂಬಲವೇ ಇಡೀ 'ಜನ ನಾಯಕನ್' ತಂಡಕ್ಕೆ ಅತಿ ದೊಡ್ಡ ಶಕ್ತಿ" ಎಂದಿದೆ.
ಟಿಕೆಟ್ ಖರೀದಿದಾರರಿಗೆ ಗೊಂದಲ
ಇದೀಗ ಸಿನಿಮಾ ಮುಂದೂಡಿಕೆಯಾಗುತ್ತಿದ್ದಂತೆ, ಈಗಾಗಲೇ ಆನ್‌ಲೈನ್ ಟಿಕೆಟ್ ಖರೀದಿಸಿರುವ ಸಿನಿಪ್ರಿಯರಿಗೆ ಟಿಕೆಟ್ ಹಣ ರಿಫಂಡ್ ಆಗುತ್ತಾ, ಇಲ್ವಾ? ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಆನ್‌ಲೈನ್ ಟಿಕೆಟ್‌ದಾರರಿಗೆ ಅವರ ಖಾತೆಗಳಿಗೆ ಸ್ವಯಂಚಾಲಿತವಾಗಿ ಹಣ ರಿಫಂಡ್ ಆಗಲಿದೆ. ಒಂದು ವೇಳೆ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದ್ದರೆ, ಅಲ್ಲಿಗೆ ತೆರಳಿ ಹಣವನ್ನು ಮರಳಿ ಪಡೆಯಬಹುದು. ವಿಕ್ಟರಿ ಸಿನಿಮಾಸ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "'ಜನ ನಾಯಗನ್' ಚಿತ್ರದ ಜನವರಿ 9 ರ ಎಲ್ಲಾ ಶುಕ್ರವಾರದ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಆನ್‌ಲೈನ್ ಟಿಕೆಟ್‌ಗಳನ್ನು ತಕ್ಷಣವೇ ಅವರ ಖಾತೆಗಳಿಗೆ ಮರುಪಾವತಿಸಲಾಗುತ್ತದೆ" ಎಂದು ಹೇಳಿದ್ದಾರೆ.


Click it and Unblock the Notifications