ಬೆಂಗಳೂರಿನ ಟ್ರಾಫಿಕ್ ಸಮಸ್ಯೆ (Bengaluru Traffic Problem) ಬಗ್ಗೆ ಕೇಳೋದೆ ಬೇಡ. ಯಾವುದೇ ರಸ್ತೆ ನೋಡಿದ್ರೂ ವಾಹನಗಳಿಂದಲೇ ತುಂಬಿ ತುಳುಕುತ್ತಿರುತ್ತದೆ. ಇರೋದು ಒಂದು ಕಿ.ಮೀ ಆದ್ರೂ, ಹೋಗೋಕೆ ಕಡಿಮೆ ಅಂದರೂ ಕೆಲವೊಮ್ಮೆ 30 ನಿಮಿಷಗಳು ಬೇಕಾಗುತ್ತೆ. ಇನ್ನು ಈ ಸಮಸ್ಯೆ ಪರಿಹರಿಸಲು ಸರ್ಕಾರ, ಪೊಲೀಸ್ ಇಲಾಖೆ (Police Department) ಏನಾದರೊಂದು ಕ್ರಮ ಕೈಗೊಳುತ್ತಲೇ ಇರುತ್ತದೆ. ಅದೇ ರೀತಿ ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತೊಂದು ಅಭಿಯಾನವನ್ನು ಶುರು ಮಾಡಿದೆ.

ಹೌದು, ಬೆಂಗಳೂರು ಸಂಚಾರ ಪೊಲೀಸರು ಇದೀಗ ಸಾರ್ವಜನಿಕರನ್ನೂ ಸಂಚಾರ ನಿರ್ವಹಣಾ ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳುವ ಹೊಸ ಅಭಿಯಾನವನ್ನು ಜಾರಿಗೆ ತರಲು ಸಜ್ಜಾಗಿದೆ. ನವೆಂಬರ್ ಅಂತ್ಯದೊಳಗೆ ಈ ಅಭಿಯಾನವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಸಾರ್ವಜನಿಕರಿಗಾಗಿ ಹೊಸ ಅಭಿಯಾನ:
"ಒಂದು ದಿನ ಟ್ರಾಫಿಕ್ ಪೊಲೀಸ್ ಆಗಿರಿ" (Be a Traffic Cop For a Day) ಎಂಬ ಅಭಿಯಾನವನ್ನು ಜಾರಿಗೆ ತರಲು ಬೆಂಗಳೂರು ಸಂಚಾರ ಪೊಲೀಸರು ಸಿದ್ಧರಾಗಿದ್ದಾರೆ. ಈ ಅಭಿಯಾನದಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಅದನ್ನು ನಿರ್ವಹಿಸುವ ಅನುಭ ನೇರವಾಗಿ ನಾಗರಿಕರಿಗೆ ಸಿಗಲಿದೆ. ಅಲ್ಲದೇ ನಾಗರಿಕರು ಮತ್ತು ಕಾನೂನು ಜಾರಿ ಅಧಿಕಾರಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಈ ಅಭಿಯಾನ ಹೊಂದಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದಿಂದ ಜನರಿಗೆ, ಸಂಚಾರ ಪೊಲೀಸರು ಎದುರಿಸುವ ಸವಾಲುಗಳೇನು ಎಂಬ ಅರಿವು ಮತ್ತು ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ನಾಗರಿಕರಿಗೆ ಸಲಹೆ ಪಡೆಯುವುದೇ ಮುಖ್ಯ ಉದ್ದೇಶವಾಗಿದೆ.
ಷರತ್ತು ಅನ್ವಯ!
ಇನ್ನು ಈ ಅಭಿಯಾನದಲ್ಲಿ ಭಾಗವಹಿಸುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಅಲ್ಲದೇ ಬೆಂಗಳೂರು ಸಂಚಾರ ಪೊಲೀಸರ ಅಸ್ಟ್ರಾಮ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ (Astram App) ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು. ನೋಂದಣಿಯಾದ ಬಳಿಕ ಸ್ವಯಂ ಸೇವಕರು ತಮ್ಮ ಆಯ್ಕೆಯ ಜಂಕ್ಷನ್ ಅನ್ನು ಆಯ್ಕೆ ಮಾಡಬಹುದು. ಆದ್ರೆ ಅದನ್ನು ಆಯ್ಕೆ ಮಾಡುವ ಮುನ್ನ ಕಡ್ಡಾಯವಾಗಿ ಟ್ರಾಫಿಕ್ ಬಗ್ಗೆ ಒಂದು ಗಂಟೆ ತರಬೇತಿ ಅವಧಿಗೆ ಒಳಗಾಗಬೇಕಾಗುತ್ತದೆ. ಆ ನಂತರ ಆಯ್ಕೆಯಾದವರು ಪ್ರತಿ ದಿನ 2 ಗಂಟೆಗಳ ಅಥವಾ 4 ಗಂಟೆಗಳ ಅವಧಿಯವರೆಗೆ ಟ್ರಾಫಿಕ್ ನಿರ್ವಹಣೆ ಮಾಡುವಲ್ಲಿ ಸಹಕಾರ ನೀಡಬಹುದು.
ಈಗಾಗಲೇ ಪೊಲೀಸ್ ಅಧಿಕಾರಿಗಳು ಈ ಅಭಿಯಾನದಡಿಯಲ್ಲಿ ವಿವರವಾದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಎಲ್ಲಾ ಮಾಹಿತಿಗಳು ಲಭ್ಯವಾದ ಬಳಿಕ ಅಧಿಕೃತವಾಗಿ ಈ ಅಭಿಯಾನ ಜಾರಿಗೆ ತರಲಾಗುತ್ತದೆ ಎಂದು ವರದಿಯಾಗಿದೆ.


Click it and Unblock the Notifications