ಬೆಂಗಳೂರು, ಆಗಸ್ಟ್ 16: ನಾಗಪಂಚಮಿ, ಶುಕ್ರವಾರದ ವರಮಹಾಲಕ್ಷ್ಮಿ ವ್ರತದಂತಹ ಹಬ್ಬ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ನಗರದಲ್ಲಿ ಹಣ್ಣುಗಳು ಮತ್ತು ಹೂವುಗಳ ಬೆಲೆಗಳು ಗಗನಕ್ಕೇರಿವೆ.
ಹಬ್ಬ ಹರಿದಿನ ಮಾತ್ರವಲ್ಲದೆ, ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಜ್ಯಾದ್ಯಂತ ಹೂವಿನ ಕೃಷಿ, ತೋಟಗಾರಿಕೆ ಮೇಲೆ ಪರಿಣಾಮ ಬೀರಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆ, ಮಡಿವಾಳ, ರಸೆಲ್ ಮಾರುಕಟ್ಟೆಯ ವ್ಯಾಪಾರಿಗಳು. ಆಗಸ್ಟ್ 4ಕ್ಕೆ ಆಷಾಢ ಮಾಸದ ನಂತರ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಲಾರಂಭಿಸಿದ್ದು, ಕನಕಾಂಬರ ಕೆಜಿಗೆ 3 ಸಾವಿರ ರೂ., ಮಲ್ಲಿಗೆ 1200 ರೂ., ಸೇವಂತಿಗೆ 300 ರೂ.ಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

"ಪ್ರತಿ ವರ್ಷ ಹಬ್ಬದ ಋತುವಿನಲ್ಲಿ ಬೆಲೆಗಳು ಸಾಮಾನ್ಯವಾಗಿ ಹೆಚ್ಚಿರುತ್ತವೆ. ಹಣ್ಣು ಮತ್ತು ಹೂವುಗಳ ಕೊರತೆಯಿಂದಾಗಿ ಈ ಬಾರಿ ಅವುಗಳ ಬೆಲೆ ಗಗನಕ್ಕೇರಿದೆ ಎಂದು ಕೆಆರ್ ಮಾರುಕಟ್ಟೆ ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ.ಎನ್.ದಿವಾಕರ್ ಹೇಳಿದ್ದಾರೆ.
ಸತತ ಮಳೆಯಿಂದಾಗಿ ರೈತರಿಗೆ ಸಕಾಲದಲ್ಲಿ ಹೂ ಕೊಯ್ಲು ಸಾಧ್ಯವಾಗುತ್ತಿಲ್ಲ. ಆಂಧ್ರ-ಕರ್ನಾಟಕ ಗಡಿಭಾಗದ ಗೌರಿಬಿದನೂರು ಭಾಗದ ಕನಕಾಂಬರ ಬೆಳೆಯುವ ರೈತರು ಹೆಚ್ಚು ಹಾನಿಗೊಳಗಾಗಿದ್ದಾರೆ. ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ವರಮಹಾಲಕ್ಷ್ಮಿಗೆ ಅರ್ಪಿಸುವ ಕಾರಣ ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ದಿವಾಕರ್ ಹೇಳಿದರು.
ಆದರೆ, ಬೆಲೆ ಏರಿಕೆಯಿಂದಾಗಿ ಜನರು ಹೂವು ಮತ್ತು ಹಣ್ಣುಗಳ ಖರೀದಿಗೆ ಅಡ್ಡಿಯಾಗುತ್ತಿಲ್ಲ. ಶುಕ್ರವಾರದ ವರಮಹಾಲಕ್ಷ್ಮಿ ವ್ರತದ ನಿಮಿತ್ತ ಕೆ.ಆರ್.ಮಾರುಕಟ್ಟೆ, ಮಡಿವಾಳ ಮತ್ತು ಯಲಹಂಕ ಮಾರುಕಟ್ಟೆಗಳಲ್ಲಿ ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿರುವುದು ಕಂಡುಬಂದಿತು. ಶುಕ್ರವಾರದ ಪೂಜೆಗಾಗಿ ಕೆ.ಆರ್.ಮಾರುಕಟ್ಟೆಯಲ್ಲಿ ಬಾಳೆಹಣ್ಣು, ಸೇಬು, ಹೂವು, ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಸಗಟು ಅಂಗಡಿಗಳಲ್ಲಿ ಸೇಬಿನ ಬೆಲೆ ಕೆಜಿಗೆ 120 ರಿಂದ 200 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗಿವೆ ಎಂದು ಕೆ.ಆರ್.ಮಾರುಕಟ್ಟೆ ವರ್ತಕರ ಸಂಘದ ಸದಸ್ಯ ಹುಮಾಯೂನ್ ಪಾಷಾ ಹೇಳಿದರು.


Click it and Unblock the Notifications