ನವದೆಹಲಿ, ಏಪ್ರಿಲ್ 1: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮತದಾನಕ್ಕೆ ಅಂತಿಮ ಹಂತದ ಸಿದ್ಧತೆ ಸಾಗಿದೆ. ಹೀಗಿದ್ದಾಗ ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ. 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆ ಸ್ಥಿರತೆ ಕಾಪಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಯತ್ನ ನಡೆಸುತ್ತಿದ್ದು, ಈ ಹಿನ್ನೆಲೆ 'ರೆಪೊ' ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ.
ಏಪ್ರಿಲ್ 3ರಿಂದ 5ರ ವರೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯನ್ನ ನಡೆಸಲಿದೆ. 2024-25ನೇ ಆರ್ಥಿಕ ವರ್ಷದಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿರುವ ಕಾರಣಕ್ಕೆ ಭಾರಿ ಕುತೂಹಲ ಕೂಡ ಮನೆಮಾಡಿದೆ. ಕೊನೇ ದಿನ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಭೆ ನಿರ್ಣಯ ಪ್ರಕಟಿಸಲಿದ್ದಾರೆ. ಇದೇ ಕಾರಣಕ್ಕೆ 'ರೆಪೊ' ದರದಲ್ಲಿ ಬದಲಾವಣೆ ಆಗುತ್ತಾ? ಎಂಬ ಕುತೂಹಲ ಕಾಡುತ್ತಿದೆ. ಆದರೆ ಮಾರುಕಟ್ಟೆ ತಜ್ಞರು ಮಾತ್ರ ರೆಪೊ ದರ ಹಿಂಗೆ ಇರಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ರೆಪೊ ದರ ಶೇಕಡಾ 6.5 ರಷ್ಟು ಇದ್ದು ಆರ್‌ಬಿಐ ನಿರ್ಧಾರಕ್ಕೆ ಕೋಟ್ಯಂತರ ಜನ ಕಾಯ್ತಾ ಇದ್ದಾರೆ.

ಬೇರೆ ದೇಶಗಳ ನಿರ್ಧಾರ ಏನು?
ಮತ್ತೊಂದು ಕಡೆ ಬ್ರಿಟನ್ & ಅಮೆರಿಕ ಕೂಡ ಬಡ್ಡಿದರ ಕಡಿತಕ್ಕೆ ಸಂಬಂಧಿಸಿದಂತೆ ಕಾದುನೋಡುವ ತಂತ್ರವನ್ನು ಅನುಸರಿಸುತ್ತಿವೆ. ಆದರೆ ಸ್ವಿಟ್ಜರ್ಲೆಂಡ್ ಈಗಾಗಲೇ ತನ್ನಲ್ಲಿ ಬಡ್ಡಿದರ ಕಡಿತ ಮಾಡಿದೆ. ಜಪಾನ್‌ನಲ್ಲಿ ಎಂಟು ವರ್ಷದಿಂದ ಜಾರಿಯಲ್ಲಿದ್ದ ಋಣಾತ್ಮಕ ಬಡ್ಡಿದರ ನೀತಿ ಮುಗಿದಿದೆ. ಜಾಗತಿಕ ಮಟ್ಟದಲ್ಲೂ ಹಲವು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರಕ್ಕೆ ಸಂಬಂಧಿಸಿದಂತೆ ಅನುಸರಿಸುತ್ತಿರುವ ನೀತಿ ಬಗ್ಗೆ ಆರ್‌ಬಿಐ ಅವಲೋಕನ ಮಾಡಲಿದೆ. ಇದೇ ಕಾರಣಕ್ಕೆ ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ, 'ರೆಪೊ' ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ.
ಆರ್ಥಿಕ ತಜ್ಞರು ಹೇಳುವುದು ಏನು?
ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರ ಪ್ರಕಾರ, ಮುಂಗಾರು ಹಂಗಾಮಿನ ಸ್ಥಿತಿಗತಿ & ಆರ್ಥಿಕತೆ ಬೆಳವಣಿಗೆ ವೇಗ & ಬಡ್ಡಿದರ ಕಡಿತ ಸಂಬಂಧ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಕೈಗೊಳ್ಳುವ ನಿರ್ಣಯವನ್ನು ಆರ್‌ಬಿಐ ಅವಲೋಕಿಸುತ್ತಿದೆ. ಇದೇ ಹಿನ್ನೆಲೆ, ಆಗಸ್ಟ್‌ನಲ್ಲಿ ನಡೆಯುವ ಎಂಪಿಸಿ ಸಭೆಗೂ ಮೊದಲೇ ಹಣಕಾಸು ನೀತಿಯಲ್ಲಿ ಬದಲಾವಣೆ ತರುವ ಸಂಭವ ತೀರಾ ಕಡಿಮೆ ಎಂಬುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ಮತ್ತೊಬ್ಬರು ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಅವರು ಹೇಳುವಂತೆ, ಚಿಲ್ಲರೆ ಹಣದುಬ್ಬರವು ಶೇ 5 ರಷ್ಟಿದೆ. ಮುಂದಿನ ದಿನಗಳಲ್ಲಿ ಆಹಾರ ಪದಾರ್ಥ ಬೆಲೆ ಏರಿಕೆ ಆಗುವ ಸಾಧ್ಯತೆ ಕೂಡ ದಟ್ಟವಾಗಿ ಇದೆ. ಆರ್ಥಿಕತೆ ಬೆಳವಣಿಗೆ ವೇಗವನ್ನು ಕಾಯ್ದುಕೊಳ್ಳಲು ಬಡ್ಡಿದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯತೆ ಈಗ ಇದೆ. ಇದೇ ಕಾರಣಕ್ಕೆ ಎಂಪಿಸಿ ಸಭೆಯು ಈ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ಹೆಚ್ಚಿದೆ ಎಂದು ಪ್ರತಿಪಾದಿಸಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮತದಾನಕ್ಕೆ ಅಂತಿಮ ಹಂತದ ಸಿದ್ಧತೆ ಸಾಗಿದೆ. ಹೀಗಾಗಿ ಈ ಬಗ್ಗೆ ಆರ್‌ಬಿಐ ನಿರ್ಧಾರ ಕೂಡ ಗಮನ ಸೆಳೆದಿದೆ.


Click it and Unblock the Notifications