ನವದೆಹಲಿ, ನವೆಂಬರ್ 04: ಕೇಂದ್ರ ಸರ್ಕಾರವು ಪೆಟ್ರೋಲ್ , ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ.
ಪೆಟ್ರೋಲ್ ಮೇಲೆ 5 ರೂ. ಡೀಸೆಲ್ ಮೇಲೆ 10 ರೂ. ಇಳಿಕೆ ಮಾಡಿದೆ. ಹಾಗೆಯೇ ರಾಜ್ಯ ಸರ್ಕಾರಗಳು ಕೂಡ ಪ್ರತ್ಯೇಕವಾಗಿ ತಮ್ಮ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸಿ ದರವನ್ನು ಕಡಿಮೆ ಮಾಡಿವೆ.
ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮೇಲೆ ಐದು ರೂಪಾಯಿ ಮತ್ತು ಡೀಸೆಲ್ ಮೇಲೆ ಹತ್ತು ರೂಪಾಯಿ ಅಬಕಾರಿ ಸುಂಕವನ್ನು ಇಳಿಸುತ್ತಿರುವುದಾಗಿ ಘೋಷಿಸಿತು. ಈ ನಿರ್ಧಾರದ ಬೆನ್ನಲ್ಲೇ ಹಲವು ರಾಜ್ಯಗಳು ವ್ಯಾಟ್ ಕಡಿತದ ನಿರ್ಧಾರ ಪ್ರಕಟಿಸುತ್ತಿವೆ. ಈವರೆಗೂ ಯಾವ್ಯಾವ ರಾಜ್ಯಗಳು ಎಷ್ಟೆಷ್ಟು ವ್ಯಾಟ್ ಕಡಿತಗೊಳಿಸಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಉತ್ತರ ಪ್ರದೇಶ ಹಾಗೂ ಹರ್ಯಾಣ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚು ಕಡಿತಗೊಳಿಸಿರುವ ರಾಜ್ಯವೆನಿಸಿಕೊಂಡಿವೆ.
ಹರ್ಯಾಣ: ಹರ್ಯಾಣ ಸರ್ಕಾರ ವಿಶೇಷ ಎನ್ನುವಂತ ನಿರ್ಧಾರ ಪ್ರಕಟಿಸಿದೆ. ಎಲ್ಲ ರಾಜ್ಯಗಳು ಏಳು ರೂಪಾಯಿಯಷ್ಟು ವ್ಯಾಟ್ ಕಡಿಮೆ ಮಾಡಿದರೆ ಸಿಎಂ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲೆ 12 ರೂಪಾಯಿ ಕಡಿಮೆ ಮಾಡಿದೆ.
ಉತ್ತರ ಪ್ರದೇಶ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಉತ್ತರ ಪ್ರದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು 12 ರೂಪಾಯಿಗಳಷ್ಟು ಇಳಿಕೆಯಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ: ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡಾ ಪೆಟ್ರೋಲ್ ಡಿಸೇಲ್ ಮೇಲೆ ಏಳು ರೂಪಾಯಿ ವ್ಯಾಟ್ ಕಡಿತಗೊಳಿಸುವುದಾಗಿ ಘೋಷಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 2,100 ಕೋಟಿ ರೂಪಾಯಿಗಳ ನಷ್ಟವಾಗಲಿದೆ ಎಂದು ಹೇಳಿದ್ದಾರೆ.
ಮಣಿಪುರ: ಕೇಂದ್ರದ ಬಳಿಕ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು, "ಈ ದೀಪಾವಳಿಯಂದು ಈ ರಾಷ್ಟ್ರದ ಜನರಿಗೆ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದು, ರಾಜ್ಯ ಸರ್ಕಾರವೂ ಮಣಿಪುರದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ತಕ್ಷಣವೇ ಜಾರಿಗೆ ಬರುವಂತೆ ತಲಾ 7 ರೂಪಾಯಿಯಷ್ಟು ಕಡಿಮೆ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ತ್ರಿಪುರ: ನರೇಂದ್ರ ಮೋದಿ ಸರ್ಕಾರ ನಿರ್ಧಾರ ಸ್ವಾಗತಿಸಿದ ಸಿಎಂ ಬಿಪ್ಲಬ್ ಕುಮಾರ್ ದೇಬ್, ಕೇಂದ್ರದ ಹಾದಿಯಲ್ಲೆ ರಾಜ್ಯ ಸರ್ಕಾರವು ಇಂಧನಗಳ ಬೆಲೆ ಕಡಿಮೆ ಮಾಡಲಿದ್ದು ಏಳು ರೂಪಾಯಿ ವ್ಯಾಟ್ ಇಳಿಕೆ ಮಾಡುತ್ತಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಸರ್ಕಾರದ ನಿರ್ಧಾರದ ಬಳಿಕ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ ಕ್ರಮವಾಗಿ 98.33 ಮತ್ತು 85.63 ರೂಪಾಯಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಗುಜರಾತ್: ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡುವ ಸಂಬಂಧ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕಚೇರಿಯ ಹೇಳಿಕೆ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ರಾಜ್ಯದಲ್ಲಿ ಪೆಟ್ರೋಲ್/ಡೀಸೆಲ್ ಮೇಲಿನ ವ್ಯಾಟ್ ಲೀಟರ್ ಗೆ 7 ರೂಪಾಯಿಗಳಷ್ಟು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅಸ್ಸಾಂ: ಮೋದಿ ಟ್ವೀಟ್ ಮಾಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ತಮ್ಮ ರಾಜ್ಯ ಸರ್ಕಾರದ ನಿರ್ಧಾರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಏಳು ರೂಪಾಯಿ ಕಡಿಮೆ ಮಾಡುತ್ತಿರುವುದಾಗಿ ಹೇಳಿದರು.
ಗೋವಾ: ನರೇಂದ್ರ ಮೋದಿ ಅವರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸುವ ಮೂಲಕ ಎಲ್ಲಾ ಭಾರತೀಯರಿಗೆ ದೀಪಾವಳಿಯ ಉಡುಗೊರೆಯನ್ನು ನೀಡಿದ್ದಾರೆ. ಈ ಖುಷಿಯನ್ನು ಗೋವಾ ಸರ್ಕಾರ ಹೆಚ್ಚು ಮಾಡುತ್ತಿದ್ದು, ಪೆಟ್ರೋಲ್ ಮೇಲೆ 7 ರೂಪಾಯಿ ಮತ್ತು ಡೀಸೆಲ್ ಮೇಲೆ 7 ರೂಪಾಯಿ ವ್ಯಾಟ್ ಕಡಿಮೆ ಮಾಡಲಾಗುವುದು. ಇದರಿಂದಾಗಿ ಡೀಸೆಲ್ ಬೆಲೆಯನ್ನು ರೂ. 17 ರಷ್ಟು ಕಡಿಮೆ ಮಾಡುತ್ತಿದೆ. ಲೀಟರ್ ಮತ್ತು ಪೆಟ್ರೋಲ್ ಪ್ರತಿ ಲೀಟರ್‌ಗೆ 12 ರೂ. ಕಡಿಮೆಯಾಗಲಿದೆ ಎಂದು ಸಿಎಂ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದಾರೆ. ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬಿಹಾರದಲ್ಲಿ ಕನಿಷ್ಠ ಬೆಲೆ ಇಳಿಕೆ: ಬಿಜೆಪಿಯ ಸಂಸದ ಸುಶೀಲ್ ಕುಮಾರ್ ಮೋದಿ ಅವರ ಟ್ವೀಟ್ ಪ್ರಕಾರ ಬಿಹಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1.30 ರೂಪಾಯಿ ಕಡಿಮೆ ಮಾಡಲಾಗಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 1.90 ರೂಪಾಯಿ ಇಳಿಸಲಾಗಿದೆ. ಇದು ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯಗಳು ಇಳಿಸಿರುವ ಅತ್ಯಂತ ಕಡಿಮೆ ಬೆಲೆಯಾಗಿದೆ. ಇದಲ್ಲದೆ ಉತ್ತರಖಂಡ ಸರ್ಕಾರ ( ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 2 ರೂಪಾಯಿ ಇಳಿಸಿದೆ.


Click it and Unblock the Notifications