ನವದೆಹಲಿ, ಮೇ 18: ಭಾರತದ ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಗೂಗಲ್ ಸಿಇಒ ಸುಂದರ್ ಪಿಚೈ ಇಂದು ಹೆಚ್ಚಿನ ಎತ್ತರಕ್ಕೆ ಬೆಳೆಯುತ್ತಿರುವ ಅನೇಕ ಭಾರತೀಯ ಮೂಲದ ಸಿಇಒಗಳಲ್ಲಿ ಒಬ್ಬರು.
51 ವರ್ಷದ ಪಿಚೈ ಅವರು ಇತ್ತೀಚೆಗೆ ಯೂಟ್ಯೂಬರ್ ವರುಣ್ ಮಯ್ಯ ಅವರೊಂದಿಗೆ ಕಿರು ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ, ಅಲ್ಲಿ ಅವರು ಭಾರತದ ಮೇಲೆ ಕೃತಕ ಬುದ್ದಿಮತ್ತೆ ಪ್ರಭಾವ, ಭಾರತೀಯ ಎಂಜಿನಿಯರ್‌ಗಳಿಗೆ ಅವರ ಸಲಹೆ, 'ರಾಪರ್' ಸ್ಟಾರ್ಟ್‌ಅಪ್‌ಗಳ ಕುರಿತು ಚರ್ಚಿಸಿದರು. ಈ ವೇಳೆ ತಮ್ಮ ನೆಚ್ಚಿನ ಭಾರತೀಯ ಭಕ್ಷ್ಯಗಳನ್ನು ತಿಳಿಸಿದರು.

ಮಯ್ಯ ಅವರು ಸುಂದರ್ ಪಿಚೈ ಅವರನ್ನು ಭಾರತದ ತಮ್ಮ ನೆಚ್ಚಿನ ಆಹಾರವನ್ನು ತಿಳಿಸುವಂತೆ ಕೇಳಿದಾಗ, ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಚಾಣಕ್ಷತೆಯಿಂದ ಉತ್ತರಿಸಿದರು. ಪ್ರಾದೇಶಿಕ ವಿಭಿನ್ನತೆಗಳನ್ನು ಮೀರಿ ಅವರು ಭಾರತದ ಮೂರು ಪ್ರಮುಖ ಮಹಾನಗರಗಳಾದ ಬೆಂಗಳೂರು, ದೆಹಲಿ ಮತ್ತು ಮುಂಬೈನ ಆಹಾರಗಳು ಇಷ್ಟ ಎಂದು ಹೇಳಿದರು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇರುವಾಗ ದೋಸೆ ತಿನ್ನಲು ಇಷ್ಟಪಡುತ್ತೇನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅವರ ನೆಚ್ಚಿನ ಖಾದ್ಯ ಚೋಲೆ ಭತುರೆ ಮತ್ತು ಅಂತಿಮವಾಗಿ, ಮುಂಬೈನಲ್ಲಿ ಪಿಚೈ ಅವರು ಪಾವ್ ಭಾಜಿಯನ್ನು ಆರಿಸಿಕೊಳ್ಳುವುದಾಗಿ ಹೇಳಿದರು.
"ಬೆಂಗಳೂರಿನಲ್ಲಿ ನನಗೆ ಬಹುಶಃ ದೋಸೆ ಸಿಗುತ್ತದೆ. ಇದು ನನ್ನ ನೆಚ್ಚಿನ ಆಹಾರ. ಅದೇ ದೆಹಲಿಯಾಗಿದ್ದರೆ ಚೋಲೆ ಭತುರೆ ಮತ್ತು ಅದು ಮುಂಬೈ ಆಗಿದ್ದರೆ ನಾನು ಪಾವ್ ಭಾಜಿ ತಿನ್ನುತ್ತೇನೆ " ಎಂದು ಪಿಚೈ ಪಾಡ್‌ಕ್ಯಾಸ್ಟರ್ ವರುಣ್ ಮಯ್ಯಗೆ ಹೇಳಿದರು.
ಪಾಡ್‌ಕ್ಯಾಸ್ಟ್ ಸಮಯದಲ್ಲಿ ಗೂಗಲ್ ಸಿಇಒ ಪಿಚೈ ಅವರು FAANG (ಫೇಸ್‌ಬುಕ್, ಆಪಲ್, ಅಮೆಜಾನ್, ನೆಟ್‌ಫ್ಲಿಕ್ಸ್ ಮತ್ತು ಗೂಗಲ್) ಸಂದರ್ಶನಗಳನ್ನು ಎದುರಿಸಲು ಯುವಜನರಿಗೆ ಸಹಾಯ ಮಾಡಲು ಮೀಸಲಾಗಿರುವ ಭಾರತದ ಸಂಪೂರ್ಣ ಉದ್ಯಮದ ಬಗ್ಗೆ ಕೇಳಿದಾಗ ರೋಟ್ ಲರ್ನಿಂಗ್ ವಿಷಯವನ್ನೂ ಪ್ರಸ್ತಾಪಿಸಿದರು. ಅಭ್ಯರ್ಥಿಗಳು "ವಿಷಯಗಳನ್ನು ಆಳವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು" ಎಂದು ಹೇಳಲು ಅವರು ಅಮೀರ್ ಖಾನ್ ಅವರ "3 ಈಡಿಯಟ್ಸ್" ನ ದೃಶ್ಯವನ್ನು ಉಲ್ಲೇಖಿಸಿದರು.
ಸುಂದರ್ ಪಿಚೈ ತಮಿಳುನಾಡಿನಲ್ಲಿ ಜನಿಸಿದರು, ಅವರು ಓದಿದ್ದು ಚೆನ್ನೈನಲ್ಲಿ. ಅವರು ಐಐಟಿ ಖರಗ್‌ಪುರದಿಂದ ಬಿ.ಟೆಕ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂ.ಎಸ್. ಪದವಿ ಪಡೆದಿದ್ದಾರೆ.


Click it and Unblock the Notifications