ಪ್ರತಿ ವರ್ಷ, ವಿಶ್ವದ ಅತ್ಯುತ್ತಮ ನಗರಗಳ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪಟ್ಟಿ ಪ್ರಯಾಣಿಕರು, ನಿವಾಸಿಗಳು, ಹೂಡಿಕೆದಾರರು ಮತ್ತು ನಗರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತದೆ. ಇದೀಗ ಬಿಡುಗಡೆಯಾಗಿರುವ 2026ರ ವರ್ಲ್ಡ್ಸ್ ಬೆಸ್ಟ್ ಸಿಟೀಸ್ ವರದಿಯು ಮತ್ತೆ ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ರೆಸೋನೆನ್ಸ್ ಕನ್ಸಲ್ಟೆನ್ಸಿ ಸಂಸ್ಥೆಯು 270ಕ್ಕೂ ಹೆಚ್ಚು ನಗರಗಳನ್ನು ಅಧ್ಯಯನ ಮಾಡಿ, ವಿಶ್ವದ ಟಾಪ್ 100 ನಗರಗಳನ್ನು (World's Top Cities) ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು (Bengaluru) ಕೂಡಾ ಸೇರಿದೆ.

ಹಾಗಿದ್ರೆ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ? ಈ ಸ್ಥಾನ ನೀಡಲು ಕಾರಣವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇನ್ನು ಈ ಅತ್ಯುತ್ತಮ ನಗರಗಳೆಂದು ಆರ್ಥಿಕ ಶಕ್ತಿ ಮತ್ತು ಸಾಂಸ್ಕೃತಿಕ ವೈಭವದಿಂದ ಹಿಡಿದು ನಗರಗಳ ಜೀವನ ಗುಣಮಟ್ಟ ಮತ್ತು ಪ್ರವಾಸಿ ತಾಣ, ಆಚರಣೆ ಎಲ್ಲವನ್ನೂ ಅಧ್ಯಯನ ನಡೆಸಲಾಗುತ್ತದೆ. ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಲಂಡನ್ ಸತತ 11ನೇ ವರ್ಷವೂ ವಿಶ್ವದ ಅತ್ಯುತ್ತಮ ನಗರ ಎಂಬ ಕಿರೀಟವನ್ನು ಉಳಿಸಿಕೊಂಡಿದೆ.
ಬೆಂಗಳೂರಿಗೂ 29ನೇ ಸ್ಥಾನ!
ಭಾರತಕ್ಕೂ ಈ ಪಟ್ಟಿಯಲ್ಲಿ ಸಂಭ್ರಮಿಸಲು ಒಂದು ಕಾರಣವಿದೆ. ಏಕೆಂದರೆ ಬೆಂಗಳೂರು ಈ ಪಟ್ಟಿಯಲ್ಲಿ 29ನೇ ಸ್ಥಾನ ಗಳಿಸಿದೆ. ಬೆಂಗಳೂರು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಹಚ್ಚ ಹಸಿರಿನ ಪ್ರದೇಶಗಳು, ಕುಟುಂಬ ಸ್ನೇಹಿ ಆಕರ್ಷಣೆಗಳು ಮತ್ತು ಗುಣಮಟ್ಟದ ಆಹಾರ ಮತ್ತು ಶಾಪಿಂಗ್ ಮಾಲ್‌ಗಳು ಇದಕ್ಕೆ ಪ್ರಮುಖ ಕಾರಣ. ಇನ್ನು ಈ ವರದಿಯಲ್ಲಿ ಭಾರತದ ಮುಂಬೈ, ದೆಹಲಿ ಮತ್ತು ಹೈದರಾಬಾದ್ ನಗರಗಳನ್ನೂ ಗುರುತಿಸಿದ್ದು, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟತೆಗಳಿಂದ ಗುರುತಿಸಿಕೊಂಡಿದೆ.
ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ವಿಶ್ವ ಭೂಪಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಈ ವರದಿಯ ಪ್ರಕಾರ, ನಗರವು ತಂತ್ರಜ್ಞಾನದ ಕೇಂದ್ರದಲ್ಲಿ ಅಭಿವೃದ್ಧಿ ಮಾತ್ರವಲ್ಲದೇ, ಕೆಲಸ ಮತ್ತು ಜೀವನಶೈಲಿಯಲ್ಲೂ ಆಕರ್ಷಿಸುತ್ತದೆ.
ಬೆಂಗಳೂರು ಕುಟುಂಬ ಸ್ನೇಹಿ ಆಕರ್ಷಣೆಗಳ ವಿಭಾಗದಲ್ಲಿ ಜಾಗತಿಕವಾಗಿ #1 ಸ್ಥಾನದಲ್ಲಿದೆ. ಕುಟುಂಬ ಸ್ನೇಹಿ ಆಕರ್ಷಣೆ ಎಂದರೆ, ಎಲ್ಲಾ ವಯೋಮಾನದವರಿಗೂ, ವಿಶೇಷವಾಗಿ ಮಕ್ಕಳಿಂದ ಹಿಡಿದು ಹಿರಿಯರವೆಗೂ ಸುರಕ್ಷಿತವಾಗಿ, ಸಂತೋಷದಿಂದ ಆನಂದಿಸಬಹುದಾದ ಸ್ಥಳ. ಅದರಲ್ಲೂ ಬನ್ನೇರುಘಟ್ಟದ ವನ್ಯಜೀವಿ ವಲಯ ಮತ್ತು ವಂಡರ್‌ಲಾದ ರೋಮಾಂಚಕಾರಿ ರೈಡ್‌ಗಳು ಇದಕ್ಕೆ ಕಾರಣ.
ಉತ್ತಮ ಆಹಾರ ಮತ್ತು ಚಿಲ್ಲರೆ ವ್ಯಾಪಾರ ಕೇಂದ್ರ
ಆಹಾರ ಕ್ಷೇತ್ರದಲ್ಲಿಯೂ ಬೆಂಗಳೂರು ಭಾರೀ ಮುನ್ನೆಲೆಗೆ ಬಂದಿದೆ. ರೆಸ್ಟೋರೆಂಟ್‌ಗಳಿಗಾಗಿ ಜಾಗತಿಕವಾಗಿ 3ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಕರಾವಳಿ ಪರಂಪರೆಯ ಸಮುದ್ರಾಹಾರದಿಂದ ಇಂದಿರಾನಗರದ ಆಧುನಿಕ ಅಡುಗೆಮನೆಗಳವರೆಗೆ, ನಗರವು ಸ್ಥಳೀಯರು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಪಾಕಶಾಲೆಯಾಗಿ ಗುರುತಿಸಿಕೊಂಡಿದೆ.
ಶಾಪಿಂಗ್ ಮಾಲ್‌ನಲ್ಲೂ ಸೈ ಎನಿಸಿಕೊಂಡಿರುವ ಬೆಂಗಳೂರು, ಈ ವಿಭಾಗದಲ್ಲಿ ರ್ಯಾಂಕ್ #6 ಪಡೆದಿದ್ದು, ಬೆಂಗಳೂರು ಯುಬಿ ಸಿಟಿಯಲ್ಲಿನ ಐಷಾರಾಮಿ ಬ್ರ್ಯಾಂಡ್‌ಗಳಿಂದ ಹಿಡಿದು ಫೀನಿಕ್ಸ್ ಮಾಲ್ ಆಫ್ ಏಷ್ಯಾದಂತಹ ಬೃಹತ್ ಶಾಪಿಂಗ್ ಮಾಲ್‌ಗಳೇ ಇದಕ್ಕೆ ಕಾರಣವಾಗಿದೆ.


Click it and Unblock the Notifications