ಆದಾರ್ ಪೂನಾವಾಲಾ ಅವರು ಭಾರತದ ಪ್ರಖ್ಯಾತ ಉದ್ಯಮಿಯಾಗಿದ್ದು, ವಾಕ್ಸಿನ್ ತಯಾರಿಕಾ ಸಂಸ್ಥೆ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮುಖ್ಯಸ್ಥರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಮುಖ ವಾಕ್ಸಿನ್ ತಯಾರಿಕಾ ಸಂಸ್ಥೆಯ ಮುಖ್ಯಸ್ಥರಾಗಿದ್ದರೂ ಕೋವಿಡ್‌ಗೂ ಮುನ್ನ ಅವರ ಬಗ್ಗೆ ಅಷ್ಟೊಂದು ಯಾರಿಗೂ ತಿಳಿದಿರಲಿಲ್ಲ. ಆದರೆ ಕೋವಿಡ್ ಆರಂಭವಾದ ಬಳಿಕ ಜಗತ್ತಿನಲ್ಲಿ ಕೋವಿಡ್ ನಿರೋಧಕ ವ್ಯಾಕ್ಸಿನ್‌ಗಳ ಉತ್ಪನ್ನಗಳ ಪೂರೈಕೆಗಳ ಮೂಲಕ ಆದಾರ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಆದಾರ್ ಪೂನಾವಾಲಾ ಅವರು ಬರೊಬ್ಬರಿ 1.36 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿದ್ದು, ಭಾರತದ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ನಾವು ಇಂದು ಆದಾರ್ ಅವರ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಬದಲಾಗಿ ಅವರ ಪತ್ನಿ, ಅದರಲ್ಲೂ ಸಾಮಾಜಿಕ ಸೇವಾಕಾರ್ಯದ ಮೂಲಕವೂ ಗುರುತಿಸಿಕೊಂಡಿರುವ ನತಾಶಾ ಪೂನಾವಾಲಾ ಬಗ್ಗೆ ಮಾಹಿತಿ ನೀಡಲಿದ್ದೇವೆ. ನತಾಶಾ ಅವರು ಎಸ್‌ಐಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ವಿಲ್ಲೂ ಪೂನಾವಲಾ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ವಿಲ್ಲೂ ಪೂನಾವಾಲಾವು ವಿವಿಧ ದತ್ತಿ ಯೋಜನೆಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ.
ನತಾಶಾ ಅವರ ಬಗ್ಗೆ...
ನತಾಶಾ ಅವರು 1981ರ ನವೆಂಬರ್ 26ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಗೋವಾದಲ್ಲಿ ಆದಾರ್ ಹಾಗೂ ನತಾಶಾ ಅವರು ಪರಿಚಯವಾಗಿದ್ದು, ಪರಿಣಾಮ 2006ರಂದು ವಿವಾಹ ಬಂಧನಕ್ಕೆ ಒಳಗಾದರು. ಸದ್ಯ ದಂಪತಿ ಸೈರಸ್ ಮತ್ತು ಡೇರಿಯಸ್ ಎಂಬ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಇನ್ನು ನತಾಶಾ ಅವರ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ಪುಣೆಯ ಸೈಂಟ್ ಮೇರಿಸ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದ ನತಾಶಾ, ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದರು. ನಂತರ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು.

750 ಕೋಟಿ ರೂ. ಬಂಗಲೆಯಲ್ಲಿ ವಾಸ!
ಇನ್ನು ಬಹುತೇಕ ಎಲ್ಲರೂ ಬಂಗಲೆಯಲ್ಲಿ ವಾಸಿಸಬೇಕೆಂದು ಬಯಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಶ್ರೀಮಂತರ ಜೀವನ ಶೈಲಿ ಒಂದು ಬೇರೆ ಮಟ್ಟದಲ್ಲಿರುತ್ತದೆ. ಇದಕ್ಕೆ ಆದಾರ್ ಕುಟುಂಬ ಕೂಡ ಹೊರತಾಗಿಲ್ಲ. ಆದಾರ್ ಪೂನಾವಾಲಾ ಹಾಗೂ ನತಾಶಾ ಪೂನಾವಾಲಾ ದಂಪತಿಯು ಮಹಾರಾಷ್ಟ್ರದ ಮುಂಬೈನ ಲಿಂಕನ್ ಹೌಸ್‌ನಲ್ಲಿ ವಾಸವಿದ್ದು, ಇದು ಬರೊಬ್ಬರಿ 750 ಕೋಟಿ ರೂ. ಮೌಲ್ಯವನ್ನು ಹೊಂದಿದೆ. ಇನ್ನು ಲಿಂಕನ್ ಹೌಸ್ ಎಂಬುದು ಕೇವಲ ಮನೆಯಲ್ಲ. ಅದೊಂದು ಬೃಹತ್ ರಾಜ ಬಂಗಲೆಯಾಗಿದೆ. ಅಲ್ಲದೆ ಈ ಬಂಗೆಲಯ ಹಿಂದೆ ಇತಿಹಾಸ ಕೂಡ ಹೊಂದಿದೆ. 1933ರಲ್ಲಿ ಬ್ರಿಟಿಷ್ ವಾಸ್ತುಶಿಲ್ವಿ ಕ್ಲೌಡ್ ಬ್ಯಾಟ್ಲಿ ಅವರು ವಾಂಕನೇರ್ ನ ಮಹಾರಾಜರಿಗಾಗಿ ಈ ಬಂಗಲೆಯನ್ನು ಅಮೋಘ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ನಂತರ ಅನೇಕ ವರ್ಷಗಳಲ್ಲಿ ಯುಎಸ್ ಸರ್ಕಾರಕ್ಕೆ ಈ ಬಂಗಲೆಯನ್ನು ಅನೇಕ ವರ್ಷಗಳ ಕಾಲ ಗುತ್ತಿಗೆ ನೀಡಲಾಗಿತ್ತು. ಇನ್ನು ಬಳಿಕ ಈ ಬಂಗಲೆಯನ್ನು 2015ರಲ್ಲಿ ಆದಾರ್ ಅವರ ತಂದೆ ಸೈರಸ್ ಪೂನಾವಾಲಾ ಅವರು ಸುಮಾರು 934 ಕೋಟಿ ರೂ.ಗೆ ಖರೀದಿಸಿದ್ದರು. ಸದ್ಯ ಕುಟುಂಬ ಇದರಲ್ಲೇ ವಾಸ ಮಾಡುತ್ತಿದ್ದು, ಈ ಬಂಗಲೆಯ ಬಗ್ಗೆ ಅನೇಕರು ಕುತೂಹಲ ಹೊಂದಿದ್ದಾರೆ.
ಸೇವಾಕಾರ್ಯದ ಮೂಲಕ ಗುರುತಿಸಿಕೊಂಡ ನತಾಶಾ
ಇನ್ನೂ ಭಾರತದಲ್ಲಿ ಬಹುತೇಕ ಎಲ್ಲಾ ಉದ್ಯಮಿಗಳತೆ ನತಾಶಾ ಕೂಡ ಸೇವಾಕಾರ್ಯದ ಮೂಲಕವೂ ಗುರುತಿಸಿಕೊಂಡಿದ್ದಾರೆ. ಉದ್ಯಮ ವಲಯದಲ್ಲಿ ಗಳಿಸುವ ಲಾಭದ ಒಂದಿಷ್ಟು ಭಾಗವನ್ನು ಕುಟುಂಬ ಸಾಮಾಜಿಕ ಕಾರ್ಯಕ್ಕೂ ವಿನಿಯೋಗಿಸುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ನತಾಶಾ ಅವರು ಸದ್ಯ ಉದ್ಯಮಿ ಹಾಗೂ ಸೇವಾಕಾರ್ಯ ಎರಡರಲ್ಲೂ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನತಾಶಾ ನಾಯಕತ್ವದಲ್ಲಿ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಜಾಗತಿಕವಾಗಿ ಅತೀ ದೊಡ್ಡ ಲಸಿಕೆ ತಯಾರಾಕ ಕಂಪೆನಿಗಳಲ್ಲಿ ಒಂದಾಗಿ ಈಗಾಗಲೇ ಹೊರಹೊಮ್ಮಿದೆ. ನತಾಶಾ ಅವರು ತನ್ನ ಸೇವಾ ಪ್ರತಿಷ್ಟಾನದ ಮೂಲಕ ಸಾಮಾ ಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಈ ಸಂಸ್ಥೆಯು ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.


Click it and Unblock the Notifications