ಬೆಂಗಳೂರು, ಆಗಸ್ಟ್ 11: ಸೈಬರ್ ವಂಚಕರು ದಿನಕಳೆದಂತೆ ತಮ್ಮ ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ವಂಚನೆಯಲ್ಲಿ ವೈದ್ಯರು, ವಕೀಲರು, ಎಂಜಿನಿಯರ್ ಹೀಗೆ ವಿದ್ಯಾವಂತರೇ ಸೈಬರ್ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಬೆಂಗಳೂರಿನ ಟೆಕ್ ಉದ್ಯಮಿ ದಂಪತಿಗಳು ಹೊರತಾಗಿಲ್ಲ. ಆನ್ ಲೈನ್ ಟ್ರೇಡಿಂಗ್ ವಂಚನೆಯ ಕೂಪಕ್ಕೆ ಸಿಲುಕಿದ ದಂಪತಿಗಳು ಬರೋಬ್ಬರಿ 1.53 ಕೋಟಿ. ರೂ ಕಳೆದುಕೊಂಡ ಘಟನೆ ನಡೆದಿದ್ದು, ಆದರೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಿಂದ 90 ಶೇ. ದಷ್ಟು ಹಣವನ್ನು ವಾಪಾಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸರು 1.4 ಕೋಟಿ ರೂ. ಯಶಸ್ವಿಯಾಗಿ ಹಿಂಪಡೆದುಕೊಳ್ಳುವ ಮೂಲಕ ತ್ವರಿತವಾಗಿ ದಂಪತಿಗೆ ಸ್ಪಂದಿಸಿದ್ದಾರೆ.
ಬಾಣಸವಾಡಿಯಲ್ಲಿ ನೆಲೆಸಿರುವ ದಂಪತಿಗಳು ಹೂಡಿಕೆಯ ಮೇಲೆ ಹೆಚ್ಚಿನ ಆದಾಯ ಗಳಿಸುವ ಅಮಿಷಕ್ಕೆ ವಂಚಕರಿಗೆ ಬಲಿಯಾಗಿದ್ದಾರೆ. ಆನ್‌ಲೈನ್‌ನಲ್ಲೇ ಷೇರು ಮಾರುಕಟ್ಟೆ ವಹಿವಾಟು ನಡೆಸುವ ಆಮಿಷ ಒಡ್ಡಿದ ಸೈಬರ್ ಕ್ರಿಮಿಗಳು, ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿಸಿ ಬಳಿಕ ನಾಮ ಹಾಕಿದ್ದಾರೆ. ಬ್ರಿಟನ್ ನಿಂದ ಕಾರ್ಯಾಚರಿಸುತ್ತಿರುವ ವಂಚಕರು, ಕದ್ದ ಹಣವನ್ನು ಲಾಂಡರಿಂಗ್ ಮಾಡಲು ಉತ್ತರ ಭಾರತದ ವ್ಯಕ್ತಿಗಳಿಂದ ಬಾಡಿಗೆಗೆ ಪಡೆದ ಮ್ಯೂಲ್ ಖಾತೆ' (ನಕಲಿ) ಜಾಲವನ್ನು ಬಳಸಿಕೊಂಡಿದ್ದಾರೆ. ಮ್ಯೂಲ್ ಖಾತೆಗಳೆಂದ್ರೆ, ಅನೈತಿಕವಾಗಿ ಸಂಪಾದಿಸಿದ ಹಣವನ್ನ ಸ್ವೀಕರಿಸುವ ಅಥವಾ ಖಾತೆಗೆ ವರ್ಗಾಯಿಸುವ ಬ್ಯಾಂಕ್ ಖಾತೆಗಳಾಗಿವೆ. ಇದು ಅಕ್ರಮವಾಗಿ ಹಣವನ್ನ ವರ್ಗಾಯಿಸುವುದನ್ನು ಸುಲಭಗೊಳಿಸುತ್ತದೆ.

ಹೇಗೆ ನಡೆಯಿತು ಈ ವಂಚನೆ?
ಮೊದಲು ಆನ್‌ಲೈನ್‌ನಲ್ಲೇ ಷೇರು ಮಾರುಕಟ್ಟೆ ವಹಿವಾಟು ನಡೆಸುವ ಆಮಿಷ ಒಡ್ಡಿದ ಸೈಬರ್ ಕ್ರಿಮಿಗಳು, ಹೂಡಿಕೆದಾರ ದಂಪತಿಗಳಿಗೆ ನ್ಯಾಯಸಮ್ಮತತೆಯ ಭ್ರಮೆಯನ್ನು ಕಾಪಾಡಿಕೊಳ್ಳಲು, ನಕಲಿ ವೆಬ್‌ಸೈಟ್ ತೆರೆದಿದ್ದು, ಇಲ್ಲಿ ಹೂಡಿಕೆದಾರರು ತಮ್ಮ ಹೂಡಿಕೆಯ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಬಹುದಾಗಿತ್ತು.
ಆರಂಭದಲ್ಲಿ ತಮ್ಮ ಹೂಡಿಕೆಯಲ್ಲಿ ಸ್ಪಷ್ಟ ಗ್ರೋತ್ ಕಾಣಿಸಿಕೊಂಡ ದಂಪತಿಗಳು ಖುಷಿಪಟ್ಟಿದ್ದರು. ಟೆಕ್ಕಿ ದಂಪತಿಗಳು ಕೆಲವು ತಿಂಗಳ ನಂತರ ತಮ್ಮ ಫಂಡ್ ನ ಒಂದು ಭಾಗವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ನಕಲಿ ವೆಬ್‌ಸೈಟ್ ಅವರಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಜೊತೆಗೆ ಎಲ್ಲಾ ಪ್ರಯತ್ನಗಳನ್ನು ನಿರಾಕರಿಸಲಾಯಿತು. ಜೊತೆಗೆ ಸೈಟಿನಿಂದ ಅವರನ್ನು ಸಂಪೂರ್ಣವಾಗಿ ನಿರ್ಬಂಧಿಸಿದಾಗ ವಂಚನೆಯ ಕೂಪದೊಳಗೆ ತಾವು ಸಿಲುಕಿರುವುದು ಅರಿವಾಯಿತು. ತಕ್ಷಣ ದಂಪತಿಗಳು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ನಿಖರವಾದ ತನಿಖೆ ಮತ್ತು ಬ್ಯಾಂಕ್ ಅಧಿಕಾರಿಗಳ ಸಮನ್ವಯದ ಸಾಧಿಸುವ ಮೂಲಕ, ಹಣದ ಜಾಡು ಯಶಸ್ವಿಯಾಗಿ ಪತ್ತೆಹಚ್ಚಿ, ವಂಚನೆಯಲ್ಲಿ ಭಾಗಿಯಾಗಿರುವ ಬರೋಬ್ಬರಿ 50 ಖಾತೆಗಳನ್ನು ಸ್ಥಗಿತಗೊಳಿಸಿದರು. ಪೊಲೀಸರ ಈ ತ್ವರಿತ ಕ್ರಮದಿಂದ ದಂಪತಿಗಳು ಕಳೆದುಕೊಂಡ ಹಣದ ಗಣನೀಯ ಭಾಗವನ್ನು ಮರುಪಡೆಯಲು ಯಶಸ್ವಿಯಾಯಿತು.
" ಸೈಬರ್ ಕ್ರೈಮ್ ಕುರಿತು ದೂರು ದಾಖಲಾದಾಗ ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ತಂಡವು ಮೂರು ನಿಯಮಗಳನ್ನು ಅನುಸರಿಸುತ್ತದೆ, ಅವುಗಳೆಂದರೆ ಗೋಲ್ಡನ್ ಅವರ್‌ನಲ್ಲಿ ದೂರು, ಹಣದ ಜಾಡು ಹಿಂಬಾಲಿಸುವುದು ಮತ್ತು ಖಾತೆಗಳನ್ನುಸ್ಥಗಿತಗೊಳಿಸುವುದು. ಇಂತಹ ಘಟನೆಯಾದ ಸಂದರ್ಭದಲ್ಲಿ ದೂರುದಾರರಿಂದ ಸಮಯಕ್ಕೆ ಮಾಹಿತಿಯನ್ನು ಪಡೆಯುವುದು ಮತ್ತು ಗೋಲ್ಡನ್ ಅವರ್‌ನಲ್ಲಿ ದೂರು ದಾಖಲಿಸುವುದು ಬಹಳ ಮುಖ್ಯವಾಗುತ್ತದೆ. ಇದರ ಜೊತೆಗೆ, ಕೆಲಸವನ್ನು ತ್ವರಿತವಾಗಿ ಮಾಡಲು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಮತ್ತು ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ," ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾದ್ಯಮಗಳಿಗೆ ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲೇ ಷೇರು ಮಾರುಕಟ್ಟೆ ವಹಿವಾಟು, ಅಧಿಕ ಲಾಭಾಂಶದ ಕೊಡುಗೆಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸುವಂತೆ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣವೇ ವರದಿ ಮಾಡುವಂತೆ ಪೊಲೀಸರು ನಾಗರಿಕರನ್ನು ಒತ್ತಾಯಿಸಿದ್ದಾರೆ.


Click it and Unblock the Notifications