ಪ್ರಸ್ತುತ ನಮ್ಮ ಮೆಟ್ರೋದಲ್ಲಿ ನಮಗೆ ನೇರಳೆ ಹಾಗೂ ಹಸಿರು ಬಣ್ಣದ ಮಾರ್ಗಗಳಿವೆ. ಆದರೆ ಶೀಘ್ರದಲ್ಲಿಯೇ ಹಳದಿ, ಕೆಂಪು ಮೊದಲಾದ ಮಾರ್ಗಗಳು ಆರಂಭವಾಗಲಿದೆ. ಈ ನಡುವೆ ನಾಗವಾರ ಜಂಕ್ಷನ್‌ನಲ್ಲಿ ನಿರಂತರ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು (ಬಿಟಿಪಿ) ವಾಹನ ಸಂಚಾರ ವ್ಯತ್ಯಯವಾಗುವ ಮುನ್ಸೂಚನೆಯನ್ನು ನೀಡಿದ್ದಾರೆ.
ಹೊರ ವರ್ತುಲ ರಸ್ತೆ, ಲಿಂಗರಾಜಪುರ, ಹೆಣ್ಣೂರು ಮೇಲ್ಸೇತುವೆ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು ನಾಗವಾರ ಮುಖ್ಯ ರಸ್ತೆಯಿಂದ ದೂರ ಸರಿದು ಅಂಬೇಡ್ಕರ್ ಮೈದಾನದ ಬಳಿ ಇರುವ ಸರ್ವಿಸ್ ರಸ್ತೆಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ನಾಗವಾರ ಮೇಲ್ಸೇತುವೆ ಮೂಲಕ ಹೆಬ್ಬಾಳ ಕಡೆಗೆ ಪ್ರಯಾಣಿಸುವವರಿಗೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನಾಗವಾರ ಜಂಕ್ಷನ್‌ಗೆ ಹೋಗುವ ವಾಹನಗಳು ಎಡಭಾಗದಲ್ಲಿರುವ ಸರ್ವಿಸ್ ರಸ್ತೆಯನ್ನು ಬಳಸಬೇಕು ಎಂದು ಬೆಂಗಳೂರು ಸಂಚಾರಿ ಪೊಲೀಸರು (ಬಿಟಿಪಿ) ತಿಳಿಸಿದ್ದಾರೆ.
ಯೆಲ್ಲೋ ಲೇನ್ ಪ್ರಾರಂಭ ಯಾವಾಗ?
ಫೆಬ್ರವರಿ 2024 ರ ಇತ್ತೀಚಿನ ಗಡುವಿನ ಬದಲಾಗಿ ಸಾರ್ವತ್ರಿಕ ಚುನಾವಣೆಯ ನಂತರವೇ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ಇತರ ಭಾಗಗಳು ಮೆಟ್ರೋ ಸಂಪರ್ಕವನ್ನು ಪಡೆಯುತ್ತವೆ ಎಂದು ವರದಿಯಾಗಿದೆ. ಆರು ಬೋಗಿಗಳ ರೈಲು ಸೆಟ್‌ನ ಸಾಗಣೆಗೆ ಡೆಕ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಮೂಲಮಾದರಿ ರೈಲನ್ನು ಸ್ವೀಕರಿಸಿದ ನಂತರ, ಬಿಎಂಆರ್‌ಸಿಎಲ್ ಪ್ರಾಯೋಗಿಕವಾಗಿ ರೈಲು ಚಲಾವಣೆ ನಡೆಸಿದ ಪರಿಶೀಲನೆ ಮಾಡಬೇಕಾಗುತ್ತದೆ. ಉಳಿದಂತೆ ವಾಣಿಜ್ಯ ಕಾರ್ಯಾಚರಣೆಗಳಿಗೆ ಅನುಮೋದನೆ ಪಡೆಯಲು ಕನಿಷ್ಠ ಮೂರು ತಿಂಗಳ ಅಗತ್ಯವಿದೆ ಎಂದು ಅದರ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಕಾರಣ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಿಎಂಆರ್‌ಸಿಎಲ್‌ಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಾಣಿಜ್ಯವಾಗಿ ಯೆಲ್ಲೋ ಲೇನ್ ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ.
19.15-ಕಿಮೀ ಆಗಿರುವ ಹಳದಿ ಮಾರ್ಗವು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಮೆಟ್ರೋ ಲೇನ್ ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸುತ್ತದೆ. ಆದ್ದರಿಂದಾಗಿ ಇದು ಅತೀ ಮಹತ್ವವನ್ನು ಪಡೆದುಕೊಂಡಿದೆ.
ನೆಲಮಂಗಲಕ್ಕೆ ನಮ್ಮ ಮೆಟ್ರೋ
ಇನ್ನು ಇತ್ತೀಚೆಗೆ ಬೆಂಗಳೂರು ನಮ್ಮ ಮೆಟ್ರೋ ಸೇವೆಯನ್ನು ನೆಲಮಂಗಲಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ನೆಲಮಂಗಲಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಹಲವಾರು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ.
ಈಗ ಈ ಮನವಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ನೆಲಮಂಗಲದಲ್ಲಿ ಮೆಟ್ರೋ ಆರಂಭದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದಿದ್ದಾರೆ. ಇನ್ನು ಮನವಿ ನೀಡಿದ ಜನರು ಪ್ರಮುಖವಾಗಿ ನೆಲಮಂಗಲದಲ್ಲಿ ಶೀಘ್ರವಾಗಿ ಜನಸಂಖ್ಯೆ ಅಧಿಕವಾಗುತ್ತಿದೆ. ಹಾಗೆಯೇ ಸಂಚಾರದಟ್ಟಣೆಯು ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಮೆಟ್ರೋ ಸೌಲಭ್ಯ ಇಲ್ಲಿಗೂ ವಿಸ್ತರಿಸಬೇಕು ಎಂದು ಹೇಳಿದ್ದಾರೆ.


Click it and Unblock the Notifications