ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಬೋರ್ಡ್ ತನ್ನ ವಾರ್ಷಿಕ ಬಜೆಟ್‌ನ ಶೇಕಡ 1 ರಷ್ಟು ಮೊತ್ತವನ್ನು ಆಂಧ್ರಪ್ರದೇಶದಲ್ಲಿ ದೇವಾಲಯ ಇರುವ ನಗರವಾದ ತಿರುಪತಿಯನ್ನು ಅಭಿವೃದ್ಧಿಪಡಿಸಲು ವಿನಿಯೋಗಿಸಲು ನಿರ್ಧಾರ ಮಾಡಿದೆ. ಹಾಗೆಯೇ ಸೋಮವಾರವೇ 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಟಿಟಿಡಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಮಂಡಳಿಯಾಗಿದೆ. ಬಿ ಕರುಣಾಕರ ರೆಡ್ಡಿ ಅಧ್ಯಕ್ಷತೆಯಲ್ಲಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಸಂದರ್ಭದಲ್ಲೇ ಕೋಟ್ಯಾಂತರ ರೂಪಾಯಿಗಳಲ್ಲಿ ನಡೆಯುತ್ತಿರುವ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ನಾಲ್ಕು ಪಥ ರಸ್ತೆ ವಿಸ್ತರಣೆಗೆ ಅನುಮೋದನೆ
ತಿರುಮಲದ ಜಪಾಲಿ ತೀರ್ಥಂ, ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಅಂಜನಾದ್ರಿ ಆಕಾಶಗಂಗಾ ಮತ್ತು ಪಾಪವಿನಾಶನಂ ಸ್ಥಳದ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ಪ್ರಸ್ತುತ ಇರುವ ದ್ವಿಪಥ ರಸ್ತೆಯನ್ನು ಆಕಾಶಗಂಗೆಯಿಂದ ಹೊರವರ್ತುಲ ರಸ್ತೆಯವರೆಗೆ ಚತುಷ್ಪಥ ರಸ್ತೆಯಾಗಿ ವಿಸ್ತರಿಸಲು ಮಂಡಳಿಯು ಅನುಮೋದನೆ ನೀಡಿದೆ. ಇದು ಸುಮಾರು 40 ಕೋಟಿ ರೂಪಾಯಿ ಯೋಜನೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರಾಹಸ್ವಾಮಿ ರೆಸ್ಟ್ ಹೌಸ್‌ನಲ್ಲಿ ಇದೇ ರೀತಿಯ ಸಂಚಾರದಟ್ಟಣೆಯ ಸಮಸ್ಯೆ ಇದೆ. ಈ ಸಮಸ್ಯೆ ನಿವಾರಣೆಗಾಗಿ ಟಿಟಿಡಿ 11 ಕೋಟಿ ರೂಪಾಯಿ ಮೀಸಲಿರಿಸಿದೆ. ಅಂದರೆ ಇಷ್ಟು ವೆಚ್ಚದಲ್ಲಿ ಹೊರವರ್ತುಲ ರಸ್ತೆಯವರೆಗೆ ಚತುಷ್ಪಥ ರಸ್ತೆ ಮತ್ತು ಇತರ ಸೌಕರ್ಯಗಳ ನಿರ್ಮಾಣಕ್ಕೆ ಮಂಡಳಿಯು ಗ್ರೀನ್ ಸಿಗ್ನಲ್ ನೀಡಿದೆ. ಹಾಗೆಯೇ ಚೆರ್ಲೋಪಲ್ಲಿಯಿಂದ ಶ್ರೀನಿವಾಸ ಮಂಗಾಪುರದವರೆಗೆ ರಸ್ತೆ ವಿಸ್ತರಣೆ, ಇತರೆ ಕಾಮಗಾರಿಗಾಗಿ ಮಂಡಳಿಯು 25 ಕೋಟಿ ರೂಪಾಯಿಗಳನ್ನು ಅನುಮೋದಿಸಿದೆ.
ಉತ್ಸವ ಸಂದರ್ಭದಲ್ಲಿ ಜನಜಂಗುಳಿ ಅಧಿಕವಾಗಿರುತ್ತದೆ. ಈ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಕೂಡಾ ಟಿಟಿಡಿ ಕ್ರಮವನ್ನು ಕೈಗೊಂಡಿದೆ. ಹೊರ ವರ್ತುಲ ರಸ್ತೆಯ ಉದ್ದಕ್ಕೂ ಜಿಜಿ ಅಣೆಕಟ್ಟಿನವರೆಗೆ ಶಾಶ್ವತ ಸರತಿ ಸಾಲುಗಳ ಕಂಬಗಳನ್ನು ನಿರ್ಮಾಣ ಮಾಡಲು ಮಂಡಳಿಯು 18 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ.
ರಸ್ತೆಗಳ ದುರಸ್ತಿ, ನೈರ್ಮಲ್ಯ, ಪ್ರಾಚೀನ ದೇವಾಲಯಗಳ ಬಲ ನಿರ್ಣಯ
ಟಿಟಿಡಿ ಟ್ರಸ್ಟ್ ಬೋರ್ಡ್ ತಿರುಪತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶ್ರಾಂತಿ ಗೃಹಗಳು, ದೇವಾಲಯಗಳು, ಚೌಟ್ರಿಗಳು, ಇತರ ದೇವಾಲಯಗಳ ಸಂಸ್ಥೆಗಳು ಇರುವಲ್ಲೆಲ್ಲಾ ರಸ್ತೆಗಳ ದುರಸ್ತಿ, ನೈರ್ಮಲ್ಯ ಮತ್ತು ನಿರ್ವಹಣೆಯನ್ನು ಮಾಡಲು ತೀರ್ಮಾನಿಸಿದೆ. ಪುರಾತನ ವಸ್ತುಗಳು, ಕಟ್ಟಡ, ಕೆತ್ತನೆಗಳ ಮೇಲೆ ಹಾನಿಯಾಗದಂತೆ, ಹಾಗೆಯೇ ಪುರಾತನ ಕಟ್ಟಡಗಳು ಕುಸಿಯದಂತೆ ನೋಡಿಕೊಳ್ಳಲು ಮಂಡಳಿಯು ಟಿಟಿಡಿ ಅಡಿಯಲ್ಲಿ ಎಲ್ಲಾ ಪ್ರಾಚೀನ ದೇವಾಲಯಗಳು ಮತ್ತು ಗೋಪುರಗಳು ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯುವ ನಿಟ್ಟಿನಲ್ಲಿ ಬಲ ನಿರ್ಣಯ ಮಾಡಲು ಐಐಟಿ ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.
ಈ ಐಐಟಿ ತಜ್ಞರ ಸಮಿತಿಯು ಪ್ರಾಚೀನ ದೇವಾಲಯಗಳು ಮತ್ತು ಗೋಪುರಗಳು ಎಷ್ಟು ಗಟ್ಟಿಯಾಗಿದೆ, ಕುಸಿಯುವ ಅಥವಾ ಬೀಳುವ ಸ್ಥಿತಿಗೆ ಬಂದಿದೆಯೇ ಎಂದು ಪರಿಶೀಲನೆ ಮಾಡಿ ನಿರ್ಧರಿಸಲಿದೆ. ಸಮಿತಿಯ ವರದಿಯ ಆಧಾರದ ಮೇಲೆ ದೇವಸ್ಥಾನಗಳನ್ನು ದುರಸ್ತಿ ಮಾಡಲಾಗುತ್ತದೆ.
ಗಾಯತ್ರಿ ಸದನ, ಶ್ರೀವಾರಿ ಕುಟೀರ, ಇತರ 13 ವಿಶ್ರಾಂತಿ ಗೃಹಗಳ ಪುನರ್ ನಿರ್ಮಾಣಕ್ಕೂ ಮಂಡಳಿಯು ಅನುಮೋದನೆ ನೀಡಿದೆ. ಹೆಚ್ಚುವರಿಯಾಗಿ, 2023-24 ಶೈಕ್ಷಣಿಕ ವರ್ಷದಿಂದ ಎಲ್ಲಾ ಟಿಟಿಡಿ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕಾಗಿ ವಾರ್ಷಿಕವಾಗಿ 2.63 ಕೋಟಿ ರೂಪಾಯಿಗಳನ್ನು ಮಂಡಳಿಯು ಅನುಮೋದಿಸಿದೆ. ಇದರಿಂದಾಗಿ 3,259 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಲಭ್ಯವಾಗಲಿದೆ.
ಟಿಟಿಡಿ ಕಲ್ಯಾಣ ಮಂಟಪಗಳಲ್ಲಿ (ಮದುವೆಯ ಸಭಾಂಗಣ) ವಿವಾಹದ ಸಂದರ್ಭದಲ್ಲಿ ಭಕ್ತಿಗೀತೆಗಳನ್ನು ಮಾತ್ರ ಹಾಕಬೇಕು. ಚಲನಚಿತ್ರ ಮತ್ತು ಡಿಜೆ ಹಾಡುಗಳನ್ನು ನಿಷೇಧಿಸಬೇಕು ಎಂದು ಕೂಡಾ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಬೋರ್ಡ್ ನಿರ್ಧರಿಸಿದೆ.


Click it and Unblock the Notifications