ಯೆಸ್ ಬ್ಯಾಂಕ್ ಹೆಸರು ಈಗ ಪದೇ ಪದೇ ಕೇಳಿಬರುತ್ತಿದೆ. ಅಲ್ಲಿ ಹಣ ಇಟ್ಟಿದ್ದವರಲ್ಲಿ ಆತಂಕ ಕಾಣಿಸಿಕೊಂಡಿದೆ. ಕಂದ್ರ ಸರ್ಕಾರ, ಆರ್ ಬಿಐನಿಂದ ಅದೇನೇ ಧೈರ್ಯ ಹೇಳಿದರೂ ಜನರಲ್ಲಿ ಅನುಮಾನ ಇದ್ದೇ ಇದೆ. ಯೆಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ 1,300 ಕೋಟಿ ರುಪಾಯಿಯನ್ನು ಭಾರತದ ಶ್ರೀಮಂತ ದೇವಾಲಯವಾದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಕಳೆದ ವರ್ಷದ ಕೊನೆ ಭಾಗದಲ್ಲಿ ವಿಥ್ ಡ್ರಾ ಮಾಡಿದ್ದರು.
ಈ ಬಗ್ಗೆ ಟಿಟಿಡಿ ಶುಕ್ರವಾರ ಹೇಳಿಕೆ ನೀಡಿದ್ದು, ಕಳೆದ ವರ್ಷದ ಅಕ್ಟೋಬರ್ ನಲ್ಲೇ ಹಣವನ್ನು ವಿಥ್ ಡ್ರಾ ಮಾಡಿದ್ದೇವೆ. ಸಮಸ್ಯೆಗೆ ಸಿಲುಕಿರುವ ಯೆಸ್ ಬ್ಯಾಂಕ್ ಜತೆಗೆ ಯಾವ ವ್ಯವಹಾರವೂ ಇಲ್ಲ ಎಂದು ಹೇಳಲಾಗಿದೆ. ಏಪ್ರಿಲ್ 3ನೇ ತಾರೀಕಿನ ತನಕ ಯೆಸ್ ಬ್ಯಾಂಕ್ ನಿಂದ ಹಣ ವಿಥ್ ಡ್ರಾ ಮಾಡುವುದಕ್ಕೆ ಆರ್ ಬಿಐ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.
ಠೇವಣಿ ಮೆಚ್ಯೂರಿಟಿ ನಂತರ ಕಳೆದ ಅಕ್ಟೋಬರ್ ನಲ್ಲಿ ಹಣ ವಿಥ್ ಡ್ರಾ ಮಾಡಲಾಗಿದೆ. ಅಷ್ಟು ಬಿಟ್ಟರೆ ದಿಢೀರನೆ ವಿಥ್ ಡ್ರಾ ಮಾಡಿದ ಮೊತ್ತ ಅದಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಣ ಅಥವಾ ಚಿನ್ನವನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಅದರ ಪ್ರಕಾರ ನಾವು ನಡೆದುಕೊಳ್ಳುತ್ತೇವೆ ಎಂದಿದ್ದಾರೆ.

ಕಳೆದ ವರ್ಷ ನವೆಂಬರ್ ನಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾತ್ರ ಠೇವಣಿ ಮಾಡಬೇಕು ಎಂದು ಆಡಳಿತ ಮಂಡಳಿ ತೀರ್ಮಾನಿಸಿತ್ತು ಎಂದು ಹೇಳಲಾಗಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಟಿಟಿಡಿಯಿಂದ ಬ್ಯಾಂಕ್ ಗಳಲ್ಲಿ ಠೇವಣಿ ಮಾಡಲಾದ ಮೊತ್ತ 12 ಸಾವಿರ ಕೋಟಿ ದಾಟಿತ್ತು. 2020-21ನೇ ಸಾಲಿಗೆ ಬ್ಯಾಂಕ್ ಠೇವಣಿಯಿಂದ 706 ಕೋಟಿ ಬಡ್ಡಿ ಬರಬಹುದು ಎಂಬ ಅಂದಾಜಿದೆ.
ಈ ತೀರ್ಥಕ್ಷೇತ್ರದ ಆಡಳಿತ ನೋಡಿಕೊಳ್ಳುವ ಮಂಡಳಿಯು 3,309 ಕೋಟಿ ರುಪಾಯಿ ಬಜೆಟ್ ಗೆ ಅನುಮೋದನೆ ನೀಡಿದೆ. ಠೇವಣಿ ಮೂಲಕ ಬರುವ ಆದಾಯವು ಎರಡನೇ ಅತಿ ದೊಡ್ಡ ಆದಾಯ ಆಗಿದೆ. ಮೊದಲನೆಯದು ಭಕ್ತರು ನೀಡುವ ದೇಣಿಗೆ ಹಣವಾಗಿದೆ (1313 ಕೋಟಿ ರುಪಾಯಿ).


Click it and Unblock the Notifications