ಬೆಂಗಳೂರು ಬಳಿಕ ತುಮಕೂರಿನ ಅಭಿವೃದ್ಧಿ ನಿಜಕ್ಕೂ ಕಣ್ಣು ಕುಕ್ಕುವಂತಿದೆ. ನಗರಾಭಿವೃದ್ಧಿ ಮತ್ತು ಸಂಪರ್ಕ ಸೌಲಭ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ ಸರ್ಕಾರ. ಇದೇ ನಿಟ್ಟಿನಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ತುಮಕೂರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಸೇರಿಸುವ, ಮುಂಬರುವ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಅಂದರೆ ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ತುಮಕೂರನ್ನು, ವಿಸ್ತರಣೆ ಮಾಡುವ ಮೂಲಕ, ಬೆಂಗಳೂರು ನಗರದ ಚೌಕಟ್ಟಿನೊಳಗೆ ಸಂಯೋಜಿಸುವ ಪ್ರಸ್ತಾನವನೆ ಹೊಂದಲಾಗಿದೆ.
ತುಮಕೂರು ನಗರ ಮೊದಲಿನಂತಿಲ್ಲ. ವರ್ಷದಿಂದ ವರ್ಷಕ್ಕೆ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ನಗರವಾಗಿದೆ. ಮತ್ತು 20,000 ಎಕರೆ ಕೈಗಾರಿಕಾ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ವಿಚಾರವನ್ನು ಎತ್ತಿ ತೋರಿಸಿದ ಗೃಹಸಚಿವರು, ಗ್ರೇಟರ್ ಬೆಂಗಳೂರಿನಲ್ಲಿ ಇದರ ಸೇರ್ಪಡೆಯ ಸಂಭಾವ್ಯ ಪ್ರಯೋಜನಗಳನ್ನು ಒತ್ತಿ ಹೇಳಿದರು.
ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಈ ಕ್ರಮವು ತುಮಕೂರಿನ ಅಭಿವೃದ್ಧಿಗೆ ಮತ್ತಷ್ಟು ಬಲ ಕೊಟ್ಟಂತಾಗಲಿದೆ, ಎಂದು ಗೃಹ ಸಚಿವರ ಅಭಿಪ್ರಾಯ. ಹೀಗಾಗಿಯೇ ಅವರು ಔಪಚಾರಿಕ ಪ್ರಸ್ತಾವನೆಯು ಕಾರ್ಯದಲ್ಲಿದೆ ಎಂದು ಹೇಳಿದ್ದಾರೆ.
ಈ ಎಲ್ಲದರ ಬೆಳವಣಿಗೆಗಳ ನಡುವೆ ಗೃಹಸಚಿವ ಡಾ. ಜಿ.ಪರಮೇಶ್ವರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಚರ್ಚೆ ನಡೆಸಿದ್ದಾರೆ. ಈ ಪ್ರದೇಶಕ್ಕೆ ಮೆಟ್ರೋ ಮತ್ತು ಉಪನಗರ ರೈಲು ವಿಸ್ತರಣೆ ಅಗತ್ಯವಿದೆ ಎಂಬುದನ್ನು ಕೇಂದ್ರೀಕರಿಸಿದ್ದಾರೆ. ಅಲ್ಲದೇ ತುಮಕೂರಿಗೆ ರಾಷ್ಟ್ರೀಯ ಹೆದ್ದಾರಿ ಕಮಾನು ಮತ್ತು ನಿರ್ಣಾಯಕ ನೀರಿನ ಯೋಜನೆಗಳು ಸೇರಿದಂತೆ, ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯ ಅನುಮತಿಗಳನ್ನು ಪಡೆಯುವ ಪ್ರಯತ್ನಗಳು ನಡೆಯುತ್ತಿವೆ.
ಮೂಲಸೌಕರ್ಯಗಳ ಹೂಡಿಕೆಯಲ್ಲಿ ಹೊಸ ದಿಕ್ಕು:
ತುಮಕೂರನ್ನು ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸೇರಿಸುವ ಸರ್ಕಾರದ ಉದ್ದೇಶ, ಕೇವಲ ಭೌಗೋಳಿಕ ವಿಸ್ತರಣೆ ಮಾತ್ರವಲ್ಲ, ಅದು ರಾಜಧಾನಿಯ ಸುತ್ತಲಿನ ಪ್ರದೇಶಗಳ ಸತತ ಅಭಿವೃದ್ಧಿಗೆ ಬಲ ನೀಡುವ ಪ್ರಾಮಾಣಿಕ ಪ್ರಯತ್ನವಾಗಿದೆ. ಈ ಕ್ರಮದಿಂದಾಗಿ ತುಮಕೂರಿಗೆ ತಂತ್ರಜ್ಞಾನ, ಉದ್ಯಮ, ಸಂಚಾರ ಮತ್ತು ಮೂಲಸೌಕರ್ಯಗಳ ಹೂಡಿಕೆಯಲ್ಲಿ ಹೊಸ ದಿಕ್ಕು ಸಿಗಲಿದೆ.
ಉದ್ಯಮಿಕ ನಗರ ಮಾದರಿ:
ಅತ್ಯಂತ ಪ್ರಮುಖವಾದ ಅಂಶವೆಂದರೆ, ಈ ವಿಸ್ತರಣೆಯು ಕೇವಲ ಪ್ರವಾಸಿ ಯೋಜನೆ ಅಲ್ಲ. ಇದು ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ, ಮೆಟ್ರೋ ಯೋಜನೆ, ಮಹತ್ವದ ನೀರಾವರಿ ಯೋಜನೆಗಳು, ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕಗಳನ್ನು ಮತ್ತಷ್ಟು ವೇಗವಂತವಾಗಿಸಲು ಪೂರಕವಾಗಲಿದೆ. ಈ ಸಂಚಲನದ ಹಿನ್ನಲೆಯಲ್ಲಿ, ತುಮಕೂರಿನ ಇತ್ತೀಚಿನ ಬೆಳವಣಿಗೆಯನ್ನು ಭವಿಷ್ಯದ "ಉದ್ಯಮಿಕ ನಗರ ಮಾದರಿ" ಯಂತೆ ರೂಪಿಸುವ ಕನಸು ಕಟ್ಟಲಾಗಿದೆ.
ಪಟ್ಟಣದ ನೀತಿ ನಿರ್ಮಾಣ:
ಈ ವಿಸ್ತರಣೆ ಪಟ್ಟಣದ ನೀತಿ ನಿರ್ಮಾಣ, ನಗರ ಯೋಜನೆ, ಪೌರಾಡಳಿತ, ಮತ್ತು ಮೂಲಸೌಕರ್ಯ ಸೇವೆಗಳ ಮೇಲಿನ ನೇರ ಪರಿಣಾಮವನ್ನುಂಟುಮಾಡುತ್ತದೆ. ಈ ಭಾಗದ ಜನತೆಗೆ ಮೇಲುಗೈಯಾಗುವಂತೆ ಹೆಚ್ಚು ಅನುದಾನ, ವ್ಯವಸ್ಥಿತ ನಿಗಮಿತ ಯೋಜನೆಗಳು, ಮತ್ತು ಬೃಹತ್ ಹೂಡಿಕೆಗಳು ಬರಬಹುದು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಕಾರದೊಂದಿಗೆ, ಈ ಯೋಜನೆಗಳು ಕೇವಲ ಕಾಗದದ ಮೇಲಲ್ಲ, ಕಾರ್ಯರೂಪಕ್ಕೆ ಬರುವ ಪ್ರಾರಂಭಿಕ ಹಂತದಲ್ಲಿವೆ. ಈ ಬೆಳವಣಿಗೆಗಳು ತುಮಕೂರಿಗೆ ಬರುವ ದಶಕಗಳಲ್ಲಿ ವೈಶಿಷ್ಟ್ಯಪೂರ್ಣ 'ಮೆಟ್ರೋಪೊಲಿಟನ್ ಕ್ಲಸ್ಟರ್' ಆಗಿ ರೂಪಾಂತರಗೊಳ್ಳುವ ಸ್ಥಿತಿಗೆ ನಾಂದಿಯಾಗಬಹುದು.
ಇದರ ಪರಿಣಾಮವಾಗಿ, ತುಮಕೂರಿನ ಜನತೆಗೆ ಗುಣಮಟ್ಟದ ನಗರ ಜೀವನ, ಉದ್ಯೋಗಾವಕಾಶ, ಸುಗಮ ಸಂಚಾರ, ಮತ್ತು ಉತ್ತಮ ಶಿಕ್ಷಣ-ಆರೋಗ್ಯ ಸೌಲಭ್ಯಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ. ನಗರ ಅಭಿವೃದ್ಧಿಯ ಈ ಹೊಸ ಅಧ್ಯಾಯವು ಕೇವಲ ತುಮಕೂರಿಗಲ್ಲ, ಸಂಪೂರ್ಣ ರಾಜ್ಯದ ಆರ್ಥಿಕತೆಯ ಬೆನ್ನುಹುರಿಯನ್ನೂ ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications