ಬಹುನಿರೀಕ್ಷಿತ ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪಾವಗಡವರೆಗೆ ತಲುಪಿದ್ದು, ಅಲ್ಲಿಂದ ಮುಂದಿನ ಭಾಗದಲ್ಲಿ ಕಾಮಗಾರಿ ಮಾತ್ರ ಇನ್ನೂ ಮಂದಗತಿಯಲ್ಲಿ ಸಾಗುತ್ತಿದೆ. ಪಾವಗಡ ಪಟ್ಟಣದಲ್ಲಿ 14 ವರ್ಷಗಳ ಹಳೆಯ ಕನಸು ನನಸಾದ ಸಂತಸ ಕಂಡುಬಂದಿದ್ದರೆ, ಕೊರಟಗೆರೆ, ಮಧುಗಿರಿ ಮತ್ತು ತುಮಕೂರು ಗ್ರಾಮಾಂತರ ಭಾಗದ ಜನರು ಇನ್ನೂ ನಿರೀಕ್ಷೆಯಲ್ಲೇ ಉಳಿದಿದ್ದಾರೆ. ಈ ರೈಲ್ವೆ ಯೋಜನೆ ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ಅಂತಾರಾಜ್ಯ ಯೋಜನೆಯಾಗಿದ್ದು, ಜನಜೀವನ ಹಾಗೂ ಆರ್ಥಿಕ ಅಭಿವೃದ್ಧಿಗೆ ಬಹಳ ಸಹಾಯಕವಾಗಲಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಮತ್ತು ಆಂಧ್ರಪ್ರದೇಶದ ಮಡಕಶಿರಾ ಮಾರ್ಗವಾಗಿ ಪಾವಗಡ, ಕಲ್ಯಾಣದುರ್ಗ ಹಾಗೂ ರಾಯದುರ್ಗಕ್ಕೆ ಸಂಪರ್ಕ ಕಲ್ಪಿಸುವ ಈ ರೈಲ್ವೆ ಯೋಜನೆಗೆ 2012ರಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಈ ಯೋಜನೆಗೆ ಸುಮಾರು 900 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿತ್ತು. 1395 ಎಕರೆ ಭೂಮಿಯನ್ನು ಒದಗಿಸಿ 2018ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಭೂಸ್ವಾಧೀನ ಸಮಸ್ಯೆ, ಆಡಳಿತಾತ್ಮಕ ವಿಳಂಬ ಮತ್ತು ನಿಧಾನಗತಿಯ ಕಾಮಗಾರಿಯಿಂದಾಗಿ ಯೋಜನೆ ಸಮಯಕ್ಕೆ ಮುಗಿಯಲಿಲ್ಲ.
ಆಂಧ್ರಪ್ರದೇಶದ ಭಾಗದಲ್ಲಿ ಈ ಯೋಜನೆಯ ಕೆಲಸವನ್ನು ಸರ್ಕಾರ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದೆ. ರಾಯದುರ್ಗದಿಂದ ಆಂಧ್ರ ಗಡಿಯವರೆಗೆ ಸುಮಾರು 103 ಕಿಲೋಮೀಟರ್ ರೈಲ್ವೆ ಮಾರ್ಗ ಈಗಾಗಲೇ ಸಿದ್ಧವಾಗಿದೆ. ಕರ್ನಾಟಕ ಗಡಿಯ ಕದಿರಿದೇವರಪಲ್ಲಿ ರೈಲ್ವೆ ನಿಲ್ದಾಣದಿಂದ ತಿರುಪತಿವರೆಗೆ ಈಗಾಗಲೇ ರೈಲು ಸಂಚಾರ ಆರಂಭವಾಗಿದ್ದು, ಆ ಭಾಗದ ಜನರಿಗೆ ಉತ್ತಮ ಪ್ರಯಾಣ ಸೌಲಭ್ಯ ಲಭ್ಯವಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕರ್ನಾಟಕ ಭಾಗದಲ್ಲಿ ಕಾಮಗಾರಿ ಮಾತ್ರ ಇನ್ನೂ ಆಮೆಗತಿಯಲ್ಲಿ ಸಾಗುತ್ತಿದೆ.
ಆಂಧ್ರ ಗಡಿಯಿಂದ ಪಾವಗಡ ಪಟ್ಟಣದವರೆಗೆ ಸುಮಾರು 27 ಕಿಲೋಮೀಟರ್ ರೈಲ್ವೆ ಮಾರ್ಗದ ಕಾಮಗಾರಿಯನ್ನು ಗುತ್ತಿಗೆದಾರ ಸಂಸ್ಥೆಗಳು ಪೂರ್ಣಗೊಳಿಸಿವೆ. ಕೆ.ರಾಮಪುರ ರೈಲ್ವೆ ನಿಲ್ದಾಣದಿಂದ ಪಾವಗಡ ರೈಲ್ವೆ ನಿಲ್ದಾಣದವರೆಗೆ ಹಳಿಗಳ ಅಳವಡಿಕೆ ಮುಗಿದಿದ್ದು, ರೈಲ್ವೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದೆ. ಇದರಿಂದ ಗಡಿಭಾಗದ ಜನರಲ್ಲಿ ಸ್ವಲ್ಪ ಮಟ್ಟಿನ ಸಂತಸ ಮತ್ತು ನಿರೀಕ್ಷೆ ಮೂಡಿದೆ.
ಆದರೆ ಮಧುಗಿರಿ, ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ಪ್ರದೇಶಗಳಲ್ಲಿ ರೈಲ್ವೆ ಕಾಮಗಾರಿ ಇನ್ನೂ ವೇಗ ಪಡೆದುಕೊಂಡಿಲ್ಲ. ಭೂಸ್ವಾಧೀನದ ನೆಪದಲ್ಲಿ ಕೆಲಸ ತಡವಾಗುತ್ತಿದ್ದು, ಇದರ ಪರಿಣಾಮವಾಗಿ ಯೋಜನೆಯ ಒಟ್ಟು ವೆಚ್ಚ ಈಗ 4 ಸಾವಿರ ಕೋಟಿ ರೂಪಾಯಿಗೂ ಮೀರಿದೆ. ವೆಚ್ಚ ಹೆಚ್ಚಾದರೂ ಯೋಜನೆ ಮಾತ್ರ ಇನ್ನೂ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪೂರ್ಣಗೊಂಡರೆ, ತುಮಕೂರು ಜಿಲ್ಲೆಯ ಕೈಗಾರಿಕೆ, ಕೃಷಿ ಉತ್ಪನ್ನಗಳ ಸಾಗಣೆ, ವ್ಯಾಪಾರ ಮತ್ತು ಉದ್ಯೋಗಾವಕಾಶಗಳಿಗೆ ಹೊಸ ದಾರಿ ತೆರೆಯಲಿದೆ. ಪಾವಗಡ, ಮಧುಗಿರಿ ಹಾಗೂ ಕೊರಟಗೆರೆ ಭಾಗದ ಜನರಿಗೆ ಬೆಂಗಳೂರು ಹಾಗೂ ಆಂಧ್ರಪ್ರದೇಶದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಸಿಗಲಿದೆ. ಆದ್ದರಿಂದ ಸರ್ಕಾರ ಮತ್ತು ರೈಲ್ವೆ ಇಲಾಖೆಗಳು ಈ ಯೋಜನೆಗೆ ಹೆಚ್ಚಿನ ಗಮನ ನೀಡಿ, ಬಾಕಿ ಉಳಿದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂಬುದು ಜನರ ಒತ್ತಾಯವಾಗಿದೆ.


Click it and Unblock the Notifications