ಜಾಗತಿಕವಾಗಿ ಉದ್ಯೋಗ ಕಡಿತವು ಮುಂದುವರಿದಿದೆ. ಹಲವಾರು ಸಂಸ್ಥೆಗಳು ಎರಡನೇ ಮೂರನೇ ಹಂತದ ಉದ್ಯೋಗ ಕಡಿತವನ್ನು ನಡೆಸುತ್ತಿದೆ. ಈ ನಡುವೆ ಪ್ರಮುಖ ಪ್ರಯಾಣ ಸೇವೆಯನ್ನು ನೀಡುವ ಸಂಸ್ಥೆಯಾದ ಉಬರ್ ಕೂಡಾ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಈ ಹಿಂದೆ ಹಲವಾರು ಸಂಸ್ಥೆಗಳು ನೀಡಿದ ಕಾರಣದಂತೆಯೇ ಈ ಸಂಸ್ಥೆಯು ವೆಚ್ಚ ಕಡಿತ ಮಾಡಲೆಂದು ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
ಬುಧವಾರ ಉಬರ್ ಸುಮಾರು 200 ಉದ್ಯೋಗಿಗಳನ್ನು ಉದ್ಯೋಗದಿಂದ ತೆಗೆದುಹಾಕುವ ಘೋಷಣೆ ಮಾಡಿದೆ. ಈ ವರ್ಷದಲ್ಲಿ ಕಾರ್ಯಾ ನಿರ್ವಹಣಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿಯೂ ಈ ನಿರ್ಧಾರ ಸಹಾಯಕವಾಗಲಿದೆ ಎಂದು ಉಬರ್ ಹೇಳಿಕೊಂಡಿದೆ. ಈ ಉದ್ಯೋಗ ಕಡಿತದಿಂದಾಗಿ ಉಬರ್ ಸಂಸ್ಥೆಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡ 1ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದಂತೆ ಆಗುತ್ತದೆ. ಉಬರ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆಯು ಜಾಗತಿಕವಾಗಿ 32,700 ಆಗಿದೆ.

ಇನ್ನು ಇದಕ್ಕೂ ಮುನ್ನ ಉಬರ್ ಸಂಸ್ಥೆಯು 150 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇನ್ನು ವಾಲ್‌ಸ್ಟ್ರೀಟ್ ವರದಿಯ ಪ್ರಕಾರ ಉಬರ್ ಇತ್ತೀಚೆಗೆ ಒಟ್ಟಾಗಿ ಶೇಕಡ 35ರಷ್ಟು ಉದ್ಯೋಗ ಕಡಿತವನ್ನು ಮಾಡುವ ನಿರ್ಧಾರ ಮಾಡಿದೆ. ವೆಚ್ಚ ಹಾಗೂ ಕಾರ್ಯಾತ್ಮಕ ಬದಲಾವಣೆ ಮಾಡುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಇಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ವರದಿಯು ಹೇಳುತ್ತದೆ.
ಕೊರೊನಾ ಸಾಂಕ್ರಾಮಿಕ ವೇಳೆ ಉದ್ಯೋಗ ಕಡಿತ
ಕೊರೊನಾ ಸಾಂಕ್ರಾಮಿಕವು ಜಾಗತಿಕವಾಗಿ ಹರಡಿದ ಸಂದರ್ಭದಲ್ಲಿ ಹಲವಾರು ದೇಶಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಈ ವೇಳೆ ಅತೀ ಅಧಿಕ ಆರ್ಥಿಕ ಪೆಟ್ಟು ಉಬರ್‌ನಂತಹ ಪ್ರಯಾಣ ಸೇವೆಯನ್ನು ನೀಡುವ ಸಂಸ್ಥೆಗೆ ಉಂಟಾಗಿದೆ. ಈ ಆರ್ಥಿಕ ನಷ್ಟ ಉಂಟಾದಾಗ ಉಬರ್ ಒಟ್ಟಾಗಿ ಸುಮಾರು ಶೇಕಡ 17ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಲಿಫ್ಟ್‌ನಲ್ಲಿ ಉದ್ಯೋಗ ಕಡಿತ
ಇನ್ನು ನಾವು ಉಬರ್‌ಗೆ ಸ್ಪರ್ಧೆ ನೀಡುವ ಸಂಸ್ಥೆಯಾದ ಲಿಫ್ಟ್‌ನಲ್ಲಿ ನಡೆದ ಉದ್ಯೋಗ ಕಡಿತಕ್ಕೆ ಹೋಲಿಕೆ ಮಾಡಿದಾಗ ಉಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗಿಲ್ಲ. ಸಿಇಒ ಡೇವಿಡ್ ರಿಷರ್ ನಾಯಕತ್ವದಲ್ಲಿ ಲಿಫ್ಟ್ ಸಂಸ್ಥೆಯು ಏಪ್ರಿಲ್‌ನಲ್ಲಿ ಭಾರೀ ಪ್ರಮಾಣದ ಉದ್ಯೋಗ ಕಡಿತವನ್ನು ಮಾಡಿದೆ. ಸುಮಾರು ಶೇಕಡ 26ರಷ್ಟು ಉದ್ಯೋಗಿಗಳಿಗೆ ಲಿಫ್ಟ್ ಸಂಸ್ಥೆಯು ಪಿಂಕ್ ಸ್ಲಿಪ್ ನೀಡಿದೆ.
ಅದಕ್ಕೂ ಮುನ್ನವೇ ಅಂದರೆ ಕಳೆದ ವರ್ಷದಲ್ಲಿ ಲಿಫ್ಟ್ ಸಂಸ್ಥೆಯು 700 ಮಂದಿಯನ್ನು ವಜಾಗೊಳಿಸಿದೆ. ಲಾಭದ ಮಾರ್ಜಿನ್ ಅನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಹಾಗೂ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಲಿಫ್ಟ್ ಲೇ ಆಫ್ ಅನ್ನು ಮಾಡಿದೆ.
ಇತರೆ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
ಉಬರ್, ಲಿಫ್ಟ್ ಮಾತ್ರವಲ್ಲದೆ ಇನ್ನೂ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಈ ಹಿಂದೆ ಓಲಾ ಸಂಸ್ಥೆಯಲ್ಲಿಯೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಈ ಉದ್ಯೋಗ ಕಡಿತ ನಡೆದಿದೆ. ಓಲಾ ಜನವರಿಯಲ್ಲಿ ಸುಮಾರು 130-200 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಓಲಾ ಸಂಸ್ಥೆಯಲ್ಲಿ ಸುಮಾರು 200 ಇಂಜಿನಿಯರ್‌ಗಳನ್ನು ವಜಾ ಘೋಷಣೆ ಮಾಡಲಾಗಿದೆ.
ಮಾಹಿತಿ ಪ್ರಕಾರ ಜನವರಿಯಲ್ಲಿ ನಡೆದ ಉದ್ಯೋಗ ಕಡಿತವು ಸೆಪ್ಟೆಂಬರ್‌ನಲ್ಲಿ ಘೋಷಣೆ ಮಾಡಲಾಗಿದ್ದ ಉದ್ಯೋಗ ಕಡಿತದ ಪ್ರಕ್ರಿಯೆಯಾಗಿದೆ. ಇನ್ನು ನಾವು ಓಲಾ ಸಂಸ್ಥೆಯಲ್ಲಿ ಉದ್ಯೋಗದ ವಿಚಾರಕ್ಕೆ ಬಂದರೆ ಅದು ಕೊರೊನಾ ಸಂದರ್ಭದಲ್ಲೇ ನಡೆದಿದೆ. ಕೊರೊನಾ ಉಂಟಾದಾಗ ಹಲವಾರು ಪ್ರಯಾಣ ಸೇವೆಯನ್ನು ನೀಡುವ ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದೆ. ಓಲಾದಲ್ಲಿ 2020ರಲ್ಲಿ 1,400 ಮಂದಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ.


Click it and Unblock the Notifications