ಲಂಡನ್, ಅ. 19: ಬ್ರಿಟನ್‌ನಲ್ಲಿ ಆರ್ಥಿಕ ಸಂಕಷ್ಟ ಕಡಿಮೆಯಾಗುವ ಯಾವ ಸುಳಿವೂ ಇಲ್ಲ. ಅಲ್ಲಿ ತಲೆನೋವು ತಂದಿರುವ ಹಣದುಬ್ಬರ ದರ ಮತ್ತೆ ಏರಿದೆ. ಶೇ. 9.9ರಲ್ಲಿದ್ದ ಸಿಪಿಐ (ಗ್ರಾಹಕ ಬೆಲೆ ಸೂಚ್ಯಂಕ) ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇ. 10.1ಕ್ಕೆ ಏರಿರುವುದು ಅಲ್ಲಿನ ಆಡಳಿತ ಮಾಹಿತಿ ನೀಡಿದೆ.
ಅಲ್ಲಿನ ಆರ್ಥಿಕ ತಜ್ಞರು ಹಣದುಬ್ಬರ ಶೇ. 10 ಮುಟ್ಟಬಹುದು ಎಂದು ನಿರೀಕ್ಷಿಸಿದ್ದರು. ಅದನ್ನು ಮೀರಿ ಹಣದುಬ್ಬರ ದರ ಹೆಚ್ಚಿದೆ. ಆಹಾರ ಬೆಲೆಗಳು ಹೆಚ್ಚಿರುವುದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ.
ಬ್ರಿಟನ್‌ನ ಸೆಂಟ್ರಲ್ ಬ್ಯಾಂಕ್ ಎನಿಸಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ಹಣದುಬ್ಬರ ಶೇ. 2ರಷ್ಟು ಇರಬೇಕೆಂದು ಗುರಿ ಇಟ್ಟಿತ್ತು. ಆ ಗುರಿಯಿಂದ ಹಣದುಬ್ಬರ ಬಹಳ ದೂರಕ್ಕೆ ಬೆಳೆದುಹೋಗಿದೆ. ಈಗ ಈ ಏರಿಕೆಗೆ ಕಡಿವಾಣ ಹಾಕುವುದೇ ದೊಡ್ಡ ಸವಾಲಿನ ಕೆಲಸ.

ಒಂದು ಕಡೆ ಹೊಸ ಪ್ರಧಾನಿ ಲಿಜ್ ಟ್ರುಸ್ ಮೇಲಿನ ಒತ್ತಡ ವಿಪರೀತ ಹೆಚ್ಚಾಗುತ್ತಿದೆ. ಅವರ ಪ್ರಧಾನಿ ಕುರ್ಚಿ ಅಲುಗಾಡುವುದು ಈಗ ಹೆಚ್ಚಾಗಲಿದೆ. ಇನ್ನೊಂದೆಡೆ, ಶೇ 2ರ ಹಣದುಬ್ಬರದ ಇರಾದೆಯಲ್ಲಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ಈಗ ಹತಾಶೆಯಲ್ಲಿ ಕಠಿಣ ಕ್ರಮ ಕೈಗೊಳ್ಳದೇ ಬೇರೆ ದಾರಿ ಇಲ್ಲ.
ಬಡ್ಡಿ ದರ ಹೆಚ್ಚುವ ಸಾಧ್ಯತೆ
ಅಮೆರಿಕದ ಫೆಡರಲ್ ಬ್ಯಾಂಕ್‌ನಂತೆ ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಬಡ್ಡಿ ದರಗಳನ್ನು ಹೆಚ್ಚಿಸುವುದು ಅನಿವಾರ್ಯ. ಸದ್ಯ ಅಲ್ಲಿ ಬಡ್ಡಿ ದರ ಶೇ. 2.25 ಇದೆ. ಈಗ 75 ಮೂಲಾಂಕಗಳಷ್ಟು ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇದೆ.
ಸೆಪ್ಟೆಂಬರ್‌ನಲ್ಲಿ ಹಣದುಬ್ಬರ ಶೇ. 10.1ಕ್ಕೆ ಹೋಗಿದೆ. ಬ್ರಿಟನ್‌ನ ಆರ್ಥಿಕ ತಜ್ಞ ಯೇಲ್ ಸೆಲ್ಫಿನ್ ಪ್ರಕಾರ ಈ ತಿಂಗಳು, ಅಂದರೆ ಅಕ್ಟೋಬರ್‌ನಲ್ಲಿ ಇನ್‌ಫ್ಲೇಷನ್ ದರ ಗರಿಷ್ಠ ಮಟ್ಟ ಮುಟ್ಟುವ ಸಾಧ್ಯತೆ ಇದೆ. ತೀವ್ರ ಮಟ್ಟದಲ್ಲಿ ಬಡ್ಡಿ ದರ ಏರಿಸುವುದು ಅನಿವಾರ್ಯವಾಗಬಹುದು. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಬಡ್ಡಿ ದರ ಶೇ. 4.5ಕ್ಕೆ ಏರಿಕೆಯಾಗಬಹುದು ಎಂದು ಸೆಲ್ಫಿನ್ ಹೇಳುತ್ತಾರೆ.

ಒತ್ತಡದಲ್ಲಿ ಪ್ರಧಾನಿ
ಬ್ರಿಟನ್‌ನಲ್ಲಿ ಈಗ ಜನರು ಮಾಡುತ್ತಿರುವ ವೆಚ್ಚ ಬಹಳ ತಗ್ಗಿಹೋಗಿದೆ. ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು ನಡೆಯುತ್ತಿಲ್ಲ. ಇದಕ್ಕೆ ಕಾರಣ ಆಹಾರ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ. ಆರ್ಥಿಕ ಸಂಕಷ್ಟದ ಕಾಲದಲ್ಲೇ ಪ್ರಧಾನಿ ಪಟ್ಟಕ್ಕೇರಿರುವ ಲಿಜ್ ಟ್ರುಸ್ ಕೈಗೊಂಡ ಹಲವು ಕ್ರಮಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ.
ಪ್ರಧಾನಿ ಬಹಳ ಉದಾರವಾಗಿ ತೆರಿಗೆ ಕಡಿತ, ವಿದ್ಯುತ್ ಬಿಲ್ ರಿಯಾಯಿತಿ ಇತ್ಯಾದಿ ಕೆಲ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದ್ದರು. ಆದರೆ, ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಅವರು ಯೂಟರ್ನ್ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು.
ಸೆಪ್ಟೆಂಬರ್ ತಿಂಗಳಲ್ಲಿ ಲಿಜ್ ಟ್ರುಸ್ ಬ್ರಿಟನ್‌ನ ಎಲ್ಲಾ ಮನೆಗಳಿಗೂ ಸರಬರಾಜಾಗುವ ವಿದ್ಯುತ್‌ಗೆ ನೀಡಲಾಗುವ ವಾರ್ಷಿಕ ಬಿಲ್ ಮೊತ್ತವನ್ನು 2500 ಪೌಂಡ್‌ಗೆ (2.32 ಲಕ್ಷ ರೂಪಾಯಿ) ಮಿತಿಗೊಳಿಸಲು ಕ್ರಮ ತೆಗೆದುಕೊಂಡಿದ್ದರು. ನಂತರ ಸರಕಾರದ ಮೇಲೆ ಹೊರೆ ಹೆಚ್ಚಾದ್ದರಿಂದ ವಿದ್ಯುತ್ ಬೆಂಬಲವನ್ನು ಆರು ತಿಂಗಳಿಗೆ ಇಳಿಸಲಾಯಿತು. ಇದೀಗ ಪ್ರತೀ ಮನೆಗೂ ಬರುವ ಮಾಸಿಕ ವಿದ್ಯುತ್ ಬಿಲ್ 100 ಪೌಂಡ್‌ನಷ್ಟು (ಸುಮಾರು 9300 ರೂಪಾಯಿ) ಹೆಚ್ಚುತ್ತದೆ. ಆಹಾರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬ್ರಿಟನ್‌ನ ಜನರು, ಅದರಲ್ಲೂ ಮಧ್ಯಮ ವರ್ಗದವರು ಈಗ ವಿದ್ಯುತ್ ಬೆಲೆ ಹೆಚ್ಚಳದಿಂದ ಚಿಂತಿತರಾಗಿದ್ದಾರೆ.
ಬ್ರಿಟನ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಆಹಾರ ವಸ್ತುಗಳ ಬೆಲೆ ಶೇ. 14.8ರಷ್ಟು ಏರಿದೆ ಕಳೆದ 40 ವರ್ಷದಲ್ಲಿ ಯಾವತ್ತೂ ಇಷ್ಟು ತೀಕ್ಷ್ಣವಾಗಿ ಅಲ್ಲಿ ಬೆಲೆ ಏರಿದ್ದಿಲ್ಲ ಎನ್ನಲಾಗುತ್ತದೆ. ಗೃಹೋಪಕರಣ, ಪೀಠೋಪಕರಣ ವಸ್ತುಗಳ ಬೆಲೆ ಕೂಡ ಗಮನಾರ್ಹ ಮಟ್ಟದಲ್ಲಿ ಹೆಚ್ಚಾಗಿದೆ. ಇನ್ನೊಂದೆಡೆ ಡಾಲರ್ ಎದುರು ಪೌಂಡ್ ಕುಸಿತ ಮುಂದುವರಿದೆ. ನಿನ್ನೆ ಪೌಂಡ್ ಮೌಲ್ಯ ಶೇ. 0.3ರಷ್ಟು ಇಳಿಕೆ ಆಗಿತ್ತು.


Click it and Unblock the Notifications