2020ನೇ ಇಸವಿಯಲ್ಲಿ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಚರ್ಚೆಗಳ ಬಂದಂಥ ವಿಷಯಗಳು, ವ್ಯಕ್ತಿಗಳು ಇದ್ದರೂ "ಥಟ್ ಅಂತ ಹೇಳಬೇಕು" ಕೆಲವು ವ್ಯಕ್ತಿಗಳು ಸುದ್ದಿ ಕೇಂದ್ರ ಬಿಂದುವಾಗಿರುವವರು. ಈ ಲೇಖನದಲ್ಲಿ ಭಾರತದಲ್ಲಿ ಅತಿ ಹೆಚ್ಚು ಚರ್ಚೆಗೆ ಕಾರಣರಾದ 5 ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ.
ಏಕೆಂದರೆ, ಪಟ್ಟಿಯಲ್ಲಿ ಇನ್ನೂ ಹೆಚ್ಚು ಜನರನ್ನು ಸೇರ್ಪಡೆ ಮಾಡಿಕೊಂಡರೆ ಅದರ ಗಾಂಭೀರ್ಯ ಕಳೆದುಹೋಗಬಹುದು ಮತ್ತು ಇವರು ನಿರ್ವಹಿಸಿದ ಪಾತ್ರದ ವ್ಯಾಪ್ತಿ ಗಮನಕ್ಕೆ ಬಾರದೆ ಹೋಗಬಿಡಬಹುದು ಎಂಬ ಎಂಬ ಆತಂಕದಿಂದಲೇ 5 ಹೆಸರನ್ನು ಮಾತ್ರ ಇಲ್ಲಿ ನೀಡಲಾಗುತ್ತಿದೆ.
ನಿರ್ಮಲಾ ಸೀತಾರಾಮನ್
ಸ್ವತಂತ್ರ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಹಣಕಾಸು ಖಾತೆ ನಿರ್ವಹಿಸಿದ ಮೊದಲ ಮಹಿಳಾ ಸಚಿವರು ನಿರ್ಮಲಾ ಸೀತಾರಾಮನ್. ಆರ್ಥಿಕ ಹಿಂಜರಿತದ ನೆರಳು ಬೀಳುತ್ತಿರುವ ಹೊತ್ತಿಗೆ ಕೊರೊನಾ ಬಿಕ್ಕಟ್ಟು ಎದುರಿಸಿತು ಭಾರತ. ಅದು ಇಡೀ ವಿಶ್ವದ ಆರ್ಥಿಕತೆಗೆ ವಕ್ಕರಿಸಿದ ಸಮಸ್ಯೆಯಾಗಿತ್ತು. ಅನಿವಾರ್ಯವಾಗಿ ಕೊರೊನಾ ಲಾಕ್ ಡೌನ್ ಘೋಷಣೆ ಮಾಡಬೇಕಾಯಿತು. ಗಾಯದ ಮೇಲೆ ಬರೆ ಎಂಬಂತೆ ಮೇಲಿಂದ ಮೇಲೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ 135 ಕೋಟಿ ಜನಸಂಖ್ಯೆಯ ಭಾರತದ ಜನಸಾಮಾನ್ಯರಿಂದ ವ್ಯಾಪಾರ- ಉದ್ಯಮ ಎಲ್ಲಕ್ಕೂ ಆರ್ಥಿಕ ಉತ್ತೇಜನ ಘೋಷಿಸುವಂಥ ಮಹತ್ತರ ಜವಾಬ್ದಾರಿ ನಿರ್ಮಲಾ ಪಾಲಿಗಿತ್ತು. ಈಗಲೂ ಅದು ಮುಂದುವರಿದಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಹಣದ ವೆಚ್ಚ, ಅಷ್ಟೇ ಪ್ರಮಾಣದಲ್ಲಿ ಆದಾಯ ಬರುವಂತೆ ನೋಡಿಕೊಳ್ಳುವುದು, ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಯದಂತೆ ನೋಡಿಕೊಳ್ಳುವುದು ಇಷ್ಟೆಲ್ಲ ಜವಾಬ್ದಾರಿ ಇದೆ. ಹಾಗೆ ನೋಡಿದರೆ ವರ್ಷವಿಡೀ ಹೆಡ್ಡಿಂಗ್ ಗಳಲ್ಲಿ ಒಳ್ಳೆ, ಕೆಟ್ಟ ವಿಷಯ ಮತ್ತು ಟೀಕೆಗಳಿಗಾಗಿ ಕಾಣಿಸಿಕೊಂಡವರು ನಿರ್ಮಲಾ ಸೀತಾರಾಮನ್. ಈಗಿನ ಆರ್ಥಿಕ ಚೇತರಿಕೆ ವೇಗವನ್ನು ಗಮನಿಸಿದರೆ ನಿರ್ಮಲಾ ಅವರು ಒಂದಿಷ್ಟು ಸಮಾಧಾನ ಪಡುವುದಕ್ಕೆ ಕಾರಣಗಳು ಇರುವಂತೆ ಗೋಚರಿಸುತ್ತಿದೆ.
ಶಕ್ತಿಕಾಂತ ದಾಸ್
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಈ ದೇಶದಲ್ಲಿ ಮಹಾನ್ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಇಂದು ಒಂದು ಕಡೆಗಾದರೆ, ಬ್ಯಾಂಕಿಂಗ್ ವ್ಯವಸ್ಥೆ ಪಾಲಿಗೆ ಚರಮಗೀತೆ ಆಗಬಹುದಾದ ಸ್ಥಿತಿ ತಂದಿಟ್ಟ ಅಪಕೀರ್ತಿಯೂ ಅವರಿಗೇ ಅಂಟಿಕೊಳ್ಳುವ ಸಾಧ್ಯತೆ ಇದೆ. ಗೃಹ ಸಾಲ, ಪರ್ಸನಲ್ ಲೋನ್ ಸೇರಿದಂತೆ ಮತ್ತಿತರ ಸಾಲದ ಮೇಲಿನ ಬಡ್ಡಿ ದರ ಕನಿಷ್ಠ ಮಟ್ಟದಲ್ಲಿವೆ. ಆರ್ಥಿಕತೆಗೆ ಉತ್ತೇಜನ ನೀಡಬೇಕು ಎಂಬ ಕಾರಣಕ್ಕೆ ನಿರಂತರವಾಗಿ ರೆಪೋ ಹಾಗೂ ರಿವರ್ಸ್ ರೆಪೋ ದರವನ್ನು ಇಳಿಕೆ ಮಾಡುತ್ತಾ ಬಂದಿದ್ದರಿಂದ ಬಡ್ಡಿ ದರಗಳು ಕನಿಷ್ಠ ಮಟ್ಟದಲ್ಲಿವೆ. ಈ ನಿರ್ಧಾರವು ಆರ್ ಬಿಐ ಸಮಿತಿ ಸದಸ್ಯರೆಲ್ಲರನ್ನೂ ಒಳಗೊಂಡಂತೆ ತೆಗೆದುಕೊಂಡಿದ್ದಾದರೂ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅಧಿಕಾರಾವಧಿಯಲ್ಲಿ ನಡೆದ ಬೆಳವಣಿಗೆ ಇದಾಗಿದೆ. ಇನ್ನು ಸಾಲದ ಮೇಲಿನ ವಿನಾಯಿತಿ (ಮೊರಟೋರಿಯಂ) ಘೋಷಿಸಿದ ಮೈಲುಗಲ್ಲಿನಂಥ ನಿರ್ಧಾರ ಬಂದಿದ್ದು ಇದೇ ಅವಧಿಯಲ್ಲಿ. ಸಂಕಷ್ಟದ ಕಾಲ ಎಂದು ಆರು ತಿಂಗಳು ಸಾಲದ ಇಎಂಐಗೆ ವಿನಾಯಿತಿ ನೀಡಿ, ಅದಕ್ಕೆ ಬಡ್ಡಿ ಮೇಲೆ ಬಡ್ಡಿ ಹಾಕುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಮೇಲೆ ಸಾವಿರಾರು ಕೋಟಿ ರುಪಾಯಿಯನ್ನು ಹಿಂತಿರುಗಿಸಬೇಕಾಯಿತು. ಇನ್ನು ಬಡ್ಡಿಯೇ ಮನ್ನಾ ಆಗಬೇಕು ಎಂಬ ಒತ್ತಾಯವೂ ಇದೆ. ಅದೂ ಆಗಿಬಿಟ್ಟರೆ ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿತಿಯನ್ನು ಚಿಂತಾಜನಕ ಮಾಡುತ್ತದೆ.
ಮುಕೇಶ್ ಅಂಬಾನಿ
ಈ ವರ್ಷ ಅತಿ ಹೆಚ್ಚು ಸುದ್ದಿ ಮಾಧ್ಯಮಗಳಲ್ಲಿ ಸುಳಿದಾಡಿದ ಹೆಸರು ರಿಲಯನ್ಸ್ ಮತ್ತು ಅದರ ಅಧ್ಯಕ್ಷ ಮುಕೇಶ್ ಅಂಬಾನಿ. ನೀವು ಈ ಸುದ್ದಿ ಓದುತ್ತಿರುವ ಹೊತ್ತಿಗೆ ಮುಕೇಶ್ ಅಂಬಾನಿ ಅಜ್ಜ ಆಗಿದ್ದಾರೆ. ಅವರ ಹಿರಿಯ ಮಗ ಆಕಾಶ್ ಗೆ ಗಂಡು ಮಗು ಆಗಿದೆ ಎಂಬ ಸುದ್ದಿ ಬಂದಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಗಳಾದ ಜಿಯೋ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಗಳಿಗೆ ಜಾಗತಿಕ ಮಟ್ಟದ ಕಂಪೆನಿಗಳಿಂದ ಬಂಡವಾಳ ಹರಿದುಬಂದಿದೆ. ಈ ಕಾರಣಕ್ಕೆ ರಿಲಯನ್ಸ್ ಕಂಪೆನಿಯ ಷೇರು 875 ರುಪಾಯಿ ತಲುಪಿದು, ಆ ನಂತರ 2000 ರುಪಾಯಿ ಗಡಿ ದಾಟಿತು. ಈ ಪ್ರಯಾಣದಲ್ಲಿ ಮುಕೇಶ್ ಅಂಬಾನಿ ಆಸ್ತಿ ಆಹಾ- ಓಹೋ ಎಂಬಂತೆ ಜಾಸ್ತಿ ಆಯಿತು. ವಿಶ್ವದ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಅವರು ಕಾಣಿಸಿಕೊಂಡರು. ಇನ್ನು ರಿಲಯನ್ಸ್ ಕಂಪೆನಿ ಶೂನ್ಯ ಸಾಲದ ಕಂಪೆನಿ ಎನಿಸಿಕೊಂಡಿತು. ರಿಲಯನ್ಸ್ ಷೇರುಗಳ ರೈಟ್ಸ್ ಇಶ್ಯೂ ಮಾಡಲಾಯಿತು. ಒಟ್ಟಿನಲ್ಲಿ ಮುಕೇಶ್ ಭಾಯ್ ಸುದ್ದಿಯೋ ಸುದ್ದಿ.
ಗಜೇಂದ್ರ ಶರ್ಮಾ
ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಜನ ಸಾಮಾನ್ಯ ಈತ. ಆದರೆ ಇವರು ಆರಂಭಿಸಿದ ಒಂದು ಕಿಡಿ, ಈಗ ಭಾರತದ ಬ್ಯಾಂಕಿಂಗ್ ವಲಯಕ್ಕೆ ಕಾಳ್ಗಿಚ್ಚಿನಂತೆ ಆಗಿದೆ. ಕೊರೊನಾ ಬಿಕ್ಕಟ್ಟು ಎಂಬ ಕಾರಣಕ್ಕೆ ಸಾಲದ ಮೇಲೆ ಇಎಂಐ ವಿನಾಯಿತಿ ಘೋಷಣೆ ಮಾಡಿ, ಅದರ ಮೇಲೆ ಬಡ್ಡಿ ಹಾಕಿದರೆ ಇದೆಂಥ ಸಂಕಷ್ಟ ನಿವಾರಣೆ ಮಾರ್ಗ ಎಂದು ಮೊದಲಿಗೆ ಕೋರ್ಟ್ ಮೆಟ್ಟಿಲೇರಿದರು ಅಗ್ರಾದಲ್ಲಿ ಕನ್ನಡಕದ ಅಂಗಡಿ ನಡೆಸುವ ಗಜೇಂದ್ರ ಶರ್ಮಾ. ಒಬ್ಬ ವ್ಯಕ್ತಿಯಿಂದ ಏನು ಮಾಡುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿಕೊಳ್ಳುವವರಿಗೆ ಶರ್ಮಾ ಮಾದರಿ ಯಾವತ್ತಿಗೂ ನಿದರ್ಶನ ಆಗಬಹುದು. ಏಕೆಂದರೆ, ಅದಾದ ನಂತರ ಸಾಲು ಸಾಲು ಅರ್ಜಿಗಳು ಕೋರ್ಟ್ ನಲ್ಲಿ ಗುಜರಾಯಿಸಲಾಯಿತು. ಸದ್ಯಕ್ಕೆ ಬಡ್ಡಿಯ ಮೇಲಿನ ಬಡ್ಡಿ ಮನ್ನಾಗೆ ಸಂಬಂಧಿಸಿದಂತೆ ತೀರ್ಮಾನಕ್ಕೆ ಬರಲಾಗಿದೆ. ಆದರೆ ಬಡ್ಡಿಯನ್ನೇ ಮನ್ನಾ ಮಾಡಬೇಕು ಎಂಬ ಅರ್ಜಿ ವಿಚಾರಣೆ ನಡೆಯುತ್ತಿದೆ. ಅದೊಂದು ವೇಳೆ ಆಗಿಬಿಟ್ಟರೆ ಭಾರತದ ಆರ್ಥಿಕತೆಯೇ ಬುಡಮೇಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಮಾನ ಏನಾಗಬಹುದೋ ಗೊತ್ತಿಲ್ಲ. ಗಜೇಂದ್ರ ಶರ್ಮಾ ಮಾತ್ರ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.
ವಿಜಯ್ ಮಲ್ಯ
ದೇಶ ಬಿಟ್ಟು ಪರಾರಿ ಆಗುವ ಆರ್ಥಿಕ ಅಪರಾಧಿಗಳು ಇನ್ನು ಮುಂದೆ ಅದೆಷ್ಟೇ ಜನರು ಆಗಬಹುದು. ಆ ಬಗ್ಗೆ ಸುದ್ದಿ ಮಾಡುವಾಗೆಲ್ಲ ಖಂಡಿತಾ ಪ್ರಸ್ತಾವ ಆಗಲಿದೆ ವಿಜಯ್ ಮಲ್ಯ ಹೆಸರು. ಆತ ಈಗ ಯುನೈಟೆಡ್ ಕಿಂಗ್ ಡಮ್ ನಲ್ಲಿ ಇದ್ದು, ಭಾರತಕ್ಕೆ ಬಾರದಿರುವಂತೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತದ ತನಿಖಾ ಸಂಸ್ಥೆಗಳು ಸಹ ಪಟ್ಟು ಬಿಡದೆ ಪ್ರಯತ್ನಿಸುತ್ತಲೇ ಇವೆ. ಭಾರತದಲ್ಲಿ ಸಾಲ ಮಾಡಿ, ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯರನ್ನು ಯು.ಕೆ.ಯಿಂದ ಕರೆತಂದು, ಜೈಲಿಗೆ ಕಳುಹಿಸಬೇಕು ಎಂಬುದು ಗುರಿಯಾಗಿದೆ. ಸಾಲದ ಅಸಲು ಮೊತ್ತ ಪೂರ್ತಿ ಕೊಡ್ತೀನಿ, ದೇಶ ಸಹ ಕಷ್ಟದಲ್ಲಿದೆ- ದಯವಿಟ್ಟು ನಾನು ನೀಡಬೇಕಾದ ಸಾಲದ ಮೊತ್ತ ತಗೊಳ್ಳಿ... ಹೀಗೆ ಸಾಕಷ್ಟು ಸಲ ಮಲ್ಯ ಕೇಳಿಕೊಂಡಿದ್ದಾಗಿದೆ. ಆದರೂ ಸರ್ಕಾರ, ಬ್ಯಾಂಕ್ ಗಳು ಕರಗಿಲ್ಲ. ಭಾರತಕ್ಕೆ ಹಸ್ತಾಂತರ ಆಗುವುದರಿಂದ ತಪ್ಪಿಸಿಕೊಳ್ಳುವುದಕ್ಕೆ ಅಲ್ಲಿನ ಕೋರ್ಟ್ ಗಳಿಗೆ ಹಾಕಿಕೊಂಡ ಅರ್ಜಿಗಳೆಲ್ಲವೂ ತಿರಸ್ಕೃತವಾಗಿವೆ. ಹೀಗೆ ಮಲ್ಯ ವಿಚಾರ ಏನೇ ಬಂದರೂ ಸುದ್ದಿ. ಜತೆಗೆ ಮಲ್ಯ ರೀತಿಯಲ್ಲಿ ಯಾರೇ ವಂಚನೆ ಆರೋಪ ಹೊತ್ತುಕೊಂಡರೂ ವಿಜಯ್ ಮಲ್ಯರದೇ ಸುದ್ದಿ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications