ಸರ್ಕಾರಿ ಯೋಜನೆ ಮತ್ತು ಕಾರ್ಯಕ್ರಮಗಳಿಗಾಗಿ ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳಲ್ಲಿ ನೀಡಲಾಗುವ ಜಾಹೀರಾತುಗಳಿಗೆ ಹೊಸ ದರಗಳನ್ನು ಅನುಮೋದಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ಸೋಮವಾರ ತಿಳಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿದ ದರ ರಚನಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಹೊಸ ದರ ಅನುಮೋದಿಸಲಾಗಿದೆ.
ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳಿಗೆ ನ್ಯಾಯಯುತ ಬೆಲೆ ಚೌಕಟ್ಟನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯ ನಡೆಸುತ್ತಿರುವ ಪ್ರಯತ್ನಗಳಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ಪ್ರಕಟಣೆ ತಿಳಿಸಿದೆ. ಕೇಂದ್ರ ಸರ್ಕಾರವು ಯಾವುದೇ ಕಾರ್ಯಕ್ರಮದ ಜಾಹೀರಾತುಗಳನ್ನು ಪತ್ರಿಕೆಗಳು, ಟಿವಿಗಳು ಸೇರಿದಂತೆ ರೆಡಿಯೋಗಳಿಗೂ ನೀಡುತ್ತದೆ.

ದೇಶದಲ್ಲಿ ಹಲವಾರು ಭಾರತೀಯ ಭಾಷೆಗಳಲ್ಲಿ ಮತ್ತು ದೇಶದ ಹೆಚ್ಚಿನ ರಾಜ್ಯಗಳಲ್ಲಿ 380 ಕ್ಕೂ ಹೆಚ್ಚು ಖಾಸಗಿ ಎಫ್‌ಎಂ ಚಾನೆಲ್‌ಗಳಿದ್ದು, ಸ್ಥಳೀಯವಾಗಿ ಜನಪ್ರಿಯತೆ ಹೆಚ್ಚುತ್ತಿದೆ. ಆದ್ದರಿಂದಾಗಿ ಕೇಂದ್ರ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಇದು ಒಂದು ಪ್ರಮುಖ ವೇದಿಕೆಯಾಗಿದೆ.
ದರ ಎಷ್ಟು ಪರಿಷ್ಕರಣೆ ತಿಳಿಯಿರಿ
ಡಿಸೆಂಬರ್ 2015 ರಿಂದ ಮಾರ್ಚ್ 2023 ರ ಅವಧಿಯಲ್ಲಿ ಏರುತ್ತಿರುವ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಂಡು ಈಗ ಮೂಲ ದರದಲ್ಲಿ ಶೇಕಡ 43 ರಷ್ಟು ಹೆಚ್ಚಳವನ್ನು ಮಾಡಲಾಗಿದೆ. ಸೆಪ್ಟೆಂಬರ್ 2023 ರಲ್ಲಿ ಸಚಿವಾಲಯವು ಅನುಮೋದಿಸಿದ ಹೊಸ ದರವು ಎಫ್‌ಎಂಗೆ ಸರ್ಕಾರಿ ಜಾಹೀರಾತಿನಿಂದ ಕೊಂಚ ಅಧಿಕ ಆದಾಯ ನೀಡಲಿದೆ. ರೇಡಿಯೋ ಜಾಹೀರಾತುಗಳು ಪ್ರತಿ ಹತ್ತು ಸೆಕೆಂಡುಗಳಿಗೆ 52 ರೂಪಾಯಿಯಿಂದ 74 ರೂಪಾಯಿಗೆ ಏರಿಕೆ ಮಾಡಲಾಗಿದೆ.
7 ವರ್ಷಗಳ ಬಳಿಕ ದರ ಪರಿಷ್ಕರಣೆ!
ಸಚಿವಾಲಯವು ಸುಮಾರು 7 ವರ್ಷಗಳ ನಂತರ ಖಾಸಗಿ ಎಫ್‌ಎಂ ರೆಡಿಯೋಗಳ ಜಾಹೀರಾತು ದರಗಳನ್ನು ಪರಿಷ್ಕರಣೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. "ಈ ಹೊಂದಾಣಿಕೆಯು ಪ್ರಸ್ತುತ ಮಾರುಕಟ್ಟೆ ದರಗಳೊಂದಿಗೆ ಸಮಾನತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಲಾಗಿದೆ. ಒಟ್ಟು ಮೂಲ ದರದ ಹೆಚ್ಚಳವು ಪ್ರಸ್ತುತ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 400 ಕ್ಕೂ ಹೆಚ್ಚು ಸಮುದಾಯ ರೇಡಿಯೊ ಕೇಂದ್ರಗಳಿಗೆ ಪ್ರಯೋಜನಕಾರಿಯಾಗಿದೆ," ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇದಲ್ಲದೆ, ನಗರವಾರು ದರಗಳನ್ನು ಲೆಕ್ಕಾಚಾರ ಮಾಡಲು ಅಸ್ತಿತ್ವದಲ್ಲಿರುವ ಬೆಲೆ ಸೂತ್ರವನ್ನು ಮುಂದುವರಿಸಲು ಸಚಿವಾಲಯ ನಿರ್ಧರಿಸಿದೆ. 2019 ರ ಇಂಡಿಯಾ ರೀಡರ್‌ಶಿಪ್ ಸಮೀಕ್ಷೆಯಿಂದ (IRS) ನಗರದ ಜನಸಂಖ್ಯೆ ಮತ್ತು ಕೇಳುಗರ ಡೇಟಾದಂತಹ ವಿವಿಧ ಅಂಶಗಳನ್ನು ಬೆಲೆ ಸೂತ್ರವು ತೆಗೆದುಕೊಳ್ಳುತ್ತದೆ.
ಈ ಸೂತ್ರದ ಆಧಾರದ ಮೇಲೆ ಕೇಳುಗರ ಡೇಟಾ ಲಭ್ಯವಿರುವ ಕೇಂದ್ರಗಳನ್ನು ನೋಡಿದಾಗ 106 ಸ್ಟೇಷನ್‌ಗಳ ದರಗಳು ಶೇಕಡ 100 ರಷ್ಟು ಹೆಚ್ಚಾಗುತ್ತವೆ. 81 ಸ್ಟೇಷನ್‌ಗಳ ದರವು ಶೇಕಡ 50 ರಿಂದ ಶೇಕಡ 100 ರಷ್ಟು ಅಧಿಕವಾಗುತ್ತದೆ. ಇನ್ನು 65 ಕೇಂದ್ರಗಳಿಗೆ ಶೇಕಡ 50 ಕ್ಕಿಂತ ಕಡಿಮೆ ದರ ಹೆಚ್ಚಳವಾಗುತ್ತದೆ.
ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳ ದರ ರಚನೆ ಸಮಿತಿಯನ್ನು ಕಳೆದ ವರ್ಷ 2015 ರಲ್ಲಿ ಪರಿಷ್ಕರಿಸಲಾದ ಹೊಸ ದರಗಳನ್ನು ಮೌಲ್ಯಮಾಪನ ಮಾಡಲು ಮತ್ತು ಶಿಫಾರಸು ಮಾಡಲು ಸಚಿವಾಲಯವು ಸ್ಥಾಪಿಸಿದೆ. ಅಸೋಸಿಯೇಶನ್ ಆಫ್ ರೇಡಿಯೋ ಆಪರೇಟರ್ಸ್ ಆಫ್ ಇಂಡಿಯಾದಂತಹ ಸಂಸ್ಥೆಗಳಿಂದ ಮಾಹಿತಿ ತೆಗೆದುಕೊಳ್ಳುವುದರ ಜೊತೆಗೆ ಉದ್ಯಮ ತಜ್ಞರು ಮತ್ತು ಮಧ್ಯಸ್ಥಗಾರರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ ನಂತರ ಸಮಿತಿಯು ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.


Click it and Unblock the Notifications