ಕೇಂದ್ರ ಸರಕಾರ ಪ್ರೊಡಕ್ಷನ್ ಲಿಂಕ್ಡ್ ಇನ್ಸೆನ್ಟಿವ್ (PLI )ಯೋಜನೆಯನ್ನ ಏರ್ ಕಂಡಿಷನರ್ ಉತ್ಪಾದಿಸುವ ಕಂಪನಿಗಳಿಗೆ ಘೋಷಣೆ ಮಾಡಿದೆ. ಇದೆ ತಿಂಗಳು ಅಂದರೆ ಸೆಪ್ಟೆಂಬರ್ 15 ರ ವರೆಗೆ ಇಲ್ಲಿಗೆ ಅರ್ಜಿಯನ್ನ ಹಾಕಲು ಸಮಯಾವಕಾಶವಿದೆ. ಈಗಾಗಲೇ ವೋಲ್ಟಾಸ್ , ಬ್ಲೂ ಸ್ಟಾರ್ , ಡಿಕ್ಸ್ಆನ್ ಚೈನೀಸ್ ಜಿ ಎಂ ಸಿ ಸಿ , ಅಂಬರ್ , ಪ್ಯಾನಸೋನಿಕ್ , ಲಾಯ್ಡ್ , ಹಿಂಡಾಲ್ಕೋ ಸಂಸ್ಥೆಗಳು ಇದಕ್ಕೆ ಅರ್ಜಿಯನ್ನ ಹಾಕಿವೆ.
ಇದರಿಂದ ತಕ್ಷಣ ಈ ಕ್ಷೇತ್ರದಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಹೊಸ ಬಂಡವಾಳ ಹರಿದು ಬರಲಿದೆ. ಮೊಬೈಲ್ ಫೋನ್ ಗಳಲ್ಲಿ ಪೂರ್ಣ ಉತ್ಪಾದಿತ ಕಂಪೋನೆಂಟ್ ಗಳ ಮೇಲೆ ಈ ರೀತಿಯ ಇನ್ಸೆನ್ಟಿವ್ ನೀಡಲಾಗಿತ್ತು. ಆದರೆ ಈಗ ಉತ್ಪಾದನೆಗೆ ಬೇಕಾಗುವ ಪದಾರ್ಥಗಳ ಮೇಲೆ ಈ ರೀತಿಯ ಇನ್ಸೆನ್ಟಿವ್ ನೀಡಲಾಗುತ್ತಿದೆ. ಅಂಬರ್ ಎಂಟರ್ಪ್ರೈಸಸ್ 400 ಕೋಟಿ , ಬ್ಲೂ ಸ್ಟಾರ್ 250 ಕೋಟಿ ರೂಪಾಯಿ ಹೂಡಿಕೆಯನ್ನ ಈಗಾಗಲೇ ಘೋಷಿಸಿವೆ. ಉಳಿದ ಸಂಸ್ಥೆಗಳು ಕೂಡ ಶೀಘ್ರದಲ್ಲಿ ಹೂಡಿಕೆಯನ್ನ ಮಾಡಲಿವೆ. ಹೀಗೆ ನಮ್ಮ ಮನೆಯಲ್ಲಿ ತಣ್ಣನೆಯ ಗಾಳಿಯನ್ನ ಪಸರಿಸಲು ಮೊದಲ ಹಂತದಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಮುಂದಿನ ಐದು ವರ್ಷದಲ್ಲಿ 40 ಮಿಲಿಯನ್ ಅಂದರೆ ಬರೋಬ್ಬರಿ 4 ಕೋಟಿ ಏರ್ ಕಂಡಿಷನರ್‌ಗಳು ಉತ್ಪಾದನೆಯಾಗಲಿದೆ. ಹೀಗೆ ಉತ್ಪಾದನೆಯಾದ 4 ಕೋಟಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಎಸಿ ಗಳು ವಿದೇಶಗಳಿಗೆ ರಪ್ತಾಗಲಿವೆ. ನಿಮಗೆಲ್ಲ ಒಂದು ಮಾಹಿತಿ ತಿಳಿದಿರಲಿ , ಇಲ್ಲಿಯವರೆಗೆ ಭಾರತದಲ್ಲಿ ತಯಾರಾದ ಎಸಿ ಗಳಲ್ಲಿನ 75 ರಿಂದ 80 ಪ್ರತಿಶತ ಬಿಡಿ ಭಾಗಗಳು ವಿದೇಶದಿಂದ ಆಮದು ಮಾಡಿಕೊಂಡವಾಗಿವೆ. ಈ ನಿಟ್ಟಿನಲ್ಲಿ ನೋಡಿದಾಗ ಈ ಬದಲಾವಣೆ ಭಾರತದ ಮಟ್ಟಿಗೆ ಒಳಿತು. ಇಲ್ಲಿಯವರೆಗೆ ಭಾರತದಲ್ಲಿ ಮಾರಾಟವಾದ ಎಸಿ ಗಳಲ್ಲಿ 95 ಪ್ರತಿಶತ ಭಾರತದಲ್ಲಿ ಉತ್ಪಾದನೆ ಮಾಡಲಾಗಿದೆ. ಆದರೆ ಉತ್ಪಾದನೆಗೆ ಬೇಕಾಗುವ ಕೆಲವು ಪದಾರ್ಥಗಳನ್ನ ವಿದೇಶದಿಂದ ತರಿಸಿಕೊಳ್ಳುತ್ತಿದ್ದೆವು.
ಚೀನಾ ದೇಶದ ಜಿ ಎಂ ಸಿ ಸಿ ಸಂಸ್ಥೆಯು ಕೂಡ ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದೆ. ಮಹಾರಾಷ್ಟ್ರದ ಪುಣೆಯ ಸಮೀಪ 700 ಕೋಟಿ ರೂಪಾಯಿ ಬಂಡವಾಳ ಹೂಡಿ ಹೊಸ ಕಾರ್ಖಾನೆಯನ್ನ ತೆರೆಯುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇರಲಿದೆ. ಎಸಿ ಗಳನ್ನ ತಯಾರಿಸಲು ಸರಕಾರದ ಈ ಯೋಜನೆ ಚನ್ನಾಗಿದೆ , ಆದರೆ ಇದರಲ್ಲೂ ವಿದೇಶಿ ಸಂಸ್ಥೆಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಿರುವುದು ಏಕೆ ? ಎನ್ನುವುದು ಮಾತ್ರ ಪ್ರಶ್ನೆಯಾಗಿ ಉಳಿದುಕೊಂಡಿದೆ.
ಇದೆಲ್ಲಾ ಏನೇ ಇರಲಿ ಮುಂಬರುವ ವರ್ಷಗಳಲ್ಲಿ ಹೊಸ ತಂತ್ರಜ್ಞಾನದ ಹೊಸ ರೀತಿಯ ಎಸಿ ಗಳು ನಮ್ಮ ಮನೆಯಲ್ಲಿ ತಂಗಾಳಿಯನ್ನ ಹರಿಸಲಿವೆ , ಹೆಚ್ಚು ವಿದ್ಯುತ್ ಬಿಲ್ಲನ್ನ ನಮಗೆ ನೀಡದೆ ಅವುಗಳು ಬಹಳ ದಕ್ಷವಾಗಿ ಕಾರ್ಯ ನಿರ್ವಹಿಸಲಿವೆ.


Click it and Unblock the Notifications