ನವದೆಹಲಿ, ನ. 15: ವಿಶ್ವದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ಇದೀಗ ಎರಡು ಬಾರಿ ಭಾರತೀಯ ಸ್ಪರ್ಧಾ ಆಯೋಗದಿಂದ ಚಾಟಿ ತಿಂದ ಬಳಿಕ ಎಚ್ಚೆತ್ತುಕೊಂಡಂತಿದೆ. ಆಂಡ್ರಾಯ್ಡ್ ಆ್ಯಪ್‌ಗಳ ಮಾರುಕಟ್ಟೆ ಸ್ಥಳವಾದ ಗೂಗಲ್ ಪ್ಲೇನಲ್ಲಿ ಸಬ್‌ಸ್ಕ್ರಿಪ್ಷನ್ ಆಧಾರಿತ ಆ್ಯಪ್‌ಗಳಿಗೆ ಪೇಮೆಂಟ್ ಆಯ್ಕೆಯಾಗಿ ಯುಪಿಐ ಆಟೊಪೇ ಫೀಚರ್ ಅನ್ನು ಗೂಗಲ್ ಅಳವಡಿಸಿದೆ.
ಗೂಗಲ್ ಪ್ಲೇನಲ್ಲಿ ಆ್ಯಪ್ ಡೆವಲಪರ್‌ಗಳಿಗೆ ಪೇಮೆಂಟ್ ಪಾವತಿಗೆ ತಮ್ಮ ಆಯ್ಕೆಯ ಪೇಮೆಂಟ್ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಗ್ರಾಹಕರಿಗೆ ಅವಕಾಶ ಇಲ್ಲ ಎಂಬುದು ಸೇರಿದಂತೆ ಹಲವು ಆರೋಪಗಳು ಇದ್ದವು. ಈ ಸಂಬಂಧ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಇತ್ತೀಚೆಗೆ ಗೂಗಲ್ ಸಂಸ್ಥೆಗೆ ದಂಡ 936 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಡೆವಲಪರ್‌ಗಳು ಥರ್ಡ್ ಪಾರ್ಟಿ ಪೇಮೆಂಟ್ ಆ್ಯಪ್‌ಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ಗೂಗಲ್ ಸಂಸ್ಥೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಯುಪಿಐ ಅಟೊಪೇ ಫೀಚರ್ ಅನ್ನು ಸೇರಿಸಿದೆ.
ಏನಿದು ಆಟೊ ಪೇ?
ನೀವು ಗೂಗಲ್‌ನ ಪ್ಲೇ ಸ್ಟೋರ್‌ಗೆ ಹೋದರೆ ಅಲ್ಲಿ 27 ಲಕ್ಷ ಆ್ಯಪ್‌ಗಳು ಇವೆ. ಬಹುತೇಕ ಆ್ಯಪ್‌ಗಳು ಉಚಿತವಾಗಿ ಸಿಗುತ್ತವೆ. ಇನ್ನೂ ಹಲವು ಆ್ಯಪ್‌ಗಳು ಸಬ್‌ಸ್ಕ್ರಿಪ್ಷನ್ ಆಧಾರವಾಗಿರುತ್ತವೆ. ಇಂಥ ಸಬ್‌ಸ್ಕ್ರಿಪ್ಷನ್ ಆಧಾರಿತ ಆ್ಯಪ್‌ಗಳಿಗೆ ತಿಂಗಳಿಗೆ ನಿರ್ದಿಷ್ಟ ಹಣ ಪಾವತಿಸಬೇಕು. ಮೊದಲಾದರೆ ಈ ಹಣ ಪಾವತಿಗೆ ಗೂಗಲ್ ಪ್ಲೇ ನಿರ್ದಿಷ್ಟಪಡಿಸಿದ ಪೇಮೆಂಟ್ ವ್ಯವಸ್ಥೆಯನ್ನೇ ಬಳಸಬೇಕಿತ್ತು. ಆದರೆ, ಈಗ ಯುಪಿಐ ಆಟೊ ಪೇ ಫೀಚರ್ ಅಳವಡಿಸಲಾಗಿದೆ. ಆ್ಯಪ್ ಸಬ್‌ಸ್ಕ್ರೈಬ್ ಮಾಡುವ ಜನರು ಹಣ ಪಾವತಿಯನ್ನು ತಮ್ಮಿಚ್ಛೆಯ ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಮಾಡಬಹುದು. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಆಧಾರಿತ ಪೇಮೆಂಟ್ ವ್ಯವಸ್ಥೆ ಬಳಸಬಹುದು.

ಯುಪಿಐ ಆಟೊ ಪೇ ನಲ್ಲಿ ಸಬ್‌ಸ್ಕ್ರಿಪ್ಷನ್ ಹಣ ಗ್ರಾಹಕರ ಖಾತೆಯಿಂದ ಆಟೊಮ್ಯಾಟಿಕ್ ಆಗಿ ಪ್ರತೀ ತಿಂಗಳು ಕಡಿತಗೊಳ್ಳುತ್ತಾ ಹೋಗುತ್ತದೆ. ಅಥವಾ ನಿಗದಿತ ಅವಧಿಗೆ ಹಣ ಕಡಿತಗೊಳ್ಳುತ್ತಾ ಹೋಗುತ್ತದೆ.
ಗೂಗಲ್‌ಗೆ ಯುಪಿಐ ಶಕ್ತಿ
ಭಾರತದಲ್ಲಿ ಗೂಗಲ್ ಪ್ಲೇನಲ್ಲಿ ಆ್ಯಪ್‌ಗಳ ಸಬ್‌ಸ್ಕ್ರೈಬ್ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆಯಂತೆ. ಗೂಗಲ್‌ನಿಂದ ಯುಪಿಐ ಪೇಮೆಂಟ್ ವ್ಯವಸ್ಥೆ ಅಳವಡಿಕೆಯಾಗಿದ್ದೇ ಪ್ರಮುಖವಾಗಿ ಇದಕ್ಕೆ ಕಾರಣ ಎನ್ನಲಾಗಿದೆ.
2019ರಕ್ಕೆ ಹೋಲಿಸಿದರೆ 2021ರಲ್ಲಿ ಪ್ಲೇ ಸ್ಟೋರ್‌ನಲ್ಲಿ ಗ್ರಾಹಕರು ಮಾಡಿರುವ ವೆಚ್ಚ ಶೇ. 80ರಷ್ಟು ಹೆಚ್ಚಾಗಿದೆ. ಪೇಮೆಂಟ್ ವ್ಯವಸ್ಥೆ ಸುಗಮವಾಗಿ ಆಗಲು ಯುಪಿಐ ಅಳವಡಿಕೆ ಕೆಲಸ ಮಾಡಿದೆ. ಬಹಳ ಖರ್ಚು ಮಾಡಿ ಯುಪಿಐ ಪ್ಲಾಟ್‌ಫಾರ್ಮ್‌ಗೆ ಗೂಗಲ್ ಹೋಗಿದ್ದು ವರ್ಕೌಟ್ ಆಗಿದೆ.
ಪ್ಲೇ ಸ್ಟೋರ್‌ನಲ್ಲಿ ಯಾವುದೇ ಗೋಜಲುಗಳಿಲ್ಲದೇ ಪೇಮೆಂಟ್ ವ್ಯವಸ್ಥೆ ಸರಾಗವಾಗಿ ಇರುವಂತೆ ಗೂಗಲ್ ಕ್ರಮ ಕೈಗೊಳ್ಳುತ್ತಿದೆ. 60ಕ್ಕೂ ಹಚ್ಚು ದೇಶಗಳಲ್ಲಿರುವ 300ಕ್ಕೂ ಹೆಚ್ಚು ಸ್ಥಳೀಯ ಪೇಮೆಂಟ್ ವಿಧಾನಗಳನ್ನು ಇಲ್ಲಿಗೆ ಜೋಡಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಪೇಮೆಂಟ್ ವ್ಯವಸ್ಥೆ ಸುಲಭವಾಗುತ್ತದೆ ಎಂಬುದು ಗೂಗಲ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.


Click it and Unblock the Notifications