ಅಮೆರಿಕಾ ಹಾಗೂ ಚೀನಾ ನಡುವಿನ ಸಂಬಂಧ ಹಳಸಿ ಬಹಳ ತಿಂಗಳುಗಳೇ ಕಳೆದು ಹೋಗಿದೆ. ಅದರಲ್ಲೂ ಕೊರೊನಾವೈರಸ್ ಅಮೆರಿಕಾವನ್ನು ಅತಿ ಹೆಚ್ಚು ಅಟ್ಯಾಕ್ ಮಾಡಿದ ಬಳಿಕವಂತೂ ಡ್ರ್ಯಾಗನ್ ರಾಷ್ಟ್ರದ ಮೇಲೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕೆಂಡಕಾರುತ್ತಿದೆ.
ಚೀನಾದ ಆಡಳಿತ ವೈಫಲ್ಯದಿಂದಲೇ ಕೊರೊನಾವೈರಸ್ ವಿಶ್ವಕ್ಕೆ ಹರಡಲು ನೇರ ಕಾರಣ ಎಂದು ಟೀಕಿಸುತ್ತಲೇ ಇರುವ ಅಮೆರಿಕಾ, ಚೀನಾವನ್ನು ಕಟ್ಟಿಹಾಕಲು ರಣತಂತ್ರ ರೂಪಿಸುತ್ತಿದೆ. ಚೀನಾವನ್ನು ಸದೆಬಡಿಯಲು ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, 18 ಸೂತ್ರಗಳನ್ನು ಸಹ ಹೆಣೆದಿದೆ.
ಚೀನಾವನ್ನು ಬಹಿಷ್ಕರಿಸುತ್ತಿರುವ ಹಲವು ರಾಷ್ಟ್ರಗಳು
ಕೊರೊನಾವೈರಸ್ ವಿಶ್ವಕ್ಕೆ ಹರಡಲು ಪ್ರಮುಖ ಕಾರಣವಾಗಿರುವ ಚೀನಾ ಇಡೀ ವಿಶ್ವದ ವಿರುದ್ಧ ಈಗ ವಿಲನ್ ರಾಷ್ಟ್ರ. ಬಹುತೇಕ ರಾಷ್ಟ್ರಗಳು ಚೀನಾದ ಜೊತೆಗಿನ ವ್ಯವಹಾರದಿಂದ ಹಿಂದೆ ಸರಿಯುವ ಮನಸ್ಸು ಮಾಡಿವೆ. ಅಲ್ಲದೆ ಡ್ರ್ಯಾಗನ್ ರಾಷ್ಟ್ರವನ್ನು ಬಹಿಷ್ಕರಿಸಲು ಸಜ್ಜುಗೊಳ್ಳುತ್ತಿವೆ.
ಹೀಗೆ ಚೀನಾ ವಿರುದ್ಧ ಕೆಂಡಾಮಂಡಲಗೊಂಡಿರುವ ಮುಂಚೂಣಿ ರಾಷ್ಟ್ರ ಅಮೆರಿಕಾ. ವೈರಸ್ ಹರಡಲು ನಿಜವಾದ ಕಾರಣ ಏನು? ಚೀನಾದ ತಪ್ಪನ್ನು ಒಪ್ಪಿಸಬೇಕು ಎಂದು ಅಮೆರಿಕಾ ಪಣತೊಟ್ಟಂತಿದೆ. ಈ ಸವಾಲಿಗೆ ಭಾರತದೊಂದಿಗೆ ಕೈ ಜೋಡಿಸಲು ಮುಂದಾಗಿದೆ ಎನ್ನಲಾಗುತ್ತಿದೆ.
ಚೀನಾ ವಿರುದ್ಧ 18 ಸೂತ್ರಗಳು
ಅಮೆರಿಕಾ ಸಂಸದ ಥಾಮ್ ಟಿಲ್ಲಿಸ್ ಚೀನಾ ವಿರುದ್ಧ 18 ಅಂಶಗಳ ಯೋಜನೆಯನ್ನು ಸಿದ್ಧಪಡಿಸಿದ್ದು ಈ ಯೋಜನೆಯ ಮೂಲಕ ಚೀನಾದ ಸುಳ್ಳುಗಳು ಇಡೀ ಜಗತ್ತಿಗೆ ತೆರೆದುಕೊಳ್ಳುತ್ತವೆ ಎನ್ನಲಾಗಿದೆ. ಅಮೆರಿಕಾದಲ್ಲೂ ಚೀನಾ ವಿರುದ್ಧದ ಮಸೂದೆಯನ್ನು ಮಂಡಿಸಲಾಗಿದೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಬಲವಾದ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
18 ಯೋಜನೆಗಳಲ್ಲಿ ಏನೇನಿದೆ?
ಚೀನಾ ವಿರುದ್ಧ ಮಂಡಿಸಲಾದ ಈ ಯೋಜನೆಯಲ್ಲಿ ಮಿಲಿಟರಿ, ಆರ್ಥಿಕ, ರಾಜತಾಂತ್ರಿಕ ಕ್ಷೇತ್ರ ಹೀಗೆ ಪ್ರತಿಯೊಂದು ವಲಯದಲ್ಲೂ ಚೀನಾವನ್ನು ಮಣಿಸುವ ಪ್ರಯತ್ನವಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಯೋಜನೆಯ ಒಂದು ಭಾಗದಲ್ಲಿ ಭಾರತವನ್ನು ಸಹ ಪಾಲುದಾರರನ್ನಾಗಿ ಮಾಡಲಾಗಿದೆ ಎಂದು ಯೋಜನೆ ಹೇಳುತ್ತದೆ.
ಮಿತ್ರರಾಷ್ಟ್ರಗಳೊಂದಿಗೆ ಮಿಲಿಟರಿ ಸಂಬಂಧ ಬಲಪಡಿಸುವಿಕೆ
ಅಮೆರಿಕ ತನ್ನ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಮಿಲಿಟರಿ ಸಂಬಂಧವನ್ನು ಗಾಢವಾಗಿಸಬೇಕು ಎಂದು ಯೋಜನೆ ರೂಪಿಸಿದೆ. ಚೀನಾವನ್ನು ಸೋಲಿಸಲು ಭಾರತ, ತೈವಾನ್ ಮತ್ತು ವಿಯೆಟ್ನಾಂ ಜೊತೆ ಮಿಲಿಟರಿ ಒಪ್ಪಂದಗಳಿಗೆ ಉತ್ತೇಜನ ನೀಡಲಾಗುವುದು ಎನ್ನಲಾಗಿದೆ. ಅಲ್ಲದೆ ಚೀನಾದ ಸುತ್ತ ವ್ಯೂಹ ರಚನೆಗೂ ಅಮೆರಿಕಾ ಯೋಜನೆ ರೂಪಿಸಿದೆ.
ಚೀನಾದಲ್ಲಿನ ಹೂಡಿಕೆಯನ್ನು ಹಿಂಪಡೆಯುವುದು
ಚೀನಾದಲ್ಲಿರುವ ಅಮೆರಿಕದ ಉತ್ಪಾದನಾ ಕಂಪನಿಗಳನ್ನು ಮರುಪಡೆಯಬೇಕು ಮತ್ತು ಕ್ರಮೇಣ ಪೂರೈಕೆಗಾಗಿ ಚೀನಾವನ್ನು ಅವಲಂಬಿಸುವುದನ್ನು ತೆಗೆದುಹಾಕಬೇಕು ಇದು ಕೂಡ ಅಮೆರಿಕಾ ಯೋಜನೆಗಳಲ್ಲಿ ಒಂದಾಗಿದೆ. ಈಗಾಗಲೇ ಹುವಾಯಿ ಕಂಪನಿಗಳಿಂದ ಸೆಮಿಕಂಡಕ್ಟರ್‌ಗಳ ಆಮದಿನ ಮೇಲೆ ಅಮೆರಿಕಾ ನಿರ್ಬಂಧ ಹೇರಲು ಹೆಜ್ಜೆ ಇಟ್ಟಿದೆ. ಹಾಗೇನಾದ್ರೂ ಆದಲ್ಲಿ ಇದಕ್ಕೆ ಪ್ರತಿಯಾಗಿ ತಾನು ಪ್ರತಿಕಾರ ತೆಗೆದುಕೊಳ್ಳುತ್ತೇನೆ ಎಂದು ಚೀನಾ ಹೇಳಿದೆ.
ಚೀನಾದ ಮೇಲೆ ನಿಷೇಧ ಹೇರುವುದು
ಕೊರೊನಾವೈರಸ್ ಕುರಿತು ಸುಳ್ಳು ಹೇಳಿರುವ ಚೀನಾ ದೇಶವು ವೈರಸ್ ಹರಡುವುದನ್ನು ಪ್ರಾಥಮಿಕ ಹಂತದಲ್ಲೇ ತಡೆಯಲು ವಿಫಲವಾಯಿತು. ಹೀಗಾಗಿ ವೈರಸ್ ವಿರುದ್ಧ ಸುಳ್ಳು ಹೇಳಿದ ಚೀನಾ ಮೇಲೆ ನಿಷೇಧ ಹೇರುವುದು ಅಮೆರಿಕಾ ಯೋಜನೆಯಲ್ಲಿ ಒಂದಾಗಿದೆ.
ಅಮೆರಿಕಾ ತನ್ನ ಮಿಲಿಟರಿ ಬಲ ಹೆಚ್ಚಿಸಲು, ಚೀನಾದಿಂದ 20 ಬಿಲಿಯನ್ ಯುಎಸ್ ಡಾಲರ್ ಪರಿಹಾರ ನೀಡಬೇಕು ಎಂದು ಒತ್ತಡ ಹಾಕುವುದು. ಹಾಗೆಯೇ ಚೀನಾ ತಂತ್ರಜ್ಞಾನವನ್ನು ಕದಿಯದಂತೆ ಕ್ರಮಗಳನ್ನು ಕೈಗೊಳ್ಳುವುದು. ಜೊತೆಗೆ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ಕಣ್ಣಿಡುವಂತಹ ಸಂಘಟನೆಯನ್ನು ರಚಿಸುವುದು ಅಮೆರಿಕಾ ಯೋಜನೆಗಳಲ್ಲಿ ಒಂದಾಗಿದೆ.
ಹೀಗೆ ಚೀನಾ ಮೇಲೆ 18 ಯೋಜನೆಗಳನ್ನು ರೂಪಿಸಿರುವ ಅಮೆರಿಕಾದ ಯೋಜನೆಯಿಂದ ಭಾರತವೂ ಕೂಡ ಲಾಭ ಪಡೆದುಕೊಳ್ಳಲಿದೆ. ಚೀನಾದ ಮೇಲಿನ ಅವಲಂಭನೆ ತಗ್ಗಿಸಿ, ಸ್ವದೇಶಿ ಉತ್ಪನ್ನಗಳ ಉತ್ಪಾದನೆ ಹೆಚ್ಚಳವೂ ಭಾರತಕ್ಕೆ ಸ್ವಾವಲಂಬಿ ಶಕ್ತಿಯನ್ನು ಒದಗಿಸುತ್ತದೆ.


Click it and Unblock the Notifications