ವಿಶ್ವದ ಮುಂದೆ ಈಗೇನಿದ್ರೂ ವಿಲನ್ ಅಂದ್ರೆ ಅದು ಏಕೈಕ ರಾಷ್ಟ್ರ ಚೀನಾ. ಕೊರೊನಾವೈರಸ್ ಹರಡುವುದಕ್ಕೆ ಪ್ರಮುಖ ಕಾರಣಕರ್ತನಾದ ಚೀನಾ ರಾಷ್ಟ್ರದ ಮೇಲೆ ಮುಗಿ ಬೀಳಲು ಬಲಿಷ್ಠ ರಾಷ್ಟ್ರಗಳು ಯೋಜನೆ ನಡೆಸುತ್ತಿವೆ. ಇಡೀ ಪ್ರಪಂಚವನ್ನೇ ವೈರಸ್ ಕೂಪಕ್ಕೆ ತಳ್ಳಿದ ಅಪಖ್ಯಾತಿ ಇದೀಗ ಚೀನಾ ಮೇಲಿದೆ.
ಕೊರೊನಾವೈರಸ್ ಹರಡುವುದಕ್ಕೂ ಮೊದಲೇ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಮೇಲೆ ಕೆಂಡಕಾರುತ್ತಿದ್ದ ಅಮೆರಿಕಾ, ವ್ಯಾಪಾರ-ವಹಿವಾಟು ಮೇಲೆ ದಿಗ್ಬಂಧನ ಹೇರಿತ್ತು. ಆದರೆ ಆ ಬಿಕ್ಕಟ್ಟಿಗೆ ಪರಿಹಾರ ಸಿಗುತ್ತಿದೆ ಎನ್ನುವಷ್ಟರಲ್ಲಿ ಕೊರೊನಾ ಅಟ್ಯಾಕ್ ಮಾಡಿ ಬಲಿಷ್ಟ ಅಮೆರಿಕಾವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಕಟ್ಟಿಹಾಕಿದೆ. ಅದರಲ್ಲೂ ಅಮೆರಿಕಾವಂತೂ ಹೇಳತೀರದ ಸ್ಥಿತಿಗೆ ತಲುಪಿದೆ.
ವೈರಸ್ ಹರಡಲು ಚೀನಾವೇ ಪ್ರಮುಖ ಕಾರಣ:ಅಮೆರಿಕಾ
ಜಗತ್ತಿಗೆ ಕೊರೊನಾವೈರಸ್ ಹರಡಲು ಚೀನಾವೇ ಪ್ರಮುಖ ಕಾರಣ ಎಂದು ಘಂಟಾಘೋಷವಾಗಿ ಸಾರಿ ಹೇಳುತ್ತಿರುವ ಅಮೆರಿಕಾ ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
ಅದರಲ್ಲೂ ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿ ಆರಂಭವಾದಾಗಿನಿಂದ ಸತತವಾಗಿ ಚೀನಾ ಮೇಲೆ ವಾಗ್ದಾಳಿ ನಡೆಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಗತ್ತಿಗೆ ಕೊರೊನಾ ವೈರಸ್ ಹರಡಿದ ಚೀನಾ ತಕ್ಕ ಬೆಲೆ ತೆರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಚೀನಾ ಮೇಲೆ ಮೊದಲ ಅಸ್ತ್ರ ಪ್ರಯೋಗ
ಚೀನಾ ಮೇಲೆ ಕಿಡಿ ಕಾರುತ್ತಿರುವ ಅಮೆರಿಕಾ ಇದೀಗ ಡ್ರ್ಯಾಗನ್ ರಾಷ್ಟ್ರಗಳ ಮೇಲೆ ಮೊದಲ ಅಸ್ತ್ರವನ್ನು ಪ್ರಯೋಗಿಸಿದೆ. ಚೀನಾ ವಿರುದ್ಧ ಸಾಕಷ್ಟು ಬಿಗಿ ಪ್ರಯತ್ನಗಳನ್ನು ವಿಧಿಸುವ ಯೋಜನೆ ಸಿದ್ಧಪಡಿಸಿದ್ದು, ಟ್ರಂಪ್ ಆಡಳಿತ ಮೊದಲ ಹಂತವಾಗಿ ಚೀನಾಗೆ ರಫ್ತು ಮಾಡುವ ವಸ್ತುಗಳ ಮೇಲೆ ಬಿಗಿ ಷರತ್ತುಗಳನ್ನು ವಿಧಿಸಿದೆ.
ವಿಮಾನ ತಯಾರಿಕಾ ಬಿಡಿ ಭಾಗಗಳ ಮಾರಾಟಕ್ಕೆ ಕಠಿಣ ಕ್ರಮ
ವಿಶ್ವದಲ್ಲೇ ಅತ್ಯಂದ ಬಲಿಷ್ಟ ಮಿಲಿಟರಿ ವ್ಯವಸ್ಥೆಯನ್ನು ಹೊಂದಿರುವ ಅಮೆರಿಕಾ ಅನೇಕ ರಾಷ್ಟ್ರಗಳಿಗೆ ಶಸ್ತಾಸ್ತ್ರಗಳನ್ನು ರಫ್ತು ಮಾಡುತ್ತದೆ. ಚೀನಾ ಕೂಡ ಅಮೆರಿಕಾದಿಂದ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿಯೇ ಅಮೆರಿಕಾ ವಿಮಾನ ತಯಾರಿಕಾ ಬಿಡಿ ಭಾಗಗಳು ಹಾಗೂ ಅರೆವಾಹಕ ವಸ್ತುಗಳ ರಫ್ತಿನ ಮೇಲೆ ಕಠಿಣ ನಿಯಮಗಳನ್ನು ವಿಧಿಸಿದೆ. ಈ ವಸ್ತುಗಳನ್ನು ಚೀನಾಗೆ ಮಾರುವ ಅಮೆರಿಕನ್ ಕಂಪನಿಗಳು ಕಡ್ಡಾಯವಾಗಿ ಪರವಾನಿಗೆ ಹೊಂದಿರಬೇಕು ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ.
ಈ ಮೂಲಕ ಚೀನಾದ ಮಿಲಿಟರಿಯನ್ನು ಬಲಪಡಿಸುವ ಅಮೆರಿಕಾ ಕಂಪನಿಯ ಉತ್ಪನ್ನಗಳನ್ನು ಚೀನಾಕ್ಕೆ ಹೋಗದಂತೆ ಅಮೆರಿಕಾ ಕಾನೂನು ಬಿಗಿಗೊಳಿಸಿದೆ.
ಚೀನಾಗೆ ಯಾವುದೇ ವಸ್ತುಗಳನ್ನು ರಫ್ತು ಮಾಡಬೇಕು ಅಂದ್ರು ಸರ್ಕಾರದ ಅನುಮತಿ ಬೇಕು
ಕೇವಲ ವಿಮಾನ ತಯಾರಿಕಾ ಬಿಡಿ ಭಾಗಗಳು ಹಾಗೂ ಅರೆವಾಹಕಗಳನ್ನಷ್ಟೇ ಅಲ್ಲದೆ ಚೀನಾಗೆ ಯಾವುದೇ ಮಿಲಿಟರಿ ಹಾಗೂ ನಾಗರಿಕ ಬಳಕೆಗಾಗಿ ವಸ್ತುಗಳನ್ನು ರಫ್ತು ಮಾಡುವ ಕಂಪನಿಗಳು ಮೊದಲು ಸರ್ಕಾರದಿಂದ ಅಗತ್ಯ ಅನುಮತಿ ಪಡೆಯಬೇಕು ಎಂದು ಟ್ರಂಪ್ ಸರ್ಕಾರ ಹೇಳಿದೆ. ಈ ಮೂಲಕ ಚೀನಾದ ವಿರುದ್ಧ ವಾಣಿಜ್ಯ ಸಮರ ಸಾರಿರುವ ಅಮೆರಿಕಾ ತನ್ನ ಮೊದಲ ಹೆಜ್ಜೆ ಮುಂದಿಟ್ಟಿದೆ.
ಇತ್ತೀಚೆಗಷ್ಟೇ ಭಾರತವೂ ಕೂಡ ತನ್ನ ವಿದೇಶಿ ಹೂಡಿಕೆ ನಿಯಮದಲ್ಲಿ ಬದಲಾವಣೆ ತಂದಿತ್ತು. ಆ ಮೂಲಕ ಚೀನಾ ಸೇರಿದಂತೆ ತನ್ನ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳು ವಿದೇಶಿ ಹೂಡಿಕೆಗಳಿಗೆ ಅನುಮತಿ ಪಡೆಯುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.


Click it and Unblock the Notifications