ಬಳಕೆ ಮಾಡಿದ ವಸ್ತುಗಳ ಮಾರ್ಕೆಟ್ ಪ್ಲೇಸ್ OLXನಿಂದ ಭಾರತದಲ್ಲಿ 250 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಸೇಲ್ಸ್ ಹಾಗೂ ಸಪೋರ್ಟ್ ತಂಡದಿಂದ ಬಹುತೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುವುದು.
"ನಮ್ಮ ಸ್ಟ್ರಾಟೆಜಿ ಮೇಲೆ ಮತ್ತೊಮ್ಮೆ ಗಮನ ಹರಿಸಿ, ನಾವು ಆಂತರಿಕವಾಗಿ ಕೆಲವು ಬದಲಾವಣೆ ಮಾಡಲು ಕಳೆದ ವಾರ ನಿರ್ಧಾರ ಮಾಡಿದೆವು. ಇದರಿಂದ ಸೇಲ್ಸ್ ಮತ್ತು ಸಪೋರ್ಟ್ ತಂಡದಲ್ಲಿನ 250 ಸಿಬ್ಬಂದಿ ಮೇಲೆ ಪರಿಣಾಮ ಆಗಲಿದೆ," ಎಂದು OLX ವಕ್ತಾರರು ಭಾನುವಾರ ತಿಳಿಸಿದ್ದಾರೆ.
OLX ಭಾರತವನ್ನು ಪ್ರವೇಶ ಮಾಡಿದ್ದು 2009ರಲ್ಲಿ. ಭಾರತದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿರುವುದಾಗಿ ಹೇಳಿರುವ OLX, ಗ್ರಾಹಕರಿಗೆ "ಅತ್ಯುತ್ತಮ ಅನುಭವ" ದೊರೆಯುವಂತೆ ಮಾಡುವುದಕ್ಕೆ ಬದಲಾವಣೆ ತರಲು, ಹೂಡಿಕೆಯನ್ನು ಮಾಡಲು ಬದ್ಧವಾಗಿರುವುದಾಗಿ ಹೇಳಲಾಗಿದೆ.

ಗ್ರಾಹಕರಿಂದ ಗ್ರಾಹಕರಿಗೆ ಆನ್ ಲೈನ್ ವ್ಯವಹಾರದಲ್ಲಿ 85ರಷ್ಟು ಪಾಲು ಇರುವುದಾಗಿ OLX ಹೇಳಿಕೊಳ್ಳುತ್ತದೆ. ಪ್ರೀ ಓನ್ಡ್ ಕಾರು ಮಾರುಕಟ್ಟೆಯಲ್ಲಿ OLX ಆಟೋ ಹಾಗೂ OLX ಕ್ಯಾಶ್ ಮೈಕಾರ್ ಮೂಲಕ 80% ಷೇರು ಹೊಂದಿದೆ. ನೆದರ್ ಲೆಂಡ್ ಮೂಲದ ಜಾಗತಿಕ ಇಂಟರ್ನೆಟ್ ಗ್ರೂಪ್ ಪ್ರೊಸಸ್ ಗೆ ಸೇರಿದ ಒಂದು ಘಟಕ OLX. ಆ OLX ಗ್ರೂಪ್ ಜಾಗತಿಕವಾಗಿ 7500 ಮಂದಿಯನ್ನು ನೇಮಿಸಿದೆ ಎಂದು ವೆಬ್ ಸೈಟ್ ನಲ್ಲಿ ಹೇಳಲಾಗಿದೆ.
ಭಾರತದಲ್ಲಿ 250 ಮಂದಿಯನ್ನು ಕೆಲಸದಿಂದ ತೆಗೆಯುವ ಬಗ್ಗೆ ಮಾತನಾಡಿರುವ OLX ವಕ್ತಾರರು, ಇದು ಬಹಳ ಕಷ್ಟದ ನಿರ್ಧಾರ ಎಂದಿದ್ದಾರೆ. ಅವರ ಬಗ್ಗೆ ಬಹಳ ಯೋಚನೆ ಮಾಡಿ ಮತ್ತು ಗೌರವದಿಂದ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಅವರಲ್ಲಿ ಕೆಲವರಿಗೆ OLX ಮತ್ತು ಪ್ರೊಸಸ್ ನಲ್ಲಿಯೇ ಅವಕಾಶಗಳನ್ನು ಹುಡುಕಲಾಗುವುದು. ಇನ್ನು ಇಲ್ಲಿಂದ ಹೊರಗೆ ಕಳುಹಿಸುವಾಗ ಸೂಕ್ತ ಪರಿಹಾರ ಮತ್ತು ಬೆಂಬಲ ನೀಡಲಾಗುವುದು ಎಂದು ಹೇಳಲಾಗಿದೆ.


Click it and Unblock the Notifications