ವೇಗದ ಮತ್ತು ಅತ್ಯುತ್ತಮ ಸೇವೆಯ ಮೂಲಕ ಜನಪ್ರಿಯ ಪಡೆದ ರೈಲು ಸೇವೆಗಳಲ್ಲಿ ವಂದೇ ಭಾರತ್ ಕೂಡಾ (Vande Bharat Express) ಒಂದು. ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದಲ್ಲಿ ರೈಲ್ವೇ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ. ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಜಾರಿಗೆ ತಂದ ಈ ಸೇವೆ, ಪ್ರಸ್ತುತ ಭಾರತದಾದ್ಯಂತ 164 ವಂದೇ ಭಾರತ್ ರೈಲುಗಳು ಕಾರ್ಯಚರಣೆ ನಡೆಸುತ್ತಿದೆ. ಈಗಾಗಲೇ ಹಲವಾರು ರಾಜ್ಯಗಳು ಮತ್ತಷ್ಟು ವಂದೇ ಭಾರತ್ ರೈಲಿಗೆ ಬೇಡಿಕೆ ಇಟ್ಟಿದ್ದು, ಅದರಲ್ಲಿ ಕರ್ನಾಟಕ ಕೂಡಾ ಒಂದು.

ಇದೀಗ ಕರ್ನಾಟಕ ವಂದೇ ಭಾರತ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಕರ್ನಾಟಕಕ್ಕೆ ಶೀಘ್ರದಲ್ಲೇ ಮತ್ತೊಂದು ವಂದೇ ಭಾರತ್ ಸೇವೆ ಆಗಮನವಾಗಲಿದೆ. ಬೆಂಗಳೂರು (Bengaluru) ಮತ್ತು ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ವಂದೇ ಭಾರತ್ ಸೇವೆ ಕಲ್ಪಿಸಬೇಕೆಂಬುದು ಹಲವು ದಿನಗಳ ಬೇಡಿಕೆ. ಆದ್ರೆ ಇದೀಗ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕಲ್ಪಿಸುವ ಬಗ್ಗೆ ಕೇಂದ್ರ ರೈಲ್ವೇ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿರ ವಿ.ಸೋಮಣ್ಣ ಸುಳಿವು ಕೊಟ್ಟಿದ್ದಾರೆ.
ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್?
ಈಗಾಗಲೇ ಬೆಂಗಳೂರು ಟು ಉತ್ತರ ಕರ್ನಾಟಕ ಮತ್ತು ಬೆಂಗಳೂರು ಟು ಕರಾವಳಿ ಪ್ರದೇಶಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕಲ್ಪಿಸಬೇಕೆಂದು ಭಾರೀ ಬೇಡಿಕೆ ಇದೆ. ಈಗಾಗಲೇ ಸಚಿವರಿಗೆ ಹಲವು ಬಾರಿ ಮನವಿಗಳನ್ನು ಮಾಡಲಾಗಿದೆ. ಇದೀಗ ವ್ಯಾಪಕ ಬೇಡಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ, ವಂದೇ ಭಾರತ್ ರೈಲು ಸೇವೆ ಆರಂಭಿಸಲು ಅಸ್ತು ಎನ್ನುವ ಸಾಧ್ಯತೆ ಇದೆ.
ಮಂಗಳೂರಿಗೆ ಬರುತ್ತಾ ವಂದೇ ಭಾರತ್ ಎಕ್ಸ್‌ಪ್ರೆಸ್?
ಮಂಗಳೂರಿನಲ್ಲಿ ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯನಿರ್ವಹಿಸುತ್ತಿದ್ದರೂ, ನೇರವಾಗಿ ಬೆಂಗಳೂರಿನಿಂದ ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಕಾರ್ಯಾಚರಿಸುತ್ತಿಲ್ಲ. ಆದರೆ ಇತ್ತೀಚೆಗೆ ಉದ್ಯಮಿ ಮೋಹನ್‌ದಾಸ್ ಪೈ ಅವರು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಮಾಡಿ ಬೆಂಗಳೂರಿನಿಂದ ಮಂಗಳೂರಿಗೂ 3 ರಿಂದ 4 ತಲುಪುವಂತೆ ವಂದೇ ಭಾರತ್ ರೈಲು ಕೊಡಿ ಎಂದು ಕೇಳುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ:
ಎಕ್ಸ್‌ನಲ್ಲಿ ಸಚಿವ ವಿ. ಸೋಮಣ್ಣ ಅವರು, "ರೈಲ್ವೇ ಸೇವೆಯ ಅಭಿವೃದ್ಧಿಗಾಗಿ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಘಾಟ್ ವಿಭಾಗದ ರೈಲ್ವೇ ಮಾರ್ಗವನ್ನು ಯಶಸ್ವಿಯಾಗಿ ವಿದ್ಯುದ್ದೀಕರಣಗೊಳಿಸಿಲಾಗಿದೆ. ಅತ್ಯಂತ ಸವಾಲಿನ ಭೂಪ್ರದೇಶದಲ್ಲಿ ಸಾಧಿಸಿದ ಈ ಮೈಲಿಗಲ್ಲು ಆಧುನಿಕ ಮತ್ತು ಶುದ್ಧ-ಶಕ್ತಿ ಮೂಲಸೌಕರ್ಯ ನಿರ್ಮಾಣದೆಡೆಗಿನ ಭಾರತೀಯ ರೈಲ್ವೆಯ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಇದೀಗ, ಈ ರೈಲ್ವೆ ಮಾರ್ಗವು ವಿದ್ಯುತ್ ಚಾಲನೆಗೆ ಸಂಪೂರ್ಣವಾಗಿ ಸಿದ್ದಗೊಂಡಿದ್ದು, ಪರಿಣಾಮಕಾರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ ಮತ್ತು ಈ ಭಾಗದಲ್ಲಿ ಮತ್ತಷ್ಟು ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ಸಹಾಯಕವಾಗಲಿದೆ." ಎಂದು ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಉದ್ಯಮಿ ಮೋಹನ್‌ದಾಸ್ ಪೈ ಅವರು, "ಧನ್ಯವಾದಗಳು, ಬೆಂಗಳೂರಿನಿಂದ ಮಂಗಳೂರಿಗೂ 3 ರಿಂದ 4 ತಲುಪುವಂತೆ ವಂದೇ ಭಾರತ್ ರೈಲು ಕೊಡಿ" ಎಂದು ಮನವಿ ಮಾಡಿದ್ದಾರೆ.
ಇದನ್ನು ರೀಟ್ವೀಟ್ ಮಾಡಿರುವ ಸಚಿವ ವಿ.ಸೋಮಣ್ಣ ಅವರು, "ಧನ್ಯವಾದಗಳು. ಇದು ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ವಿಕಸಿತ ಭಾರತದ ಕನಸಿನ ಯಶಸ್ಸು ಹಾಗೂ ರೈಲ್ವೇ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಕಾರ್ಯಕ್ಷಮತೆಗೆ ಸಾಕ್ಷಿ. ಹಾಗೆಯೇ, ಮಂಗಳೂರು ಭಾಗದ ಜನರ ಬಹುಬೇಡಿಕೆಯಾಗಿರುವ ವಂದೇ ಭಾರತ್ ರೈಲು ಸಂಚರಿಸುವ ಕಾಲವೂ ಸನ್ನಿಹಿತವಾಗಿದೆ." ಎಂದು ಬರೆದುಕೊಂಡಿದ್ದಾರೆ. ಅಂದರೆ ಪರೋಕ್ಷವಾಗಿ ಬೆಂಗಳೂರು ಮತ್ತು ಮಂಗಳೂರಿಗೆ ಶೀಘ್ರದಲ್ಲೇ ವಂದೇ ಭಾರತ್ ರೈಲು ಸಂಪರ್ಕಿಸಲಿದೆ ಎಂದು ಸುಳಿವು ಕೊಟ್ಟಿದ್ದಾರೆ.


Click it and Unblock the Notifications