ವಂದೇ ಭಾರತ್ ರೈಲು (Vande Bharat Train) ಸೇವೆ ಭಾರತೀಯ ರೈಲ್ವೇ ಪ್ರಯಾಣಿಕರ ಬಹಳ ನೆಚ್ಚಿನ ರೈಲು ಸೇವೆಯಾಗಿದೆ. ಅತಿವೇಗದ ಸೇವೆಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ವಂದೇ ಭಾರತ್ ರೈಲು ಸೇವೆ, ಸದ್ಯ ದೇಶದ ಮೂಲೆ ಮೂಲೆಗಳಲ್ಲೂ ಸಂಚಾರ ಮಾಡುತ್ತಿದೆ. ಅಲ್ಲದೇ ಬೆಂಗಳೂರಿನಿಂದಲೂ ಹಲವು ಕಡೆ ವಂದೇ ಭಾರತ್ ರೈಲುಗಳ ಸಂಚರಿಸುತ್ತದೆ. ಇತ್ತೀಚೆಗಷ್ಟೇ ಮಂಗಳೂರಿಗೂ ವಂದೇ ಭಾರತ್ ರೈಲು ಬರಲಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದ್ರೆ ಇದೀಗ ಮಂಗಳೂರಿಗರಿಗೆ (Mangaluru) ಶಾಕಿಂಗ್ ಸುದ್ದಿಯೊಂದಿದೆ.

ಹೌದು, ಇದೀಗ ಬೆಂಗಳೂರು-ಗೋವಾ ನಡುವೆ ವಂದೇ ಭಾರತ್ ರೈಲು ಆರಂಭಿಸುವ ಬಗ್ಗೆ ಪ್ರಸ್ತಾಪ ನಡೆಯುತ್ತಿದೆ. ಆದ್ರೆ ಇದು ಮಂಗಳೂರು ಮೂಲಕ ಸಂಚರಿಸದೆ ಬೇರೊಂದು ದಾರಿ ಹಿಡಿದಿದೆ. ಹಾಗಿದ್ರೆ ಆ ಮಾರ್ಗಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು-ಗೋವಾ ವಂದೇ ಭಾರತ್ ರೈಲು!
ಭಾರತೀಯ ರೈಲ್ವೇಯು ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸುವ ಬಗ್ಗೆ ಪ್ರಸ್ತಾಪ ಇಟ್ಟಿದೆ. ಈ ರೈಲು ಕರಾವಳಿ ಮಾರ್ಗಗಳಲ್ಲೂ ಸಂಚರಿಸುತ್ತದೆ. ಈ ಮೂಲಕ ಕೇವಲ 13 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳಿಸಲಿದೆ ಎಂದು ವರದಿಯಾಗಿದೆ. ಆದರೆ ಇದರಲ್ಲಿ ವಿಷಾದದ ಸಂಗತಿಯೆಂದರೆ, ಈ ರೈಲು ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ಮುಖ್ಯ ನಿಲ್ದಾಣಗಳಲ್ಲಿ ನಿಲುಗಡೆ ಭಾಗ್ಯ ಹೊಂದಿಲ್ಲ, ಬದಲಿಗೆ ಪಡೀಲ್ ಬೈಪಾಸ್ ಮಾರ್ಗವನ್ನು ಬಳಸಿಕೊಂಡು ಹಾದುಹೋಗಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.
ಪ್ರಸ್ತಾವಿತ ಮಾರ್ಗಗಳು ಮತ್ತು ವೇಳಾಪಟ್ಟಿ:
- ಯಶವಂತಪುರದಿಂದ ಮಡಗಾಂವ್: ಬೆಳಿಗ್ಗೆ 6:05 ಕ್ಕೆ ಯಶವಂತಪುರದಿಂದ ಹೊರಟು ಸಂಜೆ 7:15 ಕ್ಕೆ ಮಡಗಾಂವ್ ಆಗಮಿಸಲಿದೆ. ಇನ್ನು ಈ ರೈಲು ಸುಮಾರು 13 ಗಂಟೆ 10 ನಿಮಿಷಗಳು ಸಂಚಾರ ಮಾಡಲಿದೆ.
- ಮಡಗಾಂವ್‌ನಿಂದ ಯಶವಂತಪುರ: ಮಡಗಾಂವ್‌ನಿಂದ ಬೆಳಿಗ್ಗೆ 5:30 ಕ್ಕೆ ಹೊರಟು, ಸಂಜೆ 6:40 ರ ವೇಳೆಗೆ ಯಶವಂತಪುರಕ್ಕೆ ತಲುಪಲಿದೆ ಎನ್ನಲಾಗಿದೆ.
ಎಲ್ಲೆಲ್ಲಿ ನಿಲುಗಡೆ ಹೊಂದಿದೆ?
ಇನ್ನು ಈ ವಂದೇ ಭಾರತ್ ರೈಲು, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಪಡೀಲ್, ತೋಕೂರು, ಉಡುಪಿ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರಲಿದೆ ಎಂದು ವರದಿಗಳು ತಿಳಿಸಿದೆ. ಆದ್ರೆ ಈ ರೈಲು ಮಂಗಳೂರು ನಗರದ ಮುಖ್ಯ ನಿಲ್ದಾಣಗಳಲ್ಲಿ ನಿಲುಗಡೆ ಭಾಗ್ಯ ಹೊಂದಿಲ್ಲದಿರುವುದು ಮಂಗಳೂರು ಪ್ರದೇಶದ ಪ್ರಯಾಣಿಕರಿಗೆ ಮತ್ತೆ ನಿರಾಸೆಯನ್ನುಂಟುಮಾಡಿದೆ.
ಇದೀಗ ಈ ನಿರ್ಧಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ನಗರದ ರೈಲು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಮಂಗಳೂರನ್ನು ಬಿಟ್ಟುಬಿಡುವುದು ಕರಾವಳಿ ಪ್ರಯಾಣಿಕರಿಗೆ ಅನ್ಯಾಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಹರಿದಾಡುತ್ತಿದೆ. ಕೆಲವರು ಇದನ್ನು ಗೋವಾ ಲಾಬಿಯ ಪ್ರಭಾವ ಎಂದು ಆರೋಪಿಸುತ್ತಿದ್ದಾರೆ.
ಇತ್ತೀಚೆಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕರಾವಳಿ ವಂದೇ ಭಾರತ್ ರೈಲಿನ ಬಗ್ಗೆ ಘೋಷಣೆ ಮಾಡಿದ್ದ ಬೆನ್ನಲ್ಲೇ ಈ ಪ್ರಸ್ತಾಪ ಬಂದಿದೆ. ಹಾಸನ-ಮಂಗಳೂರು ವಿಭಾಗದ ವಿದ್ಯುದೀಕಣ ಪೂರ್ಣಗೊಂಡ ಬೆನ್ನಲ್ಲೇ ಈ ಸೇವೆ ಆರಂಭವಾಗುವ ನಿರೀಕ್ಷೆಯಿತ್ತು. ಆದರೆ ಈ ಮಧ್ಯೆ ಮಂಗಳೂರು ಜನರಿಗೆ ನಿರಾಸೆಯ ಸುದ್ದಿ ಬಂದಿದೆ ಎನ್ನಲಾಗುತ್ತಿದೆ. ಆದ್ರೆ ಮುಂದಿನ ದಿನಗಳಲ್ಲಿ ನಿರ್ಧಾರ ಯಾವ ರೀತಿ ಬದಲಾಗುತ್ತೆ ಎಂದು ಕಾದು ನೋಡಬೇಕಿದೆ.


Click it and Unblock the Notifications