ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಸಾಮಾನ್ಯವಾಗಿ ರಸ್ತೆ ತುಂಬೆಲ್ಲಾ ವಾಹನಗಳೇ ತುಂಬಿ ತುಳುಕುತ್ತಿರುತ್ತದೆ. ಎಷ್ಟೇ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತಂದರೂ, ಸಂಚಾರ ದಟ್ಟಣೆ ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಇನ್ನು ಯಾವುದೇ ಕಾರ್ಯಕ್ರಮ, ಜಾತ್ರೆಗಳಿದ್ದಾಗ ಕೇಳೋದೆ ಬೇಡ. ಈ ಸಂದರ್ಭದಲ್ಲಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ (Traffic Problem) ಇದ್ದೇ ಇರುತ್ತದೆ. ಇದೀಗ ಬೆಂಗಳೂರಿನ ಈ ಪ್ರದೇಶದ ಜನರಿಗೆ ಶಾಕಿಂಗ್ ನ್ಯೂಸ್ ಒಂದಿದೆ. ಇನ್ನು ಮೂರು ದಿನ ಈ ರಸ್ತೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಬೆಂಗಳೂರಿನ ವರ್ತೂರು ಮತ್ತು ವೈಟ್‌ಫೀಲ್ಡ್ ಪ್ರದೇಶದಲ್ಲಿ ಶ್ರೀ ಚನ್ನರಾಯಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ಟ್ರಾಫಿಕ್ ನಿರ್ಬಂಧಗಳನ್ನು ಘೋಷಿಸಲಾಗಿದೆ. ಜನವರಿ 25-27, 2026 ರಂದು ವರ್ತೂರು ಮತ್ತು ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ಶ್ರೀ ಚನ್ನರಾಯಸ್ವಾಮಿ ಜಾತ್ರೆ, ರಥೋತ್ಸವ, ದೀಪೋತ್ಸವ, ಕರಗ, ಪಲ್ಲಕ್ಕಿ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಆದ್ದರಿಂದ ಈ ಪ್ರದೇಶಕ್ಕೆ ಹೋಗುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮೊದಲೇ ಪ್ಲಾನ್ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಲಾಗಿದೆ.
ಉತ್ಸವ ಹಿನ್ನೆಲೆ, ಸಂಚಾರ ನಿರ್ಬಂಧ!
ವೈಟ್‌ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯ ವರ್ತೂರಿನಲ್ಲಿ ಈ ಉತ್ಸವಗಳು ಜರುಗಲಿವೆ. ಈ ಹಿನ್ನೆಲೆ ಸಾರ್ವಜನಿಕ ಸುರಕ್ಷತೆ ಹಾಗೂ ವಾಹನ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ವರ್ತೂರು, ಗುಂಜೂರು ಮತ್ತು ವೈಟ್‌ಫೀಲ್ಡ್ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ದಟ್ಟಣೆ ತಗ್ಗಿಸಲು ಸಣ್ಣ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ:
ಗುಂಜೂರಿನಿಂದ ವೈಟ್‌ಫೀಲ್ಡ್ ಕಡೆಗೆ ಹೋಗುವವರು ಶ್ರೀರಾಮ ದೇವಸ್ಥಾನದ ಬಳಿ ಬಲಕ್ಕೆ ತಿರುವು ಪಡೆಯಬೇಕು. ನಂತರ ಹಲಸಹಳ್ಳಿ ರಸ್ತೆ, ಮಾದುರನಗರ, ಸೊರಹುಣಸೆ, ವಾಲೆಪುರ, ವರ್ತೂರು ಸರ್ಕಾರಿ ಕಾಲೇಜು ರಸ್ತೆ ಮೂಲಕ ಹೋಗಬೇಕು.
ವೈಟ್‌ಫೀಲ್ಡ್‌ನಿಂದ ಗುಂಜೂರು ಕಡೆಗೆ ಸಾಗುವವರು ಇಮ್ಮಡಿಹಳ್ಳಿ-ವಾಲೆಪುರ-ಸೊರಹುಣಸೆ, ಮಾದುರನಗರ ಮಾರ್ಗವಾಗಿ ಗುಂಜೂರು, ವರ್ತೂರು ಪೊಲೀಸ್ ಠಾಣೆ ಮೂಲಕ ಹೋಗಬೇಕು. ಗುಂಜೂರಿನಿಂದ ಕುಂದಲಹಳ್ಳಿ, ಮಾರತ್ತಹಳ್ಳಿ ಕಡೆಗೆ ಪ್ರಯಾಣ ಮಾಡುವವರು ಗುಂಜೂರು ಕೆಎಫ್‌ಸಿ ರಸ್ತೆ, ಪಣತ್ತೂರು ರೈಲ್ವೇ ಸೇತುವೆ, ವಿಬ್‌ಗಯಾರ್ ಶಾಲಾ ರಸ್ತೆಯನ್ನು ಬಳಸಬೇಕು.
ಭಾರೀ ಸರಕು ವಾಹನಗಳ (HGVs) ಮಾರ್ಗಗಳಿಗೆ ಬೇರೆ ದಾರಿ:
ಹೊಸಕೋಟೆಯಿಂದ ಹೊರಡುವವರು ಹೋಪ್‌ಫಾರ್ಮ್ ಜಂಕ್ಷನ್ ಮೂಲಕ ಚನ್ನಸಂದ್ರ ರಸ್ತೆ, ವರ್ತೂರು ಕೋಡಿ ಮಾರ್ಗವಾಗಿ ಸರ್ಜಾಪುರಕ್ಕೆ ಹೋಗಬೇಕು. ಸರ್ಜಾಪುರದಿಂದ ಬರುವವರು ಚಿಕ್ಕತಿರುಪತಿ, ದೊಮ್ಮಸಂದ್ರ, ಕೊಡತಿ ಮತ್ತು ಬೆಳ್ಳಂದೂರು ಮಾರ್ಗಗಳಲ್ಲಿ ಸಂಚರಿಸುವಂತೆ ಸಲಹೆ ನೀಡಬೇಕು.
ಗುಂಜೂರು ಡಿಪೋ-41 ರಿಂದ ಗುಂಜೂರು-ವರ್ತೂರು ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ಹೊಸಹಳ್ಳಿ, ಮಾದುರನಗರ, ವರ್ತೂರು, ನೆರಿಗೆ ರಸ್ತೆ ಮೂಲಕ ಸಂಚರಿಸಲಿವೆ.
ಬೆಂಗಳೂರು ನಗರ, ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಹೇಲ್ ಬಾಗ್ಲಾ (IPS) ಅವರು ಈ ಸಂಚಾರ ಸಲಹೆ ಹೊರಡಿಸಿದ್ದು, ಉತ್ಸವದ ವೇಳೆ ಸಾರ್ವಜನಿಕರು ಸಹಕರಿಸಿ, ಸಂಚಾರ ನಿಯಮ ಪಾಲಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ.


Click it and Unblock the Notifications