ಕಾಸರಗೋಡು: ಸಾಮಾನ್ಯವಾಗಿ ಜನವರಿಯಲ್ಲಿ ಧನುರ್ಮಾಸ, ಮಕರ ಸಂಕ್ರಾಂತಿ ಆಚರಣೆಯ ಹಿನ್ನೆಲೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಅಲ್ಲದೇ ಮೀನು, ಮಾಂಸದ ಬೇಡಿಕೆ ಕಡಿಮೆಯಾಗುತ್ತದೆ (Price Decrease). ಅಲ್ಲದೇ ವಿಶೇಷವಾಗಿ ಈ ಸಂದರ್ಭದಲ್ಲಿ ತರಕಾರಿ ಬೆಲೆ (Vegetables Price) ಕೂಡಾ ಗಗನಕ್ಕೇರುತ್ತದೆ. ಆದರೆ ಇದೀಗ ತರಕಾರಿ ಬೆಲೆ ಏರಿಕೆ ಕಂಡಿದೆ. ಅದರ ಜೊತೆಗೆ ಮೀನು, ಕೋಳಿ ಮಾಂಸದ (Chicken Meat) ಬೆಲೆಯೂ ಭಾರೀ ಏರಿಕೆಯಾಗಿದೆ. ತರಕಾರಿ, ಮಾಂಸದ ಬೆಲೆ ನೋಡಿ ಗ್ರಾಹಕರು ಸದ್ಯ ಕಂಗಾಲಾಗಿದ್ದಾರೆ.

ಜನರ ನಿತ್ಯ ಬದುಕಿನಲ್ಲಿ ಆಹಾರಕ್ಕೆ ಪ್ರಧಾನ ಸ್ಥಾನವಿದೆ. ಆದ್ದರಿಂದ ಅಗತ್ಯ ವಸ್ತುಗಳ ಬೇಡಿಕೆ ಹೆಚ್ಚಾದಂತೆ, ಬೆಲೆ ಕೂಡಾ ಏರಿಕೆಯಾಗೋದು ಸಾಮಾನ್ಯ. ಆದರೆ ಈ ವರ್ಷ ದಾಖಲೆ ಪ್ರಮಾಣದಲ್ಲಿ ತರಕಾರಿ, ಮೊಟ್ಟೆ, ಮೀನು, ಕೋಳಿ ಮಾಂಸಗಳ ಬೆಲೆ ಏರಿಕೆ ಕಂಡಿದ್ದು ವಿಶೇಷವೇ ಸರಿ.
ದಿಢೀರ್ ಗಗನಕ್ಕೆ ಹಾರಿದ ಮೀನು!
ಹೌದು, ನೀರಿನಲ್ಲಿ ಈಜಾಡುತ್ತಿದ್ದ, ಮೀನು ಒಮ್ಮೆಲೆ ಹಾರಿದರೆ ಹೇಗೆ ಅಚ್ಚರಿಯಾಗುತ್ತೋ, ಅದೇ ರೀತಿ ಬೆಲೆಯಿಂದಾಗಿ ಜನರೂ ಶಾಕ್ ಆಗಿದ್ದಾರೆ. ಡಿಸೆಂಬರ್‌ನಲ್ಲಷ್ಟೇ ಇಳಿಕೆ ಕಂಡಿದ್ದ ಮೀನಿನ ಬೆಲೆ, ಕ್ರಿಸ್‌ಮಸ್ ಹತ್ತಿರವಾಗುತ್ತಿದ್ದಂತೆ ದಿಢೀರ್ ಏರಿಕೆ ಕಂಡಿತ್ತು. ಅದರಲ್ಲೂ 1 ಕೆಜಿಗೆ 100 ರಿಂದ 150 ರೂ.ಗೆ ಸಿಗುತ್ತಿದ್ದ ಬೂತಾಯಿ ಮೀನಿನ ದರ ಇಂದು 250 ರೂ.ಗಿಂತಲೂ ಹೆಚ್ಚು ಏರಿಕೆಯಾಗಿದೆ. ಇನ್ನು ಸಿಗಡಿ ಬೆಲೆ ಕೆಜಿಗೆ 500 ರೂ., ಏಡಿ ಬೆಲೆ 400 ರೂ.ಗೆ ತಲುಪಿದೆ. ಇನ್ನು ಜನರ ನೆಚ್ಚಿನ ಬಂಗುಡೆ ಮೀನು ಹಿಂದೆ ಬರೀ 150 ರೂ.ಗೆ ಸಿಗುತ್ತಿತ್ತು. ಆದ್ರೆ ಇಂದು ಅದೇ ಬಂಗುಡೆ ಮೀನಿನ ಬೆಲೆ 260 ರೂ. ಗಡಿದಾಟಿದೆ. ಈ ಮೂಲಕ ಪ್ರತೀ ಮೀನಿನಲ್ಲಿ 100 ರೂ. ಹೆಚ್ಚಾದಂತೆ ಆಗಿದೆ.
ಇಳಿಕೆ ಕಾಣದ ಚಿಕನ್, ಮೊಟ್ಟೆ!
ಇನ್ನು ಡಿಸೆಂಬರ್ ಜನವರಿ ಆರಂಭವಾದ್ರೆ ಸಾಕು ಮೊಟ್ಟೆ, ಚಿಕನ್, ಮೀನಿಗೆ ಡಿಮ್ಯಾಂಡ್ ಕಡಿಮೆಯಾಗುತ್ತೆ. ಅಲ್ಲದೇ ಈ ಸಂದರ್ಭದಲ್ಲಿ ಬೆಲೆ ಕೂಡಾ ಇಳಿಕೆಯಾಗುತ್ತೆ. ಆದರೆ ಈ ಬಾರಿ ಡಿಸೆಂಬರ್ ಮೊದಲ ವಾರದಲ್ಲ ಏರಿಕೆಯಾಗಿದ್ದ ಚಿಕನ್ ಮತ್ತು ಕೋಳಿ ಮೊಟ್ಟೆ ಬೆಲೆ ಇನ್ನೂ ಇಳಿಕೆಯಾಗುತ್ತಿಲ್ಲ. ಕಳೆದ ವಾರ ಬೆಂಗಳೂರಿನ ರಿಟೇಲ್ ಶಾಪ್‌ವೊಂದರಲ್ಲಿ ಒಂದು ಕೆಜಿ ಕೋಳಿ ಮಾಂಸಕ್ಕೆ 300 ರೂ. ಇತ್ತು. ಇನ್ನು ಮೊಟ್ಟೆ ಬೆಲೆ 8 ರೂ.ಗೆ ತಲುಪಿದೆ. ಅದೇ ಹೋಲ್ ಸೇಲ್ ಶಾಪ್‌ಗೆ ಹೋದರೆ 7.50ರ ಅಂದಾಜಿನಲ್ಲಿ ಮೊಟ್ಟೆ ನೀಡುತ್ತಾರೆ.
ತರಕಾರಿ ಬೆಲೆಯೂ ಏರಿಕೆ!
ಅತ್ತ ಮಕರ ಸಂಕ್ರಾಂತಿ, ಧನುರ್ಮಾಸ, ಶಬರಿಮಲೆ ಯಾತ್ರೆ ಹಿನ್ನೆಲೆ ತರಕಾರಿ ಬೆಲೆಗಳು ಏರಿಕೆ ಕಂಡಿದೆ. ಒಂದು ಕಾಲದಲ್ಲಿ ಕೆಜಿಗೆ 10 ರೂ. ಇದ್ದ ಟೊಮೆಟೋ ಬೆಲೆ ಇಂದು 60 ರೂ.ಗೆ ತಲುಪಿದೆ. ಅದರಲ್ಲೂ ನುಗ್ಗೆಕಾಯಿಯಂತೂ ಮಾರುಕಟ್ಟೆಯಲ್ಲಿ ಸಿಗುತ್ತಲೇ ಇಲ್ಲ. ಒಂದು ಕಡೆ ಎಲ್ಲವೂ ಅಗತ್ಯ, ಒಂದು ಕಡೆ ಎಲ್ಲವೂ ದುಬಾರಿ. ಈ ಬೆಲೆ ಏರಿಕೆಯ ನಡುವೆ ಸಾಮಾನ್ಯ ಜನರು ಕಂಗಾಲಾಗಿಬಿಟ್ಟಿದ್ದಾರೆ.


Click it and Unblock the Notifications