ಎಚ್‌ಎಸ್‌ಆರ್‌ಪಿ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಹಗರಣದಲ್ಲಿ 700 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ವಾಹನ ಮಾಲೀಕರು ಕರ್ನಾಟಕ ಲೋಕಾಯುಕ್ತಕ್ಕೆ ಬುಧವಾರ ದೂರು ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಎಚ್‌ಎಸ್‌ಆರ್‌ಪಿ ತಯಾರಕರು ವಾಹನ ಮಾಲೀಕರಿಂದ ತಯಾರಕರು ಮತ್ತು ಡೀಲರ್‌ಗಳಿಗೆ ವಿಧಿಸುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಎಚ್‌ಎಸ್‌ಆರ್‌ಪಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಪ್ರಮುಖ ಯೋಜನೆಯಾಗಿದೆ. ಇದು ಅಲ್ಯೂಮಿನಿಯಂ ನಂಬರ್ ಪ್ಲೇಟ್ ಆಗಿದೆ. ಇದು ವಾಹನದ ಮೇಲೆ ಕನಿಷ್ಠ ಎರಡು ಮರುಬಳಕೆ ಮಾಡಲಾಗದ ಸ್ನ್ಯಾಪ್-ಆನ್ ಲಾಕ್‌ಗಳಿಂದ ಫಿಕ್ಸ್ ಆಗಿರುತ್ತದೆ. ವಿವಿಧ ಗುರುತಿಸಬಹುದಾದ ಫೀಚರ್‌ಗಳನ್ನು ಹೊಂದಿದೆ.

ನಾಲ್ಕು ಚಕ್ರಗಳ ವಾಹನಕ್ಕೆ 778 ರೂಪಾಯಿ ಮತ್ತು ದ್ವಿಚಕ್ರ ವಾಹನಗಳಿಗೆ 525 ರೂಪಾಯಿಯನ್ನು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ ಲಿಂಕ್ ಮೂಲಕ ಎಚ್‌ಎಸ್‌ಆರ್‌ಪಿ ತಯಾರಕರು ಸಂಗ್ರಹಿಸುತ್ತಾರೆ ಎಂದು ವರದಿ ಹೇಳುತ್ತದೆ.
ಆದರೆ ಎಚ್‌ಎಸ್‌ಆರ್‌ಪಿ ತಯಾರಕರು ವಾಹನ ತಯಾರಕರಿಗೆ ನಾಲ್ಕು ಚಕ್ರದ ವಾಹನಕ್ಕೆ 519 ರೂಪಾಯಿ ಮತ್ತು ದ್ವಿಚಕ್ರ ವಾಹನಗಳಿಗೆ 236 ರೂಪಾಯಿಗೆ ನಂಬರ್ ಪ್ಲೇಟ್‌ಗಳನ್ನು ಪೂರೈಸುತ್ತಾರೆ ಎಂದು ದೂರುದಾರರು ಹೇಳುತ್ತಾರೆ. "ಚ್‌ಎಸ್‌ಆರ್‌ಪಿಗಳನ್ನು ದುಬಾರಿ ಬೆಲೆಗೆ ಖರೀದಿಸಲು ಸಾರಿಗೆ ಇಲಾಖೆಯು ಸಾರ್ವಜನಿಕರ ಮೇಲೆ ಕಾನೂನುಬಾಹಿರವಾಗಿ ಒತ್ತಡ ಹೇರಿದೆ," ಎಂದು ದೂರಿದ್ದಾರೆ.
ಜನವರಿ 1, 2023 ರಂದು, ನಾಲ್ಕು ಎಚ್‌ಎಸ್‌ಆರ್‌ಪಿ ತಯಾರಕರು ಈಗಿರುವ ಬೆಲೆಗಿಂತ ಕಡಿಮೆ ಬೆಲೆಯನ್ನು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ, ಕಾರು ಮಾಲೀಕರಿಗೆ ಎಚ್‌ಎಸ್‌ಆರ್‌ಪಿಯ ವೆಚ್ಚವು ವಾಹನ ತಯಾರಕರಿಗೆ ಘೋಷಿಸಿದ ಎಚ್‌ಎಸ್‌ಆರ್‌ಪಿ ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದು ವಾದಿಸಿದ್ದಾರೆ.
ಆದರೂ ದೂರುದಾರರು, "ಉತ್ಪನ್ನವನ್ನು ಕಡಿಮೆ ಬೆಲೆಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಸತ್ಯವನ್ನು ತಿಳಿದ ನಂತರ, ಸರ್ಕಾರವು ಕೆಲವು ಎಚ್‌ಎಸ್‌ಆರ್‌ಪಿ ತಯಾರಕರಿಗೆ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಲು ಅನುಮತಿ ನೀಡಿದೆ. ಇದರಿಂದಾಗಿ 700 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಭ್ರಷ್ಟಾಚಾರ ನಡೆದಿದೆ," ಎಂದು ಆರೋಪಿಸಿದ್ದಾರೆ.
ನಿಯಮ ಉಲ್ಲಂಘನೆ ಆರೋಪ
ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 ರ ನಿಯಮ 50 ಮತ್ತು ಮೋಟಾರು ವಾಹನಗಳ (ಹೈ ಸೆಕ್ಯುರಿಟಿ ನೋಂದಣಿ ಫಲಕಗಳು) ಆದೇಶ, 2018 ರ ಷರತ್ತು 4 ರಿಂದ 6 ರ ಪ್ರಕಾರ, ಎಚ್‌ಎಸ್‌ಆರ್‌ಪಿಗಳ ಫಿಟ್‌ಮೆಂಟ್ ಅನ್ನು ಆವರಣದಲ್ಲಿ ನಡೆಸಲಾಗುವುದು ಎಂದು ದೂರುದಾರರು ಹೇಳಿದರು. ವಾಹನ ತಯಾರಕರ ವಿತರಕರು ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಲು ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದರು.
ಆದರೆ ಸಾರಿಗೆ ಇಲಾಖೆಯು ಎಚ್‌ಎಸ್‌ಆರ್‌ಪಿ ತಯಾರಕರಿಗೆ ಡೀಲರ್‌ಗಳ ಆವರಣದ ಹೊರಗೆ ಎಚ್‌ಎಸ್‌ಆರ್‌ಪಿ ಫಿಟ್‌ಮೆಂಟ್ ಮಾಡಲು ಅನುಮತಿ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದೆ. ಇದು ಭದ್ರತಾ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಎಚ್‌ಎಸ್‌ಆರ್‌ಪಿ ತಯಾರಕರು ನಂಬರ್ ಪ್ಲೇಟ್‌ನಲ್ಲಿ ಏನಾದರೂ ಫ್ಯಾನ್ಸಿಯಾಗಿ ಮಾಡಬೇಕಾದರೆ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಲು ಸರ್ಕಾರವು ಅವಕಾಶ ನೀಡಿದೆ. ಬಳಕೆದಾರರು ಸಾರಿಗೆ ಇಲಾಖೆಯ ವೆಬ್‌ಸೈಟ್‌ನ ಲಿಂಕ್ ಕ್ಲಿಕ್ ಮಾಡಿದರೆ ಅದು ಎಚ್‌ಎಸ್‌ಆರ್‌ಪಿಯ ವೆಬ್‌ಸೈಟ್‌ಗೆ ರಿಡೈರೆಕ್ಟ್ ಆಗುವಂತೆ ಟ್ಯಾಂಪರಿಂಗ್ ಮಾಡಲಾಗಿದೆ ಎಂದು ಕೂಡಾ ಆರೋಪ ಮಾಡಿದ್ದಾರೆ.
ಇನ್ನು 2019 ರ ಮೊದಲು ನೋಂದಾಯಿಸಲಾದ ವಾಹನಗಳಿಗೆ ಎಚ್‌ಆರ್‌ಎಸ್‌ಪಿಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಳೆಯ ನಂಬರ್ ಪ್ಲೇಟ್‌ಗಳನ್ನು ವಾಹನ ಕಳ್ಳರು ಟ್ಯಾಂಪರ್ ಮಾಡಬಾರದು ಮತ್ತು ದುರುಪಯೋಗಪಡಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲಿ 2019 ರ ಮೊದಲು ಸುಮಾರು 2 ಕೋಟಿ ವಾಹನಗಳು ನೋಂದಣಿಯಾಗಿವೆ.


Click it and Unblock the Notifications