ಚೆನ್ನೈ, ನ. 18: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಶಕೆ ಆರಂಭವಾಗಿದೆ. ಇಸ್ರೋದ ಶ್ರೀಹರಿಕೋಟಾದಿಂದ ವಿಕ್ರಮ್-ಎಸ್ ರಾಕೆಟ್ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಇದು ಭಾರತದಿಂದ ಖಾಸಗಿಯಾಗಿ ಉಡಾವಣೆಯಾದ ಮೊದಲ ರಾಕೆಟ್ ಆಗಿದೆ. ಇದರೊಂದಿಗೆ ಮಿಷನ್ ಪ್ರಾರಂಭ್ ಶುಭಾರಂಭ ಮಾಡಿದೆ.
ಎರಡು ವರ್ಷಗಳ ಹಿಂದಷ್ಟೇ ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರಿಗೆ ಮುಕ್ತಗೊಳಿಸಲಾಗಿತ್ತು. ಹಲವು ಸಂಸ್ಥೆಗಳು ಈಗ ಬಾಹ್ಯಾಕಾಶ ಯೋಜನೆಗಳಲ್ಲಿ ತೊಡಗಿಸಿಕೊಂಡಿವೆ. ಮೊದಲ ಖಾಸಗಿ ರಾಕೆಟ್ ಅನ್ನು ಆಗಸಕ್ಕೆ ಕಳುಹಿಸಿದ ಶ್ರೇಯಸ್ಸು ಈಗ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಗೆಸೇರಿದೆ.
ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ಎಂದು ಪರಿಗಣಿಸಲಾದ ವಿಕ್ರಮ್ ಸಾರಾಭಾಯಿ ಅವರ ಹೆಸರನ್ನು ಸ್ಕೈರೂಟ್ ಏರೋಸ್ಪೇಸ್ ತನ್ನ ಮೊದಲ ರಾಕೆಟ್‌ಗೆ ಇಟ್ಟಿದೆ. ಅದೇ ರೀತಿ ವಿಕ್ರಮ್ ಸರಣಿಯ ಇತರ ರಾಕೆಟ್‌ಗಳನ್ನು ಸ್ಕೈರೂಟ್ ಅಭಿವೃದ್ಧಿಪಡಿಸುತ್ತಿದೆ.
ವಿಕ್ರಮ್ ವಿಶೇಷತೆ
ವಿಕ್ರಮ್-ಎಸ್ ಸೇರಿದಂತೆ ಸರಣಿ ರಾಕೆಟ್‌ಗಳು 290ರಿಂದ 560 ಕಿಲೋ ಪೇಲೋಡ್‌ವರೆಗೂ ತೂಕದ ವಸ್ತುಗಳನ್ನು ಹೊತ್ತು ಹೋಗಬಲ್ಲುದು. ಹಾಗೆಯೇ ವಿಕ್ರಮ್ ರಾಕೆಟ್ ಭಾರತದ ಮೊದಲ ಖಾಸಗಿ ರಾಕೆಟ್ ಎಂಬ ಹೆಸರು ಮಾಡಿರುವುದಲ್ಲದೇ ಇನ್ನೂ ಹಲವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಇದರ ಕ್ರಯೋಜೆನಿಕ್ ಎಂಜಿನ್‌ಗೆ ಇಂಧನವಾಗಿ ಎಲ್‌ಎನ್‌ಜಿಯನ್ನು ಬಳಸಲಾಗುತ್ತದೆ. ಭಾರತದಲ್ಲಿ ಈ ರೀತಿ ಎಲ್‌ಎನ್‌ಜಿ ಇಂಧನ ಚಾಲಿತ ಮೊದಲ ಕ್ರಯೋಜೆನಿಕ್ ಎಂಜಿನ್ ರೂಪಿಸಿದ್ದು ಇದೇ ಮೊದಲು. ಈ ಕ್ರಯೋಜೆನಿಕ್ ಎಂಜಿನ್‌ಗೆ ಧವನ್ ಹೆಸರಿಡಲಾಗಿದೆ. ಇದು ವಿಜ್ಞಾನಿ ಸತೀಶ್ ಧವನ್‌ಗೆ ಗೌರವಾರ್ಥವಾಗಿ ಇಡಲಾಗಿರುವ ಹೆಸರು.
ರಾಕೆಟ್-ಎಸ್ ಥ್ರೀಡಿ ಪ್ರಿಂಟೆಡ್ ಸಾಲಿಡ್ ಥ್ರಸ್ಟರ್ಸ್ ಹೊಂದಿರುವ ಕಾಂಪೋಸಿಟ್ ರಾಕೆಟ್ ಆಗಿದೆ. ವಿಶ್ವದಲ್ಲಿ ಕೆಲವೇ ಇಂಥ ರಾಕೆಟ್‌ಗಳಿವೆ. ಈ ಶ್ರೇಯಸ್ಸು ಸ್ಕೈರೂಟ್ ಏರೋಸ್ಪೇಸ್‌ಗೆ ಸಲ್ಲಬೇಕು.
ವಿಕ್ರಮ್ ಎಸ್ ಹೊಣೆ
ವಿಕ್ರಮ್ ಎಸ್ ರಾಕೆಟ್ ಬಳಿ ಮೂರು ಪೇಲೋಡ್‌ಗಳಿವೆ. ಆಂಧ್ರಪ್ರದೇಶದ ಎನ್ ಸ್ಪೇಸ್ ಟೆಕ್ ಇಂಡಿಯಾದ ಒಂದು ಸೆಟಿಲೈಟ್, ಚೆನ್ನನ ಸ್ಟಾರ್ಟಪ್ ಸ್ಪೇಸ್ ಕಿಡ್ಸ್ ಮತ್ತು ಆರ್ಮೇನಿಯಾ ದೇಶದ ಬಾಜೂಮ್‌ಕ್ಯೂ ಸ್ಪೇಸ್ ರೀಸರ್ಚ್ ಲ್ಯಾಬ್‌ನ ಒಂದು ಸೆಟಿಲೈಟ್ ಹೀಗೆ ಮೂರು ಪೇಲೋಡ್‌ಗಳನ್ನು ವಿಕ್ರಮ್ ಎಸ್ ಹೊತ್ತು ಸಾಗಿದೆ. ಈ ರಾಕೆಟ್ ಆಗಸಕ್ಕೆ ಚಿಮ್ಮಿ 81 ಕಿಮೀ ಎತ್ತರದವರೆಗೂ ಹೋಗಲಿದೆ. ಭೂಮಿಯ ಕೆಳ ಕಕ್ಷೆಗೆ ಈ ಮೂರು ಪೇಲೋಡ್‌ಗಳನ್ನು ಸೇರಿಸುವ ಜವಾಬ್ದಾರಿ ರಾಕೆಟ್‌ನದ್ದಾಗಿದೆ.
ಖಾಸಗಿ ಬಾಹ್ಯಾಕಾಶ ಕಂಪನಿಗಳೆಷ್ಟು?
2020ರಲ್ಲಿ ಕೇಂದ್ರ ಸರ್ಕಾರ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಲು ಖಾಸಗಿಯವರಿಗೂ ಅವಕಾಶ ನೀಡಿತು. ರಾಕೆಟ್, ಸೆಟಿಲೈಟ್, ಪೇಲೋಡ್, ಗ್ರೌಂಡ್ ಸ್ಟೇಷನ್ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು 150 ಖಾಸಗಿ ಕಂಪನಿಗಳು ಮುಂದೆ ಬಂದಿವೆ.
ಇಸ್ರೋ ಈಗಾಗಲೇ ತನ್ನ ಕಮರ್ಷಿಯ್ ವಿಭಾಗವಾದ ಆಂಟ್ರಿಕ್ ಕಾರ್ಪೊರೇಷನ್ ಎಂಬ ಕಂಪನಿಯನ್ನು ಹೊಂದಿದೆ. ಇದು ವಿಶ್ವಾದ್ಯಂತ ಹಣಕ್ಕಾಗಿ ಸೆಟಿಲೈಟ್‌ಗಳನ್ನು ಆಗಸಕ್ಕೆ ಕಳುಹಿಸುವ ಕಾರ್ಯದಲ್ಲಿ ತೊಡಗಿದೆ. ಗೋದ್ರೇಜ್, ಎಲ್ ಅಂಡ್ ಟಿ, ಅಗ್ನಿಕುಲ್ ಕಾಸ್ಮೋಸ್, ಬೆಲಾಟ್ರಿಕ್ಸ್ ಏರೋಸ್ಪೇಸ್, ಧ್ರುವ ಸ್ಪೇಸ್, ಪಿಕ್ಸೆಲ್, ಸೆಟಿಲೈಜ್, ಸ್ಕೈರೂಟ್ ಏರೋಸ್ಪೇಸ್, ಮನಾಸ್ತು ಸ್ಪೇಸ್ ಹೀಗೆ ಹಲವು ಖಾಸಗಿ ಕಂಪನಿಗಳು ಬಾಹ್ಯಾಕಾಶ ಯೋಜನೆಗಳಲ್ಲಿ ತೊಡಗಿವೆ. ಈ ಮುಂಚೆಯೂ ಇಸ್ರೋದ ಬಾಹ್ಯಾಕಾಶ ಯೋಜನೆಗಳಲ್ಲಿ ನೂರಾರು ಖಾಸಗಿ ಕಂಪನಿಗಳು ವಿವಿಧ ರೂಪದಲ್ಲಿ ಪೂರಕವಾಗಿ ಕೆಲಸ ಮಾಡಿವೆ.
ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ವಿಕ್ರಮ್ ಎಸ್ ರಾಕೆಟ್ ಉಡಾವಣೆ ಮಾಡಿದ ಮೊದಲ ಖಾಸಗಿ ಕಂಪನಿ ಎಂದು ದಾಖಲೆ ಮಾಡಿದೆ. ಇಸ್ರೋದ ಮಾಜಿ ವಿಜ್ಞಾನಿಗಳೇ ಸ್ಕೈರೂಟ್ ಏರೋಸ್ಪೇಸ್ ಅನ್ನು 2018ರಲ್ಲಿ ಸ್ಥಾಪಿಸಿದ್ದರು.
ಅಮೆರಿಕದಲ್ಲೂ ಖಾಸಗಿ
ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರ ಪಾಲುದಾರಿಕೆ ಇದೆ. ಅಮೆರಿಕದಲ್ಲಿ ನಾಸಾ ಮಾತ್ರವಲ್ಲ ಅಲ್ಲಿನ ಖಾಸಗಿ ಕಂಪನಿಗಳು ರಾಕೆಟ್‌ಗಳನ್ನು ತಯಾರಿಸುತ್ತವೆ. ಅದರಲ್ಲಿ ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಮೊದಲಾದ ಕಂಪನಿಗಳಿವೆ. ಸ್ಪೇಸ್ ಎಕ್ಸ್ ಕಂಪನಿಯ ರಾಕೆಟ್ ಅನ್ನು ನಾಸಾ ತನ್ನ ಯೋಜನೆಗಳಿಗೆ ಎರವಲು ಪಡೆಯುತ್ತದೆ. ನಾಸಾ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಅಲ್ಲಿನ ಖಾಸಗಿ ಕಂಪನಿಗಳು ಸಹಾಯಕವಾಗಿವೆ.


Click it and Unblock the Notifications