ಅದಾನಿ ಗ್ರೂಪ್ ಹಲವಾರು ವಂಚನೆಗಳನ್ನು ನಡೆಸಿದೆ ಎಂದು ಈ ಹಿಂದೆ ಜನವರಿಯಲ್ಲಿ ಹಿಂಡನ್‌ಬರ್ಗ್ ವರದಿಯೊಂದನ್ನು ಪ್ರಕಟಿಸಿದೆ. ಇದಾದ ಬಳಿಕ ಅದಾನಿ ಗ್ರೂಪ್ ಕೂಡಾ ಸ್ಪಷ್ಟಣೆಯನ್ನು ನೀಡಿದೆ. ಇವೆಲ್ಲದರ ನಡುವೆ ಈಗ ಈ ನ್ಯೂಯಾರ್ಕ್ ಮೂಲದ ಹಿಂಡನ್‌ಬರ್ಗ್ ರಿಸರ್ಚ್‌ನ ಸ್ಥಾಪಕ ನಾಥನ್ ಆಂಡರ್‌ಸನ್, ಅದಾನಿ ಗ್ರೂಪ್‌ನ ಎಲ್ಲ ಡೀಲ್‌ಗಳ ಮುಖ್ಯ ಸಂಧಾನಕಾರ ಗೌತಮ್ ಅದಾನಿಯ ಸಹೋದರ, ಉದ್ಯಮಿ ವಿನೋದ್ ಅದಾನಿ ಎಂದು ಆರೋಪ ಮಾಡಿದ್ದಾರೆ.
ಬ್ಲೂಬರ್ಗ್‌ನ ವರದಿಯೊಂದನ್ನು ಟ್ವೀಟ್ ಮಾಡಿದ ನಾಥನ್ ಆಂಡರ್‌ಸನ್, "ಅದಾನಿ ಗ್ರೂಪ್‌ನ ಎಲ್ಲ ಡೀಲ್‌ಗಳಲ್ಲಿ ವಿನೋದ್ ಅದಾನಿ ಸಂಧಾನಕಾರ ಎಂಬುವುದು ಈಗ ಸಾಬೀತಾಗಿದೆ. ಅದಾನಿ ಗ್ರೂಪ್‌ನ ಅತೀ ದೊಡ್ಡ ಸ್ವಾಧೀನಗಳಲ್ಲಿ ವಿನೋದ್ ಅದಾನಿ ಮುಖ್ಯ ಪಾತ್ರವಹಿಸಿದ್ದಾರೆ. ವಿನೋದ್ ಅದಾನಿ ಸಹೋದರ ಇದನ್ನು ನಿರಾಕರಿಸಿದರೂ, ವಿನೋದ್‌ಗೆ ಯಾವುದೇ ಅಧಿಕೃತ ಸ್ಥಾನ ಇಲ್ಲದಿದ್ದರೂ, ಈ ಸಂಸ್ಥೆಗೆ ಸಂಬಂಧಿಸಿದವರಲ್ಲವಾದರೂ ಇದು ಸತ್ಯ," ಎಂದು ನಾಥನ್ ಆಂಡರ್‌ಸನ್ ತಿಳಿಸಿದ್ದಾರೆ.

ಗ್ರೂಪ್ ಕಳೆದ ವರ್ಷ 10.5 ಬಿಲಿಯನ್ ಡಾಲರ್‌ನ 2 ಸಿಮೆಂಟ್ ಸಂಸ್ಥೆಗಳಾದ ಅಂಬುಜಾ ಸಿಮೆಂಟ್, ಎಸಿಸಿಯ ಡೀಲ್ ಮಾಡುತ್ತಿದ್ದಾಗ, ಪೋರ್ಟ್ಸ್‌ನಿಂದ ಹಿಡಿದು ಎನರ್ಜಿವರೆಗಿನ ಸಂಸ್ಥೆಗಳು, ಬ್ಯಾಂಕುಗಳು ಕೆಲವೊಂದು ಸಂಕೀರ್ಣವಾದ ಫೈಲಿಂಗ್‌ಗಳನ್ನು ಮಾಡಿದೆ ಎಂದು ಬ್ಲೂಬರ್ಗ್ ವರದಿ ಹೇಳಿದೆ. ಸಂಸ್ಥೆಯು 85 ಪುಟಗಳ ದಾಖಲೆಯನ್ನು ಸಲ್ಲಿಸಿದೆ. ಇದರಲ್ಲಿ 7 ಲೀಸ್ಟ್ ಆಗದ ಸಂಸ್ಥೆಗಳ ಡಯಾಗ್ರಮ್ ಇದೆ. ಸಂಸ್ಥೆಯು ಬ್ರಿಟಿಷ್ ಮೂಲದ ಐಸ್‌ಲ್ಯಾಂಡ್, ಮೌರಿಟ್ಸ್ ಮತ್ತು ದುಬೈನಲ್ಲಿ ರಿಜಿಸ್ಟಾರ್ ಆಗಿದೆ.
ವಿನೋದ್ ಮತ್ತು ಪತ್ನಿ ರಂಜನ್‌ಬೆನ್
ಈ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿರುವ ಸಂಸ್ಥೆಯಾಗಿದೆ. ಹಾಗೆಯೇ ಈ ಪೈಕಿ ಒಂದು ತೆರೆದ ಮಾರುಕಟ್ಟೆಯಲ್ಲಿ ಸಿಮೆಂಟ್ ಸಂಸ್ಥೆಯ ಷೇರನ್ನು ಖರೀದಿಸುತ್ತಿದೆ ಎಂದು ವರದಿ ಹೇಳಿದೆ. ಕಂಪನಿಯ ಪೇಪರ್‌ಗಳು ಬಿಲಿಯನೇರ್ ಗೌತಮ್ ಅದಾನಿ ಅವರನ್ನು ಪಟ್ಟಿ ಮಾಡದ ಏಳು ಘಟಕಗಳ ಅಂತಿಮ ಫಲಾನುಭವಿ ಎಂದು ಉಲ್ಲೇಖಿಸಿಲ್ಲ ಎಂದು ವರದಿ ಹೇಳಿದೆ. ಬದಲಾಗಿ, ಇದರ ಲಾಭ ಪಡೆಯುವ ಮಾಲೀಕರು ಗೌತಮ್ ಅದಾನಿಯ ಹಿರಿಯ ಸಹೋದರ ವಿನೋದ್ ಮತ್ತು ವಿನೋದ್ ಪತ್ನಿ ರಂಜನ್‌ಬೆನ್ ಎಂದು ಉಲ್ಲೇಖಿಸಲಾಗಿದೆ.
ಸಂಸ್ಥೆಯ ವೆಬ್‌ಸೈಟ್ ಪ್ರಕಾರ ವಿನೋದ್ ಮತ್ತು ರಂಜನ್‌ಬೆನ್ ಅದಾನಿ ಗ್ರೂಪ್‌ನ ಯಾವುದೇ ಸಂಸ್ಥೆಗಳಲ್ಲಿ ನಿರ್ವಹಣಾ ಸ್ಥಾನವನ್ನು ಹೊಂದಿಲ್ಲ. ಹಾಗೆಯೇ ಹಿರಿಯ ಅಧಿಕಾರಿಗಳ ಸ್ಥಾನದಲ್ಲಿಲ್ಲ. ಬ್ಲೂಬರ್ಗ್ ವರದಿ ಪ್ರಕಾರ ವಿನೋದ್ ಮತ್ತು ಅವರ ಪತ್ನಿ ಹೆಸರು ಸಾರ್ವಜನಿಕವಾಗಿ ಮುಚ್ಚಿಡಲಾಗಿದೆ. ಆದರೆ ಅದಾನಿ ಗ್ರೂಪ್‌ನ ಎಲ್ಲ ಡೀಲ್‌ಗಳಲ್ಲಿ ವಿನೋದ್ ಅದಾನಿ ಮುಖ್ಯ ಸಂಧಾನಕಾರರಾಗಿದ್ದಾರೆ. ಸಣ್ಣ ಸಂಸ್ಥೆಗಳು ಉತ್ತಮವಾಗಿ ವಹಿವಾಟು ನಡೆಸುವಾಗ ಅದಾನಿ ಗ್ರೂಪ್ ಹೇಗೆ ಅದನ್ನು ವಶಕ್ಕೆ ಪಡೆಯುತ್ತದೆ ಎಂದು ಕೂಡಾ ವರದಿ ವಿವರಿಸಿದೆ


Click it and Unblock the Notifications